ಭಾರತ ದಿವಾಳಿಯತ್ತ ಸಾಗುತ್ತಿದ್ದು, ಜನಸಾಮಾನ್ಯರು ದಂಗೆಯೇಳುವ ಕಾಲ ದೂರವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾರಕ ಆಡಳಿತ ನಡೆಸುತ್ತಿವೆ, ದಿನ ಬಳಕೆ ವಸ್ತುಗಳ ಮೇಲೆ ತೆರಿಗೆ ವಿಧಿಸಿ ಬಡವರ ಬದುಕನ್ನು ಕಸಿದುಕೊಳ್ಳುತ್ತಿವೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ ಈಗಾಗಲೇ ಆಗಿತ್ತು. ಮತ್ತೆ ಗಾಯದ ಮೇಲೆ ಬರೆ ಎಳೆದಂತೆ ತೆರಿಗೆ ಹೆಚ್ಚಿಸಲಾಗಿದೆ. ಅಕ್ಕಿ ಸೇರಿದಂತೆ ಮಜ್ಜಿಗೆ, ಆಸ್ಪತ್ರೆಗಳಲ್ಲಿ ಬಳಸುವ ಉಪಕರಣಗಳು, ಮೊಸರು, ಮಕ್ಕಳು ಬಳಸುವ ಪೆನ್ಸಿಲ್, ಇಂಕ್ ಹೀಗೆ ಎಲ್ಲಾ ದಿನೋಪಯೋಗಿ ವಸ್ತುಗಳ ಮೇಲೆ ಜಿ.ಎಸ್.ಟಿ. ವಿಧಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಅಷ್ಟೇ ಅಲ್ಲ. ಸಾಮಾನ್ಯ ಜನರ ಬದುಕನ್ನು ಬವಣೆಯತ್ತ ದೂಡಿದೆ ಎಂದು ಆರೋಪಿಸಿದರು.
ಈಗಾಗಲೇ ರಾಜ್ಯದಿಂದ 3 ಲಕ್ಷ ಕೋಟಿ ರೂ. ತೆರಿಗೆ ಹಣವನ್ನು ಕೇಂದ್ರಕ್ಕೆ ಕಟ್ಟುತ್ತಿದ್ದೇವೆ. ಆದರೆ, ಕೇಂದ್ರ ನಮಗೇನು ಕೊಟ್ಟಿದೆ. 47 ಸಾವಿರ ಕೋಟಿ ರೂ. ಮಾತ್ರ ನೀಡಿದೆ. ಉಳಿದ ಹಣವನ್ನು ಕೇಂದ್ರವೇ ಇಟ್ಟುಕೊಂಡಿದೆ. ರಾಜ್ಯದ ಸಂಸದರಾಗಲೀ, ಆಡಳಿತ ನಡಸುವವರಾಗಲೀ ಕೇಳುವವರೇ ಇಲ್ಲವಾಗಿದೆ ಎಂದು ದೂರಿದರು.
ಶ್ರೀಲಂಕಾಕ್ಕೆ ಆದ ಪರಿಸ್ಥಿತಿಯೇ ಭಾರತಕ್ಕೆ ಬರುವುದರಲ್ಲಿ ದೂರವೇನಿಲ್ಲ. ಮನಮೋಹನ್ ಸಿಂಗ್ ಆಡಳಿತದಲ್ಲಿ ಭಾರತ ಆರ್ಥಿಕವಾಗಿ ಭದ್ರವಾಗಿಯೇ ಇತ್ತು. ಆದರೆ, ಈಗ ಇಂಡಿಯಾ ದಿವಾಳಿಯತ್ತ ಸಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಭಾವನಾತ್ಮಕ ವಿಚಾರಗಳು ವಿಜೃಂಭಿಸತೊಡಗಿವೆ. ಬದುಕು ಭಾರವಾಗುತ್ತಿದೆ. ಹೀಗಾದರೆ ಶ್ರೀಲಂಕಾದಲ್ಲಿ ಜನ ದಂಗೆ ಎದ್ದಂತೆ ಭಾರತದಲ್ಲೂ ಕೂಡ ದಂಗೆಯೇಳುವ ಕಾಲ ಹತ್ತಿರವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಯಮುನಾ ರಂಗೇಗೌಡ, ರೇಖಾ ರಂಗನಾಥ್, ಚಂದ್ರಭೂಪಾಲ್, ಯೋಗೀಶ್, ರಾಮೇಗೌಡ, ಚಂದನ್, ಇಕ್ಕೇರಿ ರಮೇಶ್, ಚಂದ್ರಶೇಖರ್, ಎನ್.ಡಿ. ಪ್ರವೀಣ್ ಮೊದಲಾದವರಿದ್ದರು.