ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ವೀಕೆಂಡ್ ಕರ್ಫ್ಯೂವನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ.
ಈ ಕುರಿತಂತೆ ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.


ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಸಚಿವ ಆರ್. ಅಶೋಕ್, ತಜ್ಞರು, ವಿವಿಧ ಆಸ್ಪತ್ರೆಯ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ಸಚಿವರುಗಳ ಸಲಹೆ ಪಡೆದು ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದರು.
ಕೊರೋನಾ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂವನ್ನು ಜಾರಿಗೊಳಿಸಲಾಗಿತ್ತು. ಆದರೆ, ವೀಕೆಂಡ್ ಕರ್ಫ್ಯೂಗೆ ಸಾರ್ವಜನಿಕರು, ವ್ಯಾಪಾರಸ್ಥರು ಮಾತ್ರವಲ್ಲ ಸರ್ಕಾರದ ಸಚಿವರು ಹಾಗೂ ಶಾಸಕರುಗಳಿಂದಲೇ ವಿರೋಧ ವ್ಯಕ್ತವಾಗಿತ್ತು. ಕಳೆದ ಅಲೆಗೆ ಹೋಲಿಕೆ ಮಾಡಿದರೆ ಈ ಬಾರಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಿದೆ. ವೀಕೆಂಡ್ ಕರ್ಫ್ಯೂನಿಂದ ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ, ಇದನ್ನು ರದ್ದು ಮಾಡುವಂತೆ ಒತ್ತಡ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹತ್ವದ ಸಭೆ ನಡೆಸುತ್ತಿರುವ ಮುಖ್ಯಮಂತ್ರಿಗಳು ವೀಕೆಂಡ್ ಕರ್ಫ್ಯೂ ಮುಂದುವರೆಸುವ ಬಗ್ಗೆ ಪರ ವಿರೋಧ ಮಾಹಿತಿ ಪಡೆದಿದ್ದರು. ಅಂತಿಮವಾಗಿ ಜನಾಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡುವ ನಿರ್ಧಾರ ಕೈಗೊಂಡಿದೆ.
ಆದರೆ, ವಾರದ ೭ ದಿನವೂ ನೈಟ್ ಕರ್ಫ್ಯೂ, ಹೊಟೇಲ್’ಗಳಲ್ಲಿ ೫೦:೫೦ ಅನುಪಾತ ಸೇರಿದಂತೆ ಎಲ್ಲ ನಿಯಮಾವಳಿಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿದ್ದು, ಯಾವುದೇ ಬದಲಾವಣೆಯಿರುವುದಿಲ್ಲ ಎಂದಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!