ಶಿವಮೊಗ್ಗ, ಜ.25:
ಭಾರತೀಯ ಜನತಾ ಪಕ್ಷದ ಹೊಸ ಯೋಜನೆಯಂತೆ ನಿನ್ನೆ ರಾಜ್ಯದ ಸಚಿವ ಸಂಪುಟದಲ್ಲಿನ ಎಲ್ಲಾ ಸಚಿವರುಗಳ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಿದ್ದು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸ್ಥಾನದ ಜವಾ ಬ್ದಾರಿ ಹೊತ್ತಿರುವ ಮಂಡ್ಯಾ ಮೂಲದ ರೇಷ್ಮೆ, ಯುವ ಸಬಲೀ ಕರಣ ಮತ್ತು ಕ್ರೀಡಾ ಸಚಿವ ಡಾ|| ನಾರಾಯಣಗೌಡ ಅವರು ಇಂದು ರಾತ್ರಿ 8 ಗಂಟೆಗೆ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ.
ನಿನ್ನೆಯಷ್ಟೆ ಗಣರಾಜ್ಯೋತ್ಸವ ದಿನದಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಎಲ್ಲಾ ಸಿದ್ದತೆಗಳನ್ನು ಜಿಲ್ಲಾಡಳಿತ ಮಾಡಿ ಮುಗಿಸಿತ್ತು. ಸರ್ಕಾರದ ದಿಢೀರ್ ಬದಲಾವಣೆಯಿಂದ ಈಶ್ವರಪ್ಪ ಅವರು ಚಿಕ್ಕಮಗಳೂರಿಗೆ ಹೋಗಬೇಕಾಗಿದ್ದು, ಹೊಸ ಬದಲಾವಣೆಯಲ್ಲಿ ಹೊಸ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಲಿದ್ದಾರೆ.
ಈ ಕಾರ್ಯಕ್ರಮದ ಉದ್ದೇಶಕ್ಕೆ ಮಾತ್ರ ಆಗಮಿಸಲಿರುವ ಗೌಡರು ಇಂದು ರಾತ್ರಿ 8 ಕ್ಕೆ ಶಿವಮೊಗ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಜ. 26 ರಂದು ಬೆ. 9ಕ್ಕೆ ಡಿಎಆರ್ ಪೊಲೀಸ್ ಪೆರೇಡ್ ಮೈದಾನದಲ್ಲಿ ಆಯೋಜಿ ಸಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆ. 11.30 ಕ್ಕೆ ಬಿ.ಜೆ.ಪಿ. ಜಿಲ್ಲಾ ಕಚೇರಿಗೆ ಭೇಟಿ ನೀಡುವರು. ಮದ್ಯಾಹ್ನ 12 ಕ್ಕೆ ರಸ್ತೆಯ ಮೂಲಕ ಬೆಂಗಳೂರಿಗೆ ವಾಪಸ್ಸು ತೆರಳಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿರುತ್ತಾರೆ. ಜಿಲ್ಲೆಯ ಹಾಗೂ ನಗರದ ಯಾವುದೇ ಪ್ರಗತಿಪರಿಶೀಲನಾ ಸಭೆಗಳಲ್ಲಿ ಭಾಗವಹಿಸುವುದಿಲ್ಲ.