ಶಿವಮೊಗ್ಗ: ಹಿರಿಯ ಸಾಹಿತಿ ನಾ.ಡಿಸೋಜಾ ಅವರ ಕಾದಂಬರಿ ಆಧಾರಿತ ‘ಹಕ್ಕಿ ಕಥೆ’ ಮಕ್ಕಳ ನಾಟಕವನ್ನು ಶಿವಮೊಗ್ಗ ರಂಗಾಯಣದ ಕಲಾವಿದರು ಜನವರಿ 8 ಮತ್ತು 9ರಂದು ಪ್ರದರ್ಶಿಸಲಿದ್ದಾರೆ ಎಂದು ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ ಜವಳಿ ಅವರು ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಸ್.ಮಾಲತಿಯವರು ಕಾದಂಬರಿಯನ್ನು ನಾಟಕವಾಗಿ ರೂಪಾಂತರಿಸಿದ್ದು, ನಾಟಕ ಶಿವಮೊಗ್ಗ ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸಂಜೆ 6.15ರಿಂದ ಆರಂಭವಾಗಲಿದೆ. ಈ ನಾಟಕವನ್ನು ಗಣೇಶ್ ಮಂದಾರ್ತಿ ಮತ್ತು ಶ್ರವಣ್ ಹೆಗ್ಗೋಡು ಅವರು ನಿರ್ದೇಶಿಸಿದ್ದಾರೆ.


ಪ್ರಕೃತಿಯ ಇತರ ಜೀವಿಗಳ ಸಹಜ ಬದುಕಿನ ಮೇಲೆ ಮನುಷ್ಯನ ಹಸ್ತಕ್ಷೇಪ ಎಂಥದ್ದು ಮತ್ತು ಅದಕ್ಕೆ ಪ್ರಕೃತಿ ಕೊಡುವ ತಿರುಗೇಟಿನ ಉತ್ತರ ಯಾವ ತರಹವಿರಬಹುದು ಎಂಬುದನ್ನು ಈ ನಾಟಕ ನಮಗೆ ಮನಗಾಣಿಸುತ್ತದೆ. ಪಶ್ಚಿಮ ಘಟ್ಟಗಳ ಮೇಲಾಗುವ ಮನುಷ್ಯನ ಯಂತ್ರ ದಾಳಿಗೆ ಹೆದರಿ ಹಕ್ಕಿಗಳು ಕಾಡು ಬಿಡುತ್ತವೆ. ಅಲ್ಲಿಂದ ಶುರುವಾಗುವ ಆ ಜೀವಿಗಳ ಬದುಕು ದಾರುಣವಾಗುತ್ತಾ ಬರುವ ಚಿತ್ರಣ ಈ ನಾಟಕದಲ್ಲಿದೆ. ಕಾರ್ಖಾನೆಯ ವಿಷದ ಹೊಗೆ, ಡೈನಾಮೇಟ್ಗಳ ಸ್ಫೋಟ, ಮುಳುಗಡೆಯ ಪ್ರದೇಶಗಳಿಂದಾಗುವ ಆವಾಂತರ ಹೀಗೆ ಒಂದಾದ ಮೇಲೊಂದು ಅವಘಡಗಳಿಗೆ ಸಿಲುಕಿ ಹಕ್ಕಿಗಳು ಸಾಯುತ್ತವೆ. ಕೊನೆಯಲ್ಲಿ ಮರಗಳ ಕೇಡಿಗೆ ಹೆದರಿ ಮೊಬೈಲ್ ಟವರುಗಳ ಮೇಲೆ ಗೂಡು ಕಟ್ಟುವ ಸ್ಥಿತಿ, ಮನುಷ್ಯನ ಆಧುನಿಕ ಬದುಕಿನ ಕ್ರೌರ್ಯವನ್ನು ವ್ಯಂಗ್ಯವಾಗಿ ತೋರಿಸುತ್ತದೆ. ಅಲ್ಲಿಗೂ ಬರುವ ಮನುಷ್ಯನ ಸ್ವಾರ್ಥ ಬುದ್ಧಿಗೆ ಪ್ರಕೃತಿ ತನ್ನದೇ ರೀತಿಯಲ್ಲಿ ಉತ್ತರಿಸಿ ಬಿಡುತ್ತದೆ ಎಂದು ಹೇಳಿದರು.
ಗಣರಾಜ್ಯೋತ್ಸವ ಸ್ತಬ್ಧ ಚಿತ್ರಕ್ಕೆ ರಂಗಾಯಣ ಕಲಾವಿದರ ಆಯ್ಕೆ ಈ ಬಾರಿಯ ನವದೆಹಲಿಯ ಗಣರಾಜ್ಯೋತ್ಸವ ಪೆರೆಡ್‌ನಲ್ಲಿ ಭಾಗವಹಿಸಲು ಆಯ್ಕೆಯಾಗಿರುವ ರಾಜ್ಯದ ಸ್ತಬ್ಧಚಿತ್ರದಲ್ಲಿ ಭಾಗವಹಿಸಲು ಶಿವಮೊಗ್ಗ ರಂಗಾಯಣದ ಕಲಾವಿದರು ಆಯ್ಕೆಯಾಗಿದ್ದಾರೆ ಎಂದು ಅವರು ಹೇಳಿದರು.
ಖ್ಯಾತ ಕಲಾ ನಿರ್ದೇಶಕ ಶಶಿಧರ ಅಡಪ ಅವರು ವಿನ್ಯಾಸ ಮಾಡಿರುವ ಸ್ತಬ್ಧ ಚಿತ್ರದಲ್ಲಿ ಭಾಗವಹಿಸಲು ಶಿವಮೊಗ್ಗ ರಂಗಾಯಣದ ಕಲಾವಿದರಾದ ಪ್ರಸನ್ನ ಕುಮಾರ್ ಆರ್, ನಿತಿನ್ ಡಿ.ಆರ್. ರವಿಕುಮಾರ್ ಎಸ್.ಎಮ್., ಸುಜಿತ್ ಕಾರ್ಕಳ, ಚಂದನ್ ಎನ್, ಶರತ್ ಬಾಬು ಎಂ.ಎಲ್., ಮಹಾಬಲೇಶ್ವರ್ ಬಿ.ಕೆ., ಸವಿತಾ ಆರ್ ಕಾಳಿ, ರಮ್ಯ ಆರ್., ರಂಜಿತ ಆರ್, ದೀಪ್ತಿ ಎಮ್.ಹೆಚ್., ಕಾರ್ತಿಕ ಕಲ್ಲುಕುಟಿಕರ್ ಆಯ್ಕೆಯಾಗಿದ್ದು, ಜನವರಿ 26 ರಂದು ನಡೆಯುವ ಈ ಪೆರೆಡ್‌ನಲ್ಲಿ ಕಲಾವಿದರಾಗಿ ಭಾಗವಹಿಸಲು ಜನವರಿ 10ರಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಹೇಳಿದರು.
ರಂಗಸಮಾಜದ ಸದಸ್ಯ ಹಾಲಸ್ವಾಮಿ, ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!