ಶಿವಮೊಗ್ಗದ ಪತ್ರಿಕಾ ರಂಗ ರಾಜ್ಯದಲ್ಲೇ ಮಾದರಿ: ಡಿ.ಎಸ್.ಅರುಣ್
ಶಿವಮೊಗ್ಗ ತುಂಗಾ ತರಂಗ ಕನ್ನಡ ಪತ್ರಿಕೆಯ ೨೦೨೨ರ ದಿನದರ್ಶಿಕೆ (ಕ್ಯಾಲೆಂಡರ್)ಯನ್ನು ಇಂದು ಬೆಳಗ್ಗೆ ಶಿವಮೊಗ್ಗದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ನೂತನ ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ನೂತನ ಅಧ್ಯಕ್ಷ ಎನ್.ಗೋಪಿನಾಥ್, ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಕೆ.ಬಿ.ಪ್ರಸನ್ನಕುಮಾರ್ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಡಿ.ಎಸ್.ಅರುಣ್ ಮಾತನಾಡುತ್ತಾ, ಪತ್ರಿಕೋದ್ಯಮ ಸರ್ಕಾರದ ನಾಲ್ಕನೇ ಅಂಗ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಈ ಅಂಗದಲ್ಲಿ ಇತ್ತೀಚೆಗೆ ಒಂದಿಷ್ಟು ಲೋಪಗಳು ಕಂಡು ಬರುತ್ತಿವೆ. ಈ ವಿಚಾರದಲ್ಲಿ ಶಿವಮೊಗ್ಗ ಜಿಲ್ಲಾ ಪತ್ರಿಕಾ ಜಗತ್ತು ತನ್ನದೇ ಆದ ಗೌರವ ಕಾಯ್ದುಕೊಂಡಿದೆ. ಹಾಗೂ ರಾಜ್ಯದಲ್ಲೇ ಮಾದರಿಯಾಗಿದೆ ಎಂದರು.
ತುಂಗಾ ತರಂಗ ದಿನಪತ್ರಿಕೆ ಹಾಗೂ ಸಂಪಾದಕ ಎಸ್.ಕೆ.ಗಜೇಂದ್ರಸ್ವಾಮಿ ಅವರು ಪತ್ರಿಕಾ ರಂಗದ ಗೌರವ ಕಾಯುವ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವಂತಹ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಸೇವೆ ಸಲ್ಲಿಸುತ್ತಿರುವುದು ಅಭಿನಂದನಾರ್ಹ ಎಂದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡುತ್ತಾ, ತುಂಗಾ ತರಂಗ ದಿನಪತ್ರಿಕೆ ವಾರ್ಷಿಕ ಕ್ಯಾಲೆಂಡರ್, ವಿಶೇಷಾಂಕ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮದಲ್ಲಿ ಕೈ ಜೋಡಿಸಿರುವುದು ಶ್ಲಾಘನೀಯ ಎಂದರು.
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೂತನ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಜವಾಬ್ದಾರಿಯುತ ಕೆಲಸದಲ್ಲಿ ಸಕ್ರಿಯರಾಗಿ ವರ್ತಕರ ಹಾಗೂ ಉದ್ಯಮಿಗಳ ಹಿತರಕ್ಷಣಾ ವಿಚಾರದಲ್ಲಿ ಶಿವಮೊಗ್ಗದ ಎಲ್ಲಾ ಮಾದ್ಯಮಗಳು ನಮಗೆ ಬೆಂಬಲಿಸುತ್ತಾರೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರೆಸ್ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಅವರು ಮಾತನಾಡಿ, ಪತ್ರಿಕಾ ರಂಗ ಇಂದ ದುಬಾರಿ ಉತ್ಪಾದನಾ ವೆಚ್ಚದಲ್ಲಿ ಸಂಕಷ್ಟಕ್ಕೆ ಈಡಾಗಿದೆ. ಮುದ್ರಣದ ಕಾಗದ ನಮ್ಮ ರಾಜ್ಯದಲ್ಲಿ ಸಿಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ಐದಾರು ವರ್ಷದಲ್ಲಿ ಮುದ್ರಣ ಪತ್ರಿಕೆಗಳು ನಶಿಸುತ್ತವೆ ಎಂದ ಅವರು, ಇದರ ನಡುವೆ ತುಂಗಾ ತರಂಗ ಪತ್ರಿಕೆಯ ಗಜೇಂದ್ರಸ್ವಾಮಿ ಬಳಗವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್.ಸತ್ಯನಾರಾಯಣ್ ರಾವ್, ಜವಳಿ ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ್ಶೆಟ್ಟಿ, ಉದ್ಯಮಿ ಹಾಗೂ ಸಮಾಜ ಸೇವಕ ಸುರೇಶ್ ಬಾಳೆಗುಂಡಿ, ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಹಾಗೂ ಗ್ರಾ.ಪಂ.ಉಪಾಧ್ಯಕ್ಷ ಜಿ.ವಿಜಯ್ಕುಮಾರ್, ಎಂಜಿನಿಯರ್ ಭರತ್.ಎಸ್., ಉದ್ಯಮಿಗಳಾದ ಎಂ.ಪಿ.ಗಣೇಶ್, ಎಸ್.ಮಂಜುನಾಥ್, ದೇವಕಿ ಟ್ಯುಟೋರಿಯಲ್ಸ್ನ ಮಹೇಶ್, ಮಾನವ ಹಕ್ಕು ಕಮಿಟಿಯ ರಾಜ್ಯಾಧ್ಯಕ್ಷ ಕೆ.ನಾಗರಾಜ್, ಶಿಕ್ಷಕಿ ಎಸ್.ವಿ.ವೀಣಾರಾಣಿ, ಪತ್ರಕರ್ತರಾದ ಜಿ.ಸಿ.ಸೋಮಶೇಖರ್, ಅರುಣ್, ಅಭಿನಂದನ್, ಮಂಜುನಾಥ್ ಬಿ, , ಪತ್ರಿಕಾ ಬಳಗದ ನಿರಂಜನ್ಮೂರ್ತಿ, ರವಿ ಹಾಗೂ ಇತರರಿದ್ದರು
ಪತ್ರಿಕಾ ಸಂಪಾದಕ ಎಸ್.ಕೆ.ಗಜೇಂದ್ರಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿ, ಪತ್ರಿಕೆ ಹೊಸ ತನದಲ್ಲಿ ಗುರುತಿಸಿಕೊಳ್ಳಲು ಬೆಳೆಯಲು ಕಾರಣರಾದ ಸರ್ವರನ್ನು ಅಭಿನಂದಿಸಿದರು.
ಯೂತ್ ಹಾಸ್ಟೇಲ್ ಅಸೋಸಿಯೇಷನ್ನ ಅ.ನಾ.ವಿಜಯೇಂದ್ರ ರಾವ್ ಸರ್ವರನ್ನು ಸ್ವಾಗತಿಸಿದರು, ಕಾಂಗ್ರೆಸ್ ಯುವ ಮುಖಂಡ ಹಾಡೋನಹಳ್ಳಿ ಜಗದೀಶ್ ವಂದಿಸಿದರು.




