ಕುಲಗೆಟ್ಟ ಸಾರ್ವಜನಿಕ ಶೌಚಾಲಯ, ಗೋರಿಗಳಂತಹ ಜನರ ವಿಶ್ರಾಂತಿಧಾಮ ಸರಿಯೇ..?
ಹುಡುಕಾಟದ ವರದಿ:
ಶಿವಮೊಗ್ಗ, ಅ.೦೮:
ಇಡೀ ಶಿವಮೊಗ್ಗ ನಗರದ ಸ್ವಚ್ಛತೆ, ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕಾದ ಶಿವಮೊಗ್ಗ ಮಹಾನಗರ ಪಾಲಿಕೆ ಅರ್ಧ ನಗರವನ್ನು ಸ್ಮಾರ್ಟ್‌ಸಿಟಿ ಕಾಮಗಾರಿಗಳ ಹಾಗೂ ಉಳಿದರ್ಧ ಪಾಲಿಕೆ ಅಭಿವೃದ್ಧಿ ಹೆಸರಲ್ಲಿ ಕೆಲಸ ಮಾಡಿಸುತ್ತಿದೆ. ಈ ಕಾಮಗಾರಿಗಳನ್ನು ಸಾರ್ವಜನಿಕರು ಅದೆಷ್ಟು ಹೊಗಳುತ್ತಾರೆ. ತೆಗಳುತ್ತಾರೆ ಎಂಬುದನ್ನು ಇಲ್ಲಿನ ಅಧಿಕಾರಿಗಳು, ಜನಪ್ರತಿನಿಧಿಗಳು ಕೇಳಿದರೂ ಕೇಳಿದಂತೆ ಇರುವುದು ವಾಡಿಕೆಯಾಗಿದೆ.
ಕರ್ಮಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆ ತನ್ನ ಆವರಣವನ್ನು ಅಂದಗೊಳಿಸುತ್ತಿದೆ. ಅಷ್ಟೇ ಏಕೆ. ಸ್ಮಶಾನದ ರೀತಿಯಲ್ಲಿ ಜನ ಕುಳಿತುಕೊಳ್ಳಲು ಆಸನಗಳನ್ನು ಅಳವಡಿಸುತ್ತಿದೆ. ಒಂದು ಬಗೆಯಲ್ಲಿ ಇಲ್ಲಿ ನಿತ್ಯ ಕೆಲಸವಿಲ್ಲದವರ, ಬೀಡಿ ಸೇದುವವರ ಸುಂದರ ಗಳಿಗೆ ರೂಪಿಸುವ ಅಡ್ಡೆಯಾಗಲಿದೆ ಎಂಬುದಂತೂ ಸತ್ಯ.
ಇದೀಷ್ಟು ಪೀಠಿಕೆಗಳು ಹೊರಬರಲು ಕಾರಣ ಮಾಹನ್ ನಗರ ಪಾಲಿಕೆ ಆವರಣದಲ್ಲಿ ಇರುವ ಪುರುಷ ಹಾಗೂ ಮಹಿಳೆಯ ಸಾರ್ವಜನಿಕ ಶೌಚಾಲಯ ಇಡೀ ವ್ಯವಸ್ಥೆಯನ್ನು ಜಗಜ್ಜಾಹೀರು ಮಾಡುತ್ತದೆ. ಇಲ್ಲಿಗೆ ಬರುವ ಹೆಣ್ಣು ಮಕ್ಕಳು ಶೌಚಾಲಯಕ್ಕೆ ಹೋಗಲು ಸಾಧ್ಯವೇ ಇಲ್ಲ. ಅವರಿಗಾಗಿ ಕಟ್ಟಿದ ಶೌಚಾಲಯ ಸಂಪೂರ್ಣ ಗಿಡಿ-ಗಂಟಿಗಳು ಹುಳ-ಹುಪ್ಪಟ್ಟೆಗಳ ಆವಾಸ ಸ್ಥಾನವಾಗಿದೆ. ಇನ್ನೂ ಪುರುಷರ ಶೌಚಾಲಯ ಭಗವಂತನಿಗೆ ಪ್ರೀತಿ ಅಲ್ಲಿ ನಿತ್ಯ ಇಲ್ಲಿನ ಅಧಿಕಾರಿಗಳು ಜನಪ್ರತಿನಿಧಿಗಳು ಒಮ್ಮೆ ವಾಸನೆ ಕುಡಿದು ಬಂದರೆ ಸಾಕು ಅವರಿಗೆ ಕೊರೊನಾದಂತಹ ಯಾವುದೇ ಸಾಂಕ್ರಾಮಿಕ ರೋಗಗಳು ತಟ್ಟುವುದಿಲ್ಲವೆಂಬ ಸಾರ್ವಜನಿಕ ವಾಕ್ಯ ಸಂಪೂರ್ಣ ಬಹಿರಂಗವಾಗುವ ಮುನ್ನ ಪಾಲಿಕೆಯ ಮಹಾನ್ ಮೇಧಾವಿ ಇಂಜಿನಿಯರ್‌ಗಳು ಇತ್ತ ಗಮನಿಸಬೇಕಿದೆ. ಪುರುಷರ ಶೌಚಾಲಯದ ಬಾಗಿಲುಗಳು ಮುರಿದು ಹೋಗಿವೆ. ಸಿಂಕ್‌ನ ನೆಲ್ಲಿ ಸದಾ ಹನಿಗುಟ್ಟುತ್ತಿದೆ. ಸ್ವಚ್ಛತೆ ಕಾಣದೇ ಅದೇಷ್ಟು ವರ್ಷಗಳಾದವೋ ಭಗವಂತನಿಗೆ ಗೊತ್ತು. ನೀರು ಹಾಕಿದರಷ್ಟೆ ಸ್ವಚ್ಛತೆಯಲ್ಲ. ಊರ ತುಂಬಾ ಹಾಕುವ ಕೆಲ ರಾಸಾಯನಿಕಗಳನ್ನಾದರೂ ಇಲ್ಲಿ ಹಾಕಬಹುದಲ್ಲವೇ..?
ಊರಿಗೆ ಉಪಕಾರಿ ಮನೆಗೆ ಮಾರಿ ಎಂಬಂತೆ ಇಲ್ಲಿನ ಅಧಿಕಾರಿಗಳು ಇಲ್ಲ. ಏಕೆಂದರೆ ಅವರವರ ಭವ್ಯ ಬಂಗಲೆಗಳು ಲಕಲಕಿಸುತ್ತಿವೆ. ಪಾಲಿಕೆ ಆವರಣದಲ್ಲಿ ಸಾರ್ವಜನಿಕರ ಕ್ಷೇಮಕ್ಕೆ ಮಾಡಬಹುದಾದ ಕಾರ್ಯಗಳನ್ನು ಇಂಜಿನಿಯರ್‌ಗಳ ತಲೆ ಇಲ್ಲದ ಯೋಜನೆಗಳಿಂದ ಇಡೀ ಪಾಲಿಕೆ ಒಳಗೆ ಹೊಳಪು ಹೊರಗೆ ಹುರುಕು ಎಂಬಂತೆ ಗೋಚರಿಸುತ್ತಿದೆ.
ಹಿಂದಿನ ನಗರಸಭೆ ಈಗಿನ ಮಹಾನಗರ ಪಾಲಿಕೆಯಾದರ ಕೈಗೆ ಕಾಲಿಗೆ ಸಿಗುವ ಇಂಜಿನಿಯರ್‌ಗಳು, ಅಧಿಕಾರಿಗಳು, ನೌಕರರ ಸಂಖ್ಯೆ ದುಪ್ಪಟ್ಟಿಗಿಂತ ಜಾಸ್ತಿಯಾಗಿದೆ. ಕನಿಷ್ಠ ಅವರ ವಾಹನಗಳನ್ನು ನಿಲ್ಲಿಸಿಕೊಳ್ಳಲು ಜಾಗವಿಲ್ಲ. ಅದನ್ನು ಬಿಟ್ಟು ಪಾಲಿಕೆಯ ದೇವಾಲಯ ಮಗ್ಗುಲಲ್ಲಿ. ಯಾರ ಉದ್ದಾರಕ್ಕೆ ಸ್ಮಶಾನದ ಗೋರಿಗಳಂತೆ ಕಟ್ಟೆಗಳನ್ನು ಜೋಡಿಸಿ ಹಾಕಿದ್ದಾರೋ ಗೊತ್ತಿಲ್ಲ. ಪಿಸುಪಿಸು, ಪುಸುಪುಸು ಮಾತನಾಡಲು ಇದೇನು ಪಾರ್ಕ್ ಅಲ್ಲ. ಬೀಡಿ ಸೇದುತ್ತಾ ಹರಟೆ ಹೊಡಲು ಸಿಗರೇಟ್ ಅಡ್ಡೆಯಲ್ಲ. ಇಲ್ಲಿ ರಾತ್ರಿ ಜಾಲಿಯಾಗಿ ಕುಳಿತು ಕುಡಿಯಲು ಎಣ್ಣೆ ಅಂಗಡಿಯಲ್ಲ ತಲೆ ಇಲ್ಲದ ಇಂತಹ ಯೋಜನೆಗಳಿಗೆ ಸ್ಮಾರ್ಟ್‌ಸಿಟಿ ಹೆಸರಿನ ಲಕ್ಷಾಂತರ ರೂ ಹಣವನ್ನು ಸುರಿಯುತ್ತಿರುವುದು ಸಾರ್ವಜನಿಕರ ಸದ್ದುದ್ದೇಶಕ್ಕಾ.?
ಇದು ನಿಜವೆಂದರೆ ಮಾನ್ಯ ಮಹಾನಗರ ಪಾಲಿಕೆಯ ಮಹಾನ್ ಅಧಿಕಾರಿ ಮಹೋದಯರು, ಅದರಲ್ಲೂ ಮಹಾನ್ ಇಂಜಿನಿಯರ್ ಮಹಾಶಯರುಗಳು ಇಲ್ಲೊಂದು ಚಹಾದಂಗಡಿ, ಬೀಡಿಸಿಗರೇಟ್, ಗುಟ್ಕಾ, ಅಡಿಕೆ ಎಲೆ ತಂಬಾಕು, ಬೀಡಾ ದೊರೆಯುವಂತೆ ಮಾಡಿ. ಇನ್ನೂ ಜನರ ಬಗ್ಗೆ ಪ್ರೀತಿ ಹೆಚ್ಚಾದರೆ ಬರೀ ಒಂದು ವೈನ್ ಸ್ಟೋರ್ ಆರಂಭಿಸಿ ಸಾಕು ಕಟ್ಟೆ ಮೇಲೆ ಕುಳಿತು ಜನ ಮಜಾ ಮಾಡುತ್ತಾರೆ ಎಂಬುದು ಸಾರ್ವಜನಿಕ ಹಾಗೂ ಪತ್ರಿಕಾ ಓದುಗ ಬಳಗದ ಅಭಿಪ್ರಾಯ ಮತ್ತು ಕೋರಿಕೆ.