ಸಾಗರ : ಜ್ಞಾನ ಮತ್ತು ವಿಜ್ಞಾನ ಒಟ್ಟೊಟ್ಟಿಗೆ ಹೋಗಬೇಕು. ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಒಟ್ಟಾಗಿ ಹೆಜ್ಜೆ ಹಾಕಿದಾಗ ಅಜ್ಞಾನ ದೂರವಾಗುತ್ತದೆ. ಕಾರ್ತಿಕ ಮಾಸ ಆಧ್ಯಾತ್ಮಶಕ್ತಿಯನ್ನು ಜಾಗೃತಿಗೊಳಿಸುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ತಾಲ್ಲೂಕಿನ ಮುರುಘಾಮಠದಲ್ಲಿ ಭಾನುವಾರ ಜಗದ್ಗುರು ಮುರುಘರಾಜೇಂದ್ರ ಮಹಾಸಂಸ್ಥಾನ ಮಠದಲ್ಲಿ ಕಾರ್ತಿಕ ದೀಪೋತ್ಸವ ಅಂಗವಾಗಿ ಏರ್ಪಡಿಸಿದ್ದ ಭಾವೈಕ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಲಾಗಾಯ್ತಿನಿಂದ ಮಠಮಾನ್ಯಗಳು ಧರ್ಮಜಾಗೃತಿ ಕಾರ್ಯ ನಡೆಸಿಕೊಂಡು ಬರುತ್ತಿದೆ. ಪ್ರಪಂಚದಲ್ಲಿ ಹಿಂದೂಗಳಿಗೆ ಇರುವ ಏಕೈಕ ರಾಷ್ಟ್ರವೆಂದರೆ ಅದು ಭಾರತ ಮಾತ್ರ. ಧರ್ಮ ಮತ್ತು ಸಂಸ್ಕೃತಿ ಉಳಿಯಬೇಕಾದರೆ ನಾವು ಜಾಗೃತರಾಗಿ ಧರ್ಮವನ್ನು ಕಟ್ಟುವ ಕೆಲಸ ಮಾಡಬೇಕು. ಮಠಗಳು ಧರ್ಮವನ್ನು ಪ್ರಸರಿಸುವ ಕೆಲಸ ನಿಷ್ಟೆಯಿಂದ ಮಾಡುತ್ತಿದ್ದು, ಇಂತಹ ಮಠಗಳಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು. ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಅಭಿವೃದ್ದಿಪಡಿಸಲು ಅಗತ್ಯ ಕ್ರಮ ಕೈಗೊಂಡಿದೆ. ತ್ಯಾವರೆಕೊಪ್ಪದಿಂದ ತಾಳಗುಪ್ಪವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ೯೦೦ ಕೋಟಿ ರೂ. ಬಿಡುಗಡೆಯಾಗಿದ್ದು, ಪ್ರವಾಸೋದ್ಯಮ ಅಭಿವೃದ್ದಿಗೂ ಒತ್ತು ನೀಡಲಾಗಿದೆ ಎಂದು ಹೇಳಿದರು.
ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಮುರುಘಾಮಠ ಶರಣ
ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದೆ. ಎಲ್ಲ ಜಾತಿಧರ್ಮಗಳು ಒಟ್ಟಾಗಿ ನಡೆದಾಗ ಸಾಮರಸ್ಯ ಸಾಧ್ಯವಾಗುತ್ತದೆ. ಮುರುಘಮಠಕ್ಕೆ ಮುಸ್ಲೀಂ ಸಮುದಾಯದವರು ನಡೆದುಕೊಳ್ಳುತ್ತಿರುವುದು ಸ್ವಾಗತಾರ್ಹ ಸಂಗತಿ. ಮಠದ ಅಭಿವೃದ್ದಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ. ಪ್ರಸ್ತುತ ಚಂಪಕ ಸರಸು ರಸ್ತೆ ನಿರ್ಮಾಣಕ್ಕೆ ೨೦ ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಕ್ಷೇತ್ರವ್ಯಾಪ್ತಿಯಲ್ಲಿರುವ ಎಲ್ಲ ಮಠಗಳ ಅಭಿವೃದ್ದಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತ್ವರಿತವಾಗಿ ಮುಗಿಸಲು ಒತ್ತು ನೀಡಲಾಗುತ್ತದೆ ಎಂದು ಹೇಳಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಭಾರತ ಭಾರತವಾಗಿಯೆ ಉಳಿಯಲು ಮಠಮಂದಿರಗಳು ಕಾರಣ. ಹಿಂದೂಧರ್ಮದ ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಳ್ಳುವ ತುರ್ತು ಅಗತ್ಯವಿದೆ. ಕುಂಸಿಯಲ್ಲಿ ವೀರಶೈವ ಸಮುದಾಯದವರನ್ನು ಮತಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎನ್ನುವ ಚರ್ಚೆಯಿದೆ. ಶ್ರೀಗಳು ಇಂತಹದ್ದನ್ನು ತಡೆಯಲು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಾರೆ. ಆದರೆ ಧರ್ಮ ಉಳಿಸಿಕೊಳ್ಳುವ ಬಗ್ಗೆ ಧ್ವನಿ ಎತ್ತುವುದಿಲ್ಲ ಧರ್ಮಧರ್ಮವಾಗಿ ಉಳಿಯಲು ಎಲ್ಲರೂ ಧ್ವನಿಗೂಡಿಸಬೇಕು ಎಂದು ಹೇಳಿದರು.
ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು, ಕಾಶೀ ಜಂಗಮವಾಡಿ ಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಸೆ ಕಲಾವಿದೆ ಚಿತ್ತಾರ ಲಕ್ಷ್ಮೀರಾಮಪ್ಪ ಅವರಿಗೆ ಕೆಳದಿ ರಾಣಿ ಚನ್ನಮ್ಮ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು, ಪ್ರಕಾಶ್ ರುಕ್ಮಯ್ಯ, ಅರುಣಕುಮಾರ್, ದಿನೇಶ್ ಬರದವಳ್ಳಿ ಅವರಿಗೆ ಸಮಾಜಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾವೈಕ್ಯತೆ ವಿಷಯ ಕುರಿತು ಪ್ರಾಧ್ಯಾಪಕಿ ಡಾ. ಶುಭ ಮರವಂತೆ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಕೆಎಂಎಫ್ ಅಧ್ಯಕ್ಷ ವಿದ್ಯಾಧರ, ಮಾಜಿ ಶಾಸಕ ಚಂದ್ರಶೇಖರಪ್ಪ, ಮಹಾಲಿಂಗಯ್ಯ ಶಾಸ್ತ್ರಿ, ಸುಧೀರ್, ವಿವಿಧ ಮಠಾಧೀಶರು ಹಾಜರಿದ್ದರು. ವಿದುಷಿ ವಸುಧಾ ಶರ್ಮ ಮತ್ತು ತಂಡದವರು ಪ್ರಾರ್ಥಿಸಿದರು. ಕೆ.ಎಚ್.ಜ್ಞಾನೇಶ್ವರಪ್ಪ ಸ್ವಾಗತಿಸಿದರು. ಗುಂಡಾಲಿ ಬಸವರಾಜ್ ಅಭಿನಂದನಾ ಪತ್ರ ವಾಚಿಸಿದರು. ಗಿರೀಶ್ ಬೇಸೂರು ವಂದಿಸಿದರು. ನಂತರ ಕಂಚಿನ ರಥ ದೀಪೋತ್ಸವ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.