ಬೆಂಗಳೂರು:
ರಾಜ್ಯ ರಾಜಕಾರಣದ ರಾಜಾ ಹುಲಿ, ಮಾಜಿ ಮುಖ್ಯಮಂತ್ರಿ ಕನ್ನಡ ಇದೇ ಮೊಟ್ಟ ಮೊದಲ ಬಾರಿಗೆ ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ನೈಜ ಘಟನೆ ಆದರಿಸಿ ಸಿದ್ದವಾಗುತ್ತಿರುವ ತನುಜಾ ಎಂಬ ಕನ್ನಡ ಚಿತ್ರ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯ ಪಾತ್ರ ನಿರ್ವಹಿಸುತ್ತಿದ್ದು, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದರ ಚಿತ್ರೀಕರಣ ಈಗಾಗಲೇ ಭರದಿಂದ ಸಾಗಿದೆ. ಕಾವೇರಿ ನಿವಾಸದಲ್ಲಿ ನಡೆದ ಶೂಟಿಂಗ್’ನಲ್ಲಿ ಯಡಿಯೂರಪ್ಪ ಹಾಗೂ ವಿಶ್ವೇಶ್ವರ ಭಟ್ ಪಾಲ್ಗೊಂಡಿದ್ದರು.
ನೈಜ ಘಟನೆ ಆಧರಿಸಿದ ಸಿನಿಮಾ ಇದಾಗಿದ್ದು, ಕೋವಿಡ್ ಸಂದರ್ಭದಲ್ಲಿ ನೀಟ್ ಪರೀಕ್ಷೆ ಬರೆಯಲು ಸುಮಾರು ೩೫೦ ಕಿಮೀ ದೂರ ಪ್ರಯಾಣ ಮಾಡಿ ಗಮನ ಸೆಳೆದಿದ್ದ ತನುಜಾ ಎಂಬ ಹುಡುಗಿಯ ಕಥೆ ರೋಚಕತೆಯಿಂದ ಕೂಡಿದೆ. ಆ ಘಟನೆ ಎಲ್ಲರ ಗಮನ ಸೆಳೆದಿತ್ತು.
ಈ ಹುಡುಗಿ ಕೊರೊನಾ ಕಾರಣದಿಂದ ನೀಟ್ ಪರೀಕ್ಷೆ ಬರೆಯಲಾಗದೆ ತನ್ನ ಅಸಹಾಯಕತೆ ತೋಡಿಕೊಂಡಿದ್ದ ಸಂದರ್ಭದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಅವರ ಸಹಕಾರದಿಂದ ಪರೀಕ್ಷೆ ಬರೆದು ನೀಟ್ ಪಾಸಾಗಿದ್ದು ಸುದ್ದಿ ಆಗಿತ್ತು. ಆ ಘಟನೆ ನಡೆದಾಗ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿದ್ದರು. ಇದನ್ನೇ ಒನ್’ಲೈನ್ ಸ್ಟೋರಿ ಆಗಿಸಿಕೊಂಡು ನಿರ್ದೇಶಕ ಹರೀಶ್ ಎಂ.ಡಿ. ಹಳ್ಳಿಯವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗ ಸಿನಿಮಾದಲ್ಲಿ ಕೂಡ ಅವರು ಮುಖ್ಯಮಂತ್ರಿಯ ಪಾತ್ರ ಮಾಡುತ್ತಿದ್ದಾರೆ.
ಶಿವಮೊಗ್ಗ ಮತ್ತು ಬೆಂಗಳೂರಿನ ಹಲವು ಲೊಕೇಷನ್’ಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಅಭಿನಯಿಸಿದ್ದ ಸಪ್ತಾ ಪಾವೂರು ಈ ಸಿನಿಮಾದ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವರ ಜೊತೆ ವಿಶ್ವೇಶ್ವರ ಭಟ್, ಕೆ. ಸುಧಾಕರ್, ರಾಜೇಶ್ ನಟರಂಗ, ಕೈಲಾಶ್, ಸಂಧ್ಯಾ ಅರಕೆರೆ, ಬೇಬಿಶ್ರೀ ಮುಂತಾದವರು ತಾರಾಗಣದಲ್ಲಿದ್ದಾರೆ.
ಪ್ರದ್ಯೋತನ್ ಸಂಗೀತ ನಿರ್ದೇಶನ, ರವೀಂದ್ರನಾಥ್ ಛಾಯಾಗ್ರಹಣ, ಉಮೇಶ್ ಆರ್.ಬಿ. ಸಂಕಲನ, ಆರ್. ಚಂದ್ರಶೇಖರ್ ಪ್ರಸಾದ್ ಹಾಗೂ ಜೆ.ಎಂ. ಪ್ರಹ್ಲಾದ್ ಸಂಭಾಷಣೆಯ ಜವಾಬ್ದಾರಿ ನಿಭಾಯಿಸಿದ್ದಾರೆ. ಬಿಯಾಂಡ್ ವಿಷನ್ಸ್ ಸಿನಿಮಾಸ್ ಸಂಸ್ಥೆ ಮೂಲಕ ಈ ಚಿತ್ರ ತಯಾರಾಗುತ್ತಿದೆ.
ರಾಜಕೀಯ ಜೀವನದ ಹಲವು ಘಟ್ಟಗಳಲ್ಲಿ ಯಡಿಯೂರಪ್ಪ ಅವರನ್ನು ಜನರು ಗಮನಿಸಿದ್ದಾರೆ. ಈಗ ಅವರನ್ನು ಕಲಾವಿದರನ್ನಾಗಿ ನೋಡಲು ಅಭಿಮಾನಿಗಳ, ಕಾರ್ಯಕರ್ತರ ನಿರೀಕ್ಷೆ ಹೆಚ್ಚಾಗಿದ್ದು, ಚಿತ್ರವನ್ನು ಶೀಘ್ರದಲ್ಲೇ ತೆರೆಗೆ ತರುವ ಯೋಚನೆ ಹೊಂದಿದೆ.