.
ಪ್ರವಾಸೋದ್ಯಮ ಇಲಾಖೆ ಸಹಕಾರದಲ್ಲಿ ನಗರದ ರಾಗಿಗುಡ್ಡದಲ್ಲಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಮತ್ತು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಂದು ನಗರದ ರಾಗಿಗುಡ್ಡಕ್ಕೆ ಭೇಟಿ ನೀಡಿದ ರಾಗಿಗುಡ್ಡವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಗಿಗುಡ್ಡದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಒಂದು ವಿಶೇಷ ಯೋಜನೆ ರೂಪಿಸಲಾಗಿದೆ. ದೇವಸ್ಥಾನ ನಿರ್ಮಾಣಕ್ಕೆ 10 ಕೋಟಿ ರೂ. ಮಂಜೂರಾಗಿದ್ದು, ಈಗಾಗಲೇ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಉಳಿದ5 ಕೋಟಿ ರೂ. ಗಳನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು. ಇಲ್ಲಿನ ಸುಮಾರು 2.20 ಎಕರೆ ಜಾಗದಲ್ಲಿ ದೇವಸ್ಥಾನ ನಿರ್ಮಿಸಲಾಗುವುದು. ಜಿಲ್ಲಾಧಿಕಾರಿಗಳು ಈಗಾಗಲೇ ಜಾಗ ನೀಡಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ರಾಜ್ಯಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸುಮಾರು 74 ಅಡಿ ಎತ್ತರದ ಶಿವಲಿಂಗ ನಿರ್ಮಿಸಲಾಗುವುದು ಎಂದರು.
ಶಿವಮೊಗ್ಗ ನಗರದಲ್ಲಿ ಅನೇಕ ಮನೆಗಳು ಹಾನಿಗೊಳಗಾಗಿವೆ. ಜುಲೈ1 ರಿಂದ ಇಲ್ಲಿವರೆಗೆ ಸುಮಾರು 22 ಮನೆಗಳಿಗೆ ಹಾನಿಯಾಗಿದ್ದು, ಸಂಪೂರ್ಣ ಬಿದ್ದ ಮನೆಗೆ 5 ಲಕ್ಷ ರೂ. ನೀಡಲಾಗುವುದು. ಈಗಾಗಲೇ ಅಧಿಕಾರಿಗಳು ಸರ್ವೇ ಮಾಡುತ್ತಿದ್ದು, ಪರಿಹಾರವನ್ನು ಆದಷ್ಟು ಬೇಗ ಸಂತ್ರಸ್ಥರಿಗೆ ನೀಡಲಾಗುತ್ತದೆ ಎಂದರು.
ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಮುಗಿಯುತ್ತಾ ಬಂದಿದ್ದು, ನಗರ ಅತ್ಯಂತ ಸುಂದರವಾಗಿ ಕಾಣುತ್ತಿದೆ. ಮೊದ ಮೊದಲು ಅಪಸ್ವರ ಎತ್ತಲಾಗಿತ್ತು. ಆದರೆ, ಈಗ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಇದಕ್ಕಾಗಿ ಶ್ರಮಿಸಿದ ಸ್ಮಾರ್ಟ್ ಸಿಟಿ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ವಂದನೆಗಳು ಎಂದರು.