ಶಿವಮೊಗ್ಗ: ಅಮಾಯಕರ ಬಂಧನಕ್ಕೆ ಮುಸ್ಲಿಂ ಸಮಾಜದ ಮುಖಂಡರು ದೊಡ್ಡ ಪೇಟೆ ಠಾಣೆಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಇತ್ತೀಚೆಗೆ ಬಜರಂಗದಳದ ಕಾರ್ಯಕರ್ತನ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿ ಸಾರ್ವಜನಿಕ ವಾಹನ ಮತ್ತು ಕೆಲ ಯುವಕರ ಮೇಲೆ ಹಲ್ಲೆ ನಡೆದಿತ್ತು. ಈ ಸಂಬಂಧ ದೊಡ್ಡ ಪೇಟೆ ಹಾಗೂ ಕೋಟೆ ಪೊಲೀಸರು ವಿಚಾರಣೆಗಾಗಿ ಕೆಲ ಯುವಕರನ್ನು ನಿನ್ನೆ ತಡ ರಾತ್ರಿ ಕರೆತಂದಿದ್ದು, ಇಂದು ಆ ಯುವಕರ ಸಂಬಂಧಿಕರು ಮತ್ತು ಸಮಾಜದ ಗಣ್ಯರು ಯುವಕರ ಪರವಾಗಿ ಠಾಣೆಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ರಾತ್ರಿ 2 ಗಂಟೆಗೆ ಆಗಮಿಸಿ ಏಕಾಏಕಿ ಬಾಗಿಲು ಬಡಿದು, ಅವಾಚ್ಯ ಶಬ್ಧಗಳಿಂದ ನಿಂಧಿಸಿ ನಮ್ಮ ಕೋಮಿನ ಯುವಕರನ್ನು ಕರೆದೊಯ್ದಿದ್ದಾರೆ. ಇದರಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದು, ವೃದ್ಧರು ಮತ್ತು ರೋಗಿಗಳು ಇರುವ ಮನೆಯಲ್ಲಿ ಪೊಲೀಸರ ಈ ವರ್ತನೆಯಿಂದ ಹೆಚ್ಚು ಕಡಿಮೆಯಾದರೆ ಯಾರು ಗತಿ? ಎಂದು ಪೊಲೀಸರ ವರ್ತನೆಯನ್ನು ಖಂಡಿಸಿದರು. ಯಾವುದೇ ಗಲಭೆಯಲ್ಲಿ ಭಾಗಿಯಾಗದ ಕೆ.ಆರ್. ಪುರಂ ಮತ್ತು ಎಂ.ಕೆ.ಕೆ. ರಸ್ತೆಯ ಅಮಾಯಕ ಯುವಕರನ್ನು ಕರೆತಂದಿದ್ದು, ಕೂಡಲೆ ಅವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರಾದ ಅಬ್ದುಲ್ ಸತ್ತಾರ್ ಬೇಗ್, ಆಫ್ತಾಫ್ ಫರ್ವಿಜ್, ಮುನ್ನವರ್‌ಪಾಷ, ಮೌಲನಾ ಮುಕ್ತಿ, ಶಫಿವುಲ್ಲಾ, ಷರೀಫ್, ಜಿಲಾನ್, ಅಬ್ದುಲ್ ವಾಜೀದ್, ನಾಸೀರ್ ಅಹ್ಮದ್ ಮೊದಲಾದವರು ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!