ಶಿವಮೊಗ್ಗ : ನಕಲಿ ಹಿಂದುತ್ವದ ಡೋಂಗಿತನ ಮಾಡುತ್ತಿರುವ ಬಿಜೆಪಿ ಬಡ ಮುಸ್ಲಿಂ ವ್ಯಾಪಾರಿಗಳನ್ನು ದ್ವೇಷಿಸುತ್ತಾ ಕಾರ್ಪೋರೇಟ್ ಬಂಡವಾಳ ಶಾಹಿ ಮುಸ್ಲಿಂರೊಂದಿಗೆ ಕೈ ಜೋಡಿಸುತ್ತಿರುವ ನಾಚಿಕೆಗೇಡಿನ ಸಂಗತಿ ಎಂದು ಶಿವಮೊಗ್ಗ ನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಇಂದಿಲ್ಲಿ ಆರೋಪಿಸಿದ್ದಾರೆ.
ಕೋಟೆ ಶ್ರೀಮಾರಿಕಾಂಬ ಜಾತ್ರೆಯಲ್ಲಿ ಯಾವುದೇ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದೆಂದು ರೋಷಾವೇಶ ತೋರಿಸಿದ್ದ ಈ ಬಿಜೆಪಿ ನಾಯಕರುಗಳು ನಿನ್ನೆ ಶಿವಮೊಗ್ಗದ ಬ್ಯಾರಿಸ್ ಸಿಟಿ ಸೆಂಟರ್ ಮಾಲ್‌ನಲ್ಲಿ ದಕ್ಷಿಣ ಕನ್ನಡದ ಮುಸ್ಲಿಂ ಉದ್ಯಮಿ ಸಿದ್ದಿಕ್ ಬ್ಯಾರಿ ಅವರಿಂದ ನಿರ್ಮಾಣಗೊಂಡ ಬಿ-ಫನ್ ಇಂಡೋರ್ ಗೇಮ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಇವರ ನಾಟಕೀಯ ಹಿಂದುತ್ವಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಭಾರತ ಜಾತ್ಯಾತೀತ ರಾಷ್ಟ್ರವಾಗಿದೆ ಎಂಬುದನ್ನು ಮರೆತಿರುವ ಬಿಜೆಪಿ ಉತ್ತಮ ಆಡಳಿತ ಕೊಡದೇ ನಾಗರೀಕರ ಹಿತ ಕಾಪಾಡದೇ ಸಮನ್ವಯತೆಯಿಂದ ಬದುಕುತ್ತಿದ್ದ ಹಿಂದು-ಮುಸ್ಲಿಂರ ನಡುವೆ ಕೋಮು ದ್ವೇಷ ಹಾಕುತ್ತಾ ಉದ್ಯಮಿಗಳಾದ ಮುಸ್ಲಿಂರಿಗೆ ಮಾತ್ರ ಮಣೆಹಾಕುವಂತೆ ಕಾರ್ಯಕ್ರಮಕ್ಕೆ ಹೋಗಿದ್ದು, ನಾಚಿಕೆ ಗೇಡಿನ ವಿಚಾರವಲ್ಲವೇ ಎಂದು ಯಮುನಾ ಪ್ರಶ್ನಿಸಿದ್ದಾರೆ.
೩೩ ವರ್ಷಕ್ಕೆ ಲೀಜ್ ಪಡೆದಿರುವ ಬ್ಯಾರಿಸ್ ಸಿಟಿ ಸೆಂಟರ್‌ರನ್ನು ೯೯ ವರ್ಷಕ್ಕೆ ಮುಂದುವರೆಸಲು ಅಂದರೆ ಮಾರಾಟ ಮಾಡಲು ಹೊರಟಿರುವ ಬಿಜೆಪಿ ಅವರು ಹಿಂದುತ್ವದ ಮೇಲೆ ಮತ ಕೇಳಲು ಯಾವ ಹಕ್ಕಿದೆ. ತಮ್ಮ ಲಾಭಕ್ಕಾಗಿ ಕೈಜೋಡಿಸುವಾಗ ಹಿಂದುತ್ವವವನ್ನೆ ಮರೆಯುವ ಇಂತಹ ಬಿಜೆಪಿಯವರಿಂದ ಹೇಗೆ ತಾನೆ ಅಭಿವೃದ್ದಿ ಒಳ್ಳೆಯತನ ಕಾಣಲು ಸಾಧ್ಯ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.