ಶಿವಮೊಗ್ಗ: ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗರ್ತಿಕೆರೆ ಗ್ರಾಮದ ವಾಸಿ ಸತೀಶ್ ಶೆಟ್ಟಿ(55) ಅವರನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗರ್ತಿಕೆರೆ ಗ್ರಾಮದ ಕೃಷ್ಣ(45) ಮತ್ತು ಫಯಾಜ್(37) ಬಂಧಿತ ಆರೋಪಿಗಳಾಗಿದ್ದಾರೆ. ಸತೀಶ್ ಶೆಟ್ಟಿ, ಕೃಷ್ಣ ಮತ್ತು ಫಯಾಜ್ ಸ್ನೇಹಿತರಾಗಿದ್ದು, ಕೂಲಿ ಹಾಗೂ ಗಾರೆ ಕೆಲಸಕ್ಕೆ ಜೊತೆಯಲ್ಲಿಯೇ ಹೋಗುತ್ತಿದ್ದರು. ಈ ಹಿಂದೆ ಸತೀಶ್ ಶೆಟ್ಟಿ ಕೃಷ್ಣನನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗಿದ್ದು, ಕೂಲಿ ಹಣ ಕೊಟ್ಟಿರಲಿಲ್ಲ.
ಈ ವಿಚಾರವಾಗಿ ಕೃಷ್ಣನಿಗೆ ಸತೀಶ್ ಮೇಲೆ ದ್ವೇಷವಿತ್ತು. ಡಿ. 18 ರಂದು ಸತೀಶ್ ಶೆಟ್ಟಿಯ ಪತ್ನಿ ಬೆಂಗಳೂರಿಗೆ ಹೋದ ವಿಚಾರ ಗೊತ್ತಾಗಿ ಕೃಷ್ಣನು ಸತೀಶ್ ಶೆಟ್ಟಿಯ ಮೇಲೆ ಸೇಡು ತೀರಿಸಿಕೊಳ್ಳಲು ಮತ್ತೊಬ್ಬ ಸ್ನೇಹಿತ ಫಯಾಜ್ ಜೊತೆ ಸೇರಿ ಡಿ. 22 ರ ರಾತ್ರಿ ಸತೀಶ್ ಶೆಟ್ಟಿಯನ್ನು ಗ್ರಾಮದ ಕೆರೆ ಏರಿ ಮೇಲೆ ಕರೆದುಕೊಂಡು ಬಂದು ಪಾರ್ಟಿ ಮಾಡಿದ್ದಾರೆ.ಚಾಕುವಿನಿಂದ ಸತೀಶ್ ಶೆಟ್ಟಿ ತಲೆ ಹಿಂಬದಿಗೆ ಹೊಡೆದು ಕೊಲೆ ಮಾಡಿ ಮೃತದೇಹವನ್ನು ಕೆರೆಗೆ ಎಸೆದು ಹೋಗಿದ್ದು, ಈ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.