ಶಿವಮೊಗ್ಗ : ಶಾಲಾ ಕಲಿಕೆಯ ಜೊತೆ ಕ್ರೀಡೆಯ ಸಮರ್ಪಕ ತರಬೇತಿ ಕಲಿಕೆ ಪಡೆದು ಜಿಲ್ಲಾ, ರಾಜ್ಯ, ಅಂತರಾಜ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಬೆಳೆಸಲು ಅವಕಾಶವಿರುವಂತಹ ಕ್ರೀಡಾ ಶಾಲೆಗಳಲ್ಲಿ ಮಕ್ಕಳಿಗೆ ಕ್ರೀಡಾ ತರಬೇತಿ ನೀಡಬೇಕಾದ ಶಿಕ್ಷಕನೇ ಲೈಂಗಿಕ ದೌರ್ಜನ್ಯ ನೀಡಿದರೆ ಹೇಗೆ..?
ಶಿವಮೊಗ್ಗ ನೆಹರೂ ಕ್ರೀಡಾಂಗಣದಲ್ಲಿನ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯ ಕ್ರೀಡಾಶಾಲೆಯಲ್ಲಿ ೮ರಿಂದ ೧೨ನೇ ತರಗತಿವರೆಗಿನ ಪ್ರತಿಭಾವಂತ ಕ್ರೀಡಾಪಟುಗಳು ಶಾಲಾ ಕಲಿಕೆಯ ಜೊತೆ ಕ್ರೀಡಾ ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿನ ಅಥ್ಲೆಟಿಕ್ಸ್ ಕ್ರೀಡಾ ತರಬೇತುದಾರ ಬಾಳಪ್ಪಮಾನೆ ಹೆಣ್ಣುಮಕ್ಕಳಿಗೆ ಅದರಲ್ಲೂ ಪುಟ್ಟ ಪುಟ್ಟ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಕ್ರೀಡಾಪಟುಗಳು, ಅವರ ಪೋಷಕರುಗಳ ಜೊತೆ ಜಿಲ್ಲಾ ಯುವ ಕಾಂಗ್ರೆಸ್ ಇಂದು ಮದ್ಯಾಹ್ನ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿತು
ಈ ಸಂರ್ಭದಲ್ಲಿ ಮನವಿ ಸಲ್ಲಿಸಿದ ಸಮಿತಿಯು ಕ್ರೀಡಾ ಹಾಸ್ಟೇಲ್ನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅತಿ ಹೆಚ್ಚಾಗಿ ಸೇರಿದ್ದು, ತರಬೇತುದಾರರಿಂದ ಕ್ರೀಡಾ ಕೌಶಲ್ಯದಲ್ಲಿ ತಲ್ಲೀನರಾಗುತ್ತಿದ್ದಾರೆ. ಆದರೆ ಈ ತರಬೇತುದಾರ ಕೆಲ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ. ಈ ಸಂಬಂಧ ಕ್ರೀಡಾ ಇಲಾಖೆಯ ಅಧಿಕಾರಿ ಮಂಜುನಾಥ್ರಿಗೆ ತಿಳಿಸಿದರೂ. ಅವರು ಕಾನೂನು ಕ್ರಮಕೈಗೊಳ್ಳದೇ ವಿದ್ಯಾರ್ಥಿಗಳಿಗೆ ಸಬೂಬು ಹೇಳುವ ಮೂಲಕ ಬೇಜಾವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಹೇಳಿದೆ.
ಜಿಲ್ಲಾಧಿಕಾರಿಗಳು ಕೂಡಲೇ ತರಬೇತುದಾರರನ್ನು ಅಮಾನತುಗೊಳಿಸುವ ಜೊತೆಗೆ ಆತನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಹಾಗೆಯೇ ವಿದ್ಯಾರ್ಥಿಗಳ ಸಮಸ್ಯೆ ಆಲಿಸದ ಕ್ರೀಡಾ ಇಲಾಖೆಯ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು, ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಯುವಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಎಂ.ಪ್ರವೀಣ್ಕುಮಾರ್, ಜಿಲ್ಲಾದ್ಯಕ್ಷ ಹೆಚ್.ಪಿ.ಗಿರೀಶ್, ಮುಖಂಡರಾದ ಕೆ.ರಂಗನಾಥ್, ಪುಷ್ಪಕುಮಾರ್, ರಾಕೇಶ್, ಸುಹಾಸ್ಗೌಡ, ನಿತೀನ್, ರಾಜೀವ್, ರಾಜ್ಕುಮಾರ್, ಪೋಷಕರು ಹಾಗೂ ಮಕ್ಕಳು ಹಾಜರಿದ್ದರು.
ಕ್ರೀಡಾ ಇಲಾಖೆಯ ಅಧಿಕಾರಿಗೆ ಕಿವಿಯಿಲ್ಲ!
ಈ ಕ್ರೀಡಾ ತರಬೇತುದಾರ ಬಾಳಪ್ಪಮಾನೆ ವಿರುದ್ಧ ಕಳೆದ ತಿಂಗಳು ಕ್ರೀಡಾಪಟುವೊಬ್ಬಳ ಪರವಾಗಿ ನಾವು ಹೋಗಿ ದೂರು ನೀಡಿದರೆ ನೋಡ್ತೇನೆ.. ನಾಳೆ ಸರಿ ಮಾಡ್ತೇನೆ.. ಹೊರಗೆಲ್ಲೂ ಹೇಳ್ಬೇಡಿ ಎಂದು ಬೆದರಿಸಿಕಳುಹಿಸಿದ್ದನ್ನು ಇಂದು ಮಾದ್ಯಮದವರೊಂದಿಗೆ ಕೆಲ ಮಕ್ಕಳು ಮನಬಿಚ್ಚಿ ಮಾತನಾಡಿದರು.
ಮೊನ್ನೆಯಷ್ಟೆ ಶಿಕಾರಿಪುರ ಮೂಲದ ನಿದಿಗೆ ನಿವಾಸಿ ಪ್ರೌಢ ಶಾಲೆಯ ಕ್ರೀಡಾಪಟು ಕ್ರೀಡಾ ಹಾಸ್ಟೇಲ್ಬಿಟ್ಟು ಹೋಗಿದ್ದು ಏಕೆ.? ಆಕೆಯ ವಿಷಯವಾಗಿ ನಾವೆಲ್ಲಾ ಮಾತನಾಡಿದ್ದೇವು. ಆದರೆ ಅದಕ್ಕೆ ಮಂಜುನಾಥ ಸರ್ ಸ್ಪಂದಿಸಲಿಲ್ಲ ಎಂದಿದ್ದಾರೆ.
ಅಡ್ಡಗೋಡೆ ಮೇಲೆ ದೀಪ ಇಟ್ಟ ಮಂಜುನಾಥ್
ಮಕ್ಕಳ ಹಾಗೂ ಕಾಂಗ್ರೆಸ್ ಪ್ರತಿಭಟನೆಯ ಕುರಿತು ಪತ್ರಿಕೆ ಕ್ರೀಡಾಧಿಕಾರಿ ಮಂಜುನಾಥ್ ಅವರನ್ನು ಸಂಪರ್ಕಿಸಿದಾದ ನನಗೆ ಈ ವಿಷಯದ ಬಗ್ಗೆ ಯಾವುದೇ ದೂರು ಬಂದಿಲ್ಲ. ಈಗ ನಾನು ಹಾಗೂ ಬಾಳಪ್ಪ ತೀರ್ಥಹಳ್ಳಿಯಲ್ಲಿದ್ದೇವೆ. ಇಂತಹ ಯಾವುದೇ ಆರೋಪವನ್ನು ಮಕ್ಕಳು ಮಾಡಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದರು.
ಸತ್ಯಾಂಶವನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕಿದೆ.