ಅಲ್ಲಿ ನಿತ್ಯವೂ ಸಾವಿರಾರು ಜನರ ಆಗಮನ. ಕನಿಷ್ಠ ಎರಡು ಸಾವಿರ ಮಂದಿ ಅಲ್ಲಿಗೆ ನಿತ್ಯವೂ ಭೇಟಿ ನೀಡುತ್ತಾರೆ! ಎಲ್ಲರ ಬಾಯಿಯಲ್ಲೂ ಒಂದೇ ಜಪ “ಮಂಜುನಾಥ ಮಂಜುನಾಥ”!
ಅದ್ಯಾವ ದೇವರು ಮಂಜುನಾಥ? ಅಲ್ಲೇನು ಪವಾಡ ನಡೆಯುತ್ತಾ? ಎಂಬ ಪ್ರಶ್ನೆ ನಿಮ್ಮೊಳಗೆ ಏಳುವುದು ಸಹಜ. ಆದರೆ ಇದು ಪವಾಡ ಮಾಡುವ ದೇವರ ಸುದ್ದಿ ಅಲ್ಲ. ಹಳ್ಳಿಯೊಂದರ ಸಾಧಾರಣ ಕೃಷಿ ಕುಟುಂಬದಲ್ಲಿ ಹುಟ್ಟಿ ಎಂಬಿಬಿಎಸ್ ಓದಿ, ಎಂಡಿ ಮತ್ತು ಡಿಎಂ ಕಾರ್ಡಿ ಯಾಲಜಿ ಮಾಡಿ, ಬಡರೋಗಿಗಳ ಕಣ್ಣಿಗೆ ಧರ್ಮಸ್ಥಳದ ಮಂಜುನಾಥ ದೇವರಂತೆ ಕಾಣುವ ವೈದ್ಯರೊಬ್ಬರ ಕತೆ.
ದಯಯೇ ಧರ್ಮದ ಮೂಲ ವಯ್ಯಾ ಎಂದು ಅರಿತು ನಾವು ಮಾಡು ವ ಕಾಯಕದಲ್ಲಿ ದಯೆ, ಮಾನವೀಯತೆ ಬಹಳ ಮುಖ್ಯ. ಮಾನವೀಯತೆ ಇಲ್ಲದ ಜ್ಞಾನ, ವಿಜ್ಞಾನ-ತಂತ್ರಜ್ಞಾನ ಇದ್ದರೆಷ್ಟು ಬಿಟ್ಟರೆಷ್ಟು ಎಂಬುದನ್ನು ಬಲವಾಗಿ ನಂಬಿರುವ ಗಾಂಧಿವಾದಿ. ಲಕ್ಷಾಂತರ ಹೃದ್ರೋಗಿಗಳಿಗೆ ಜೀವದಾನ ನೀಡುವು ದರೊಂದಿಗೆ, ನೊಂದವರ ಕಣ್ಣೀರು ಒರೆಸುವ ಕಾಯಕದಲ್ಲಿ ಮನೆಮಾತಾ ಗಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇ ಶಕರಾದ ಮತ್ತು ಹೃದಯವಂತ ಹೃದ್ರೋಗ ತಜ್ಞ ಅವರೇ ಡಾ. ಸಿ. ಎನ್. ಮಂಜುನಾಥ್‌ರವರು.
ಜಯದೇವ ಹೃದ್ರೋಗ ಆಸ್ಪತ್ರೆಗೆ ಬರುವ ಯಾವುದೇ ರೋಗಿಯ ಬಳಿ ಹಣ ಇರಲಿ ಇಲ್ಲದಿರಲೀ, ರೋಗಿಗೆ ಚಿಕಿತ್ಸೆ ಕೊಡದೇ ಆಸ್ಪತ್ರೆಯಿಂದ ಹೊರ ಹೋಗಬಾರದು ಎಂದು ತಿಳಿದು ಇವರು ೨೦೦೬ರಲ್ಲಿ ನಿರ್ದೇಶಕರಾದ ನಂತರ ಹಲವು ಮಹತ್ತರ ಬದಲಾ ವಣೆಗಳನ್ನು ಜಾರಿಗೆ ತಂದು ಜಗದ್ವಿ ಖ್ಯಾತಿಯಾದರು. ಅವುಗಳಲ್ಲಿ “ಚಿಕಿತ್ಸೆ ಮೊದಲು ನಂತರ ಹಣ ಪಾವತಿ”, “ಕಡತ/ದಾಖಲೆಗಳಿಗಿಂತ ಜೀವನ/ಜೀವ ಮುಖ್ಯ” “ಮಾನವೀಯತೆಗೆ ಮೊದಲ ಆದ್ಯತೆ” ಎಂಬ ನಿರ್ಣಯ ಗಳನ್ನು ಜಾರಿಗೆ ತಂದು ಲಕ್ಷಾಂತರ ಜನರ ಬದುಕಿಗೆ ನಂದಾದೀಪವಾಗಿ ಅವರ ಹೃದಯ ಗೆದ್ದ ಹೃದಯವಂತ ರಿವರು. ಇವರ ಈ ಧ್ಯೇಯ ವಾಕ್ಯಗಳು ವೈದ್ಯ ವೃತ್ತಿಯವರಿಗೆ ಭಗವದ್ಗೀತೆಯ ಸಾಲುಗಳಿದ್ದಂತೆ! ಈ ವಿಶಿಷ್ಟ ಶೈಲಿಯ ಆದರ್ಶಗಳನ್ನು ತಾನೂ ಕೂಡಾ ತಪ್ಪದೇ ಅಂದಿನಿಂದ ಇಂದಿನವರೆಗೂ ಪಾಲಿಸಿ ಕೊಂಡು ಜಯದೇವ ಆಸ್ಪತ್ರೆಯನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಹಂತಕ್ಕೆ ಸೆಳೆದಿರುವುದು ಅವರ ಭಗೀರಥ ಪ್ರಯತ್ನ ಎಂದೇ ಹೇಳಬಹುದು. ಜಯದೇವ ಆಸ್ಪತ್ರೆಯೇ ನನ್ನ ಮೊದಲ ಹೆಂಡತಿ ಅಂದು ಕೊಂಡು ತಮ್ಮ ಕನಸಿನ ಕೂಸು ಈ ಸರ್ಕಾರಿ ಆಸ್ಪತ್ರೆಯನ್ನು ಖಾಸಗಿ ಪಂಚ ತಾರ ಆಸ್ಪತ್ರೆಯನ್ನಾಗಿ ಮಾಡಬೇಕಾದರೆ ಅವರ ಸತತ ಪರಿಶ್ರಮ, ಪ್ರತಿಭೆ, ಬದ್ಧತೆ, ಸಾಮಾಜಿಕ ಕಳಕಳಿಯೇ ಕಾರಣ.
ಇತ್ತೀಚಿನ ಕೆಲವು ವರ್ಷಗಳಿಂ ದೀಚೆಗೆ ಖಾಸಗಿ ಆಸ್ಪತ್ರೆಗಳ ಅಬ್ಬರದಲ್ಲಿ ಬಡವರಿಗೆ ಸರಿಯಾದ ಸೌಲಭ್ಯಗಳು ಸಿಗದಿರುವುದನ್ನು ತಮ್ಮ ನೇತ್ರಗಳಿಂದಲೇ ನೇರವಾಗಿ ನೋಡಿದಾಕ್ಷಣ ಡಾ. ಮಂಜುನಾಥ್ ಅವರ ಹೃದಯ ಹೆತ್ತ ಮ್ಮನ ಕರುಳಿನಂತೆ ಮಮ್ಮಲ ಮರುಗು ತ್ತದೆ. ಆಗ ಅವರು ಶ್ರೀಮಂತರಿಗೆ ಸಿಗುವ ಸೌಲಭ್ಯಗಳು, ಶಸ್ತ್ರಚಿಕಿತ್ಸೆಗಳು ಬಡವರಿಗೂ ಸಿಗಬೇಕೆಂದು ಪಣತೊಟ್ಟು “ಪೂರ್ ಕೊರ್ಪಾಸ್ ಫಂಡ್” ಎಂಬ ನಿಧಿಯನ್ನು ಸ್ಥಾಪಿಸಿ, ಆ ಯೋಜನೆಯಡಿಯಲ್ಲಿ ಖಾತೆ ಯನ್ನು ತೆರೆಯುತ್ತಾರೆ. ಆ ನಿಧಿಯ ಖಾತೆಯಲ್ಲಿ ಕಳೆದ ೧೫ ವರ್ಷಗಳಿಂದ ಸರ್ಕಾರ ಮತ್ತು ದಾನಿಗಳಿಂದ ೫೨ ಕೋಟಿರೂಗಳಿಗೂ ಹೆಚ್ಚು ಹಣ ಸಂಗ್ರ ಹಿಸಿ, ಅದರಿಂದ ಬರುವ ಬಡ್ಡಿ ಯಿಂದಲೇ ಬಡವರಿಗೆ, ನಿರ್ಗತಿಕರಿಗೆ, ವಿಶ್ವ ದರ್ಜೆಯ ಚಿಕಿತ್ಸೆಯನ್ನು ಕೊಡುತ್ತಿದ್ದಾರೆ.
ಜಯದೇವ ಹೃದ್ರೋಗ ಆಸ್ಪತ್ರೆ ಬಡವರ ಪಾಲಿಗೆ ದೇವಾಲಯ. ಇಲ್ಲಿ ಶ್ರೀಮಂತರಿಗೆ ಚಿಕಿತ್ಸೆಯಿಲ್ಲವೆಂದಲ್ಲ. ಎಲ್ಲಾ ವರ್ಗದವರಿಗೂ ಇಲ್ಲಿ ಚಿಕಿತ್ಸೆ ಲಭ್ಯ. ಆದರೆ ಬಡವರಿಗೆ ಮಾತ್ರ ಉಚಿತ ಅಥವಾ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಪ್ರತಿನಿತ್ಯ ಕನಿಷ್ಠ ಪಕ್ಷ ಎರಡು ಸಾವಿರ ರೋಗಿಗಳು ಇಲ್ಲಿ ಚಿಕಿತ್ಸೆಗಾಗಿ ಬರುತ್ತಾರೆ. ಲಕಾಂತರ ರೂಪಾಯಿ ಹಣ ಪಾವತಿಸಿದರೂ ಕೆಲವು ಆಸ್ಪತ್ರೆಗಳಲ್ಲಿ ರೋಗಿಗಳನ್ನು ನಿರ್ಲಕ್ಷಿ ಸಲಾಗುತ್ತದೆ. ಆದರೆ ಇಲ್ಲಿ ಯಾವ ರೋಗಿಯನ್ನೂ ಕಡೆಗಣಿಸುವುದಿಲ್ಲ ಎಂಬುದಕ್ಕೆ ಉನ್ನತ ಮಟ್ಟದಲ್ಲಿ ಹೆಸರು ಪಡೆದಿ
ರುವುದೇ ಸಾಕ್ಷಿ. ಇಲ್ಲಿ ಎಲ್ಲರಿಗೂ ನಗುಮೊಗದ ಸೇವೆ ಲಭ್ಯ.
ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿ ರುವ ಡಾ, ಮಂಜುನಾಥ್ ಅವರೇ ಬಡ ರೋಗಿಗಳ ಪಾಲಿನ ನಂದಾದೀಪ. ಬಾಲ್ಯ ದಿಂದಲೇ ಬಡವರ ಸಂಕಷ್ಟಗಳನ್ನು ತೀರಾ ಹತ್ತಿರದಿಂದ ನೋಡಿದ್ದ ಇವರು ಬಡ, ದುರ್ಬಲ ವರ್ಗದ ಜನರಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಅಳುವ ಮಗುವ ನೋವನರಿಯುವ ಮಾತೆ ಯಂತೆ ರೋಗಿಗಳ ಸಂಕಷ್ಟ ಅರಿಯುವ ಮಮತಾಮಯಿ ಇವರು. “ಬಡವರೇ ನಮ್ಮ ನಿಜವಾದ ವಿಐಪಿಗಳು” ಅಂದು ಕೊಂಡು ಬಡರೋಗಿಗಳನ್ನು ಕಣ್ಣಿನಿಂದಲೇ ಗುರುತಿಸಿ, ನಗುಮುಖ ದಿಂದಲೇ ಸಂತೈಸಿ ಅವರಿಗಾಗಿ ಹೃದಯ ಮಿಡಿಯುವ ವಾತ್ಸಲ್ಯಮಯಿ. ತಮ್ಮ ಮುಗುಳ್ನಗೆಯಿಂದಲೇ ಮೃದುಭಾಷಿ ಯಾಗಿ ರೋಗಿಗಳನ್ನು ಕಕ್ಕುಲತೆಯಿಂದ ಕಾಣುವ ಇವರ ಔದಾರ್ಯತೆ ವೈದ್ಯ ವೃತ್ತಿಗೆ ಭಾಷ್ಯ ಬರೆದಂತಿದೆ.
“ಕಾಯಕವೇ ಕೈಲಾಸ” ಎಂಬ ಬಸವಣ್ಣನವರ ಮಾತುಗಳನ್ನು ಸದಾ ಮನದಲ್ಲಿ ಹುದುಗಿಟ್ಟುಕೊಂಡು, ತಮ್ಮ ವೈದ್ಯ ವೃತ್ತಿಯಲ್ಲಿಯೇ ರೋಗಿಗಳ ಸೇವೆಯ ಮಾಡುವ ಮೂಲಕ ಸಾರ್ಥಕತೆಯನ್ನು ಕಾಣುತ್ತಿರುವ ಇವರು “ವೈದ್ಯೋ ನಾರಾಯಣೋ ಹರಿ” ಎಂಬ ಮಾತನ್ನು ಅಕ್ಷರಶಃ ನಿಜ ಮಾಡಿ ತೋರಿಸಿದ್ದಾರೆ. ತಮ್ಮ ನೋವು ಸಂಕಟಗಳೆಲ್ಲಾ ನಿವಾರಣೆ ಯಾಗಿ ಬದುಕುಳಿದ ಜನ, ಸಾವಿನಂಚಿನ ದವಡೆಯಿಂದ ಮರುಜೀವ ಪಡೆದ ರೋಗಿಗಳು ಇವರ ಕಛೇರಿಯ ಬಳಿ ಧನ್ಯವಾದ ಹೇಳಲು ಶಿಸ್ತಾಗಿ ಕಾಯುತ್ತಾ ಕುಳಿತಿರುತ್ತಾರೆ. ಅವರನ್ನು ಕಂಡೊಡನೆ ದೈನ್ಯತೆಯಿಂದ ಕೈಮುಗಿಯುತ್ತಾರೆ.
ಸರಿಯಾದ ಚಿಕಿತ್ಸೆ ಸಿಗದಿದ್ದರೆ ಅದೆಷ್ಟೋ ಬಡ ಕುಟುಂಬಗಳು ದುಡಿ ಯುವ ಜೀವವನ್ನು ಕಳೆದುಕೊಂಡು ಇಡೀ ಕುಟುಂಬವೇ ಅನಾಥವಾಗಿಬಿಡುತ್ತದೆ ಅನ್ನುವ ಕಳವಳ ಇವರದು. ಆದಕಾರಣ ಸ್ವತಃ ತಾವೇ ರೋಗಿಗಳನ್ನು ಪರೀಕ್ಷಿಸಿ, ತಮ್ಮ ನಗುವೆ ಒಂದು ಸುಂದರ ಆಭರಣವಾಗಿ, ರೋಗಿಗೆ ಭರವಸೆಯ ನುಡಿಗಳಿಂದ ಆತ್ಮಸ್ಥೈರ್ಯ ತುಂಬಿ ಇವರಿಂದ ಬದುಕುಳಿದ ಜೀವಗಳು ಅದೆಷ್ಟೋ! ಇವರು ತಮ್ಮ ಮತ್ತು ತಮ್ಮ ಕುಟುಂಬದವರ ಒಳಿತಿಗಾಗಿ ಎಂದೂ ದೇವರ ಬಳಿ ಪ್ರಾರ್ಥಿಸಿದವರಲ್ಲ, ಬದಲಾಗಿ ಒಬ್ಬ ರೋಗಿ ಯನ್ನು ಉಳಿಸಿದರೆ ಕೇವಲ ರೋಗಿಯನ್ನು ಉಳಿಸುವುದು ಮಾತ್ರವಲ್ಲದೇ ಅವರ ಕುಟುಂಬವನ್ನೇ ಉಳಿಸಿದಂತಾಗು ತ್ತದೆಯಲ್ಲಾ ಎಂದು ತಿಳಿದು, ಪ್ರತಿ ರೋಗಿಗೆ ಚಿಕಿತ್ಸೆಯನ್ನು ಮಾಡಬೇಕಾದರೆ ರೋಗಿ ಬಹುಬೇಗ ಗುಣಮುಖರಾಗಲೆಂದು ಸದಾ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿ ರುತ್ತಾರೆ. ಹೊಗಳಿಕೆಗೂ ಮೀರಿದ ಮೇರು ವ್ಯಕ್ತಿತ್ವಗಳನ್ನು ಹೊಂದಿರುವ, ಪಾರದರ್ಶಕ ಆಡಳಿತಕ್ಕೆ ಹೆಸರಾದ, ತಮ್ಮ ಸರಳತೆ ಯಿಂದಲೇ ಎಲ್ಲರ ಮೆಚ್ಚುಗೆ ಮತ್ತು ಪ್ರೀತಿಗೆ ಪಾತ್ರವಾಗಿರುವ ಡಾ. ಸಿ. ಎನ್. ಮಂಜು ನಾಥ್ ಅವರ ಹೆಸರು ಅಸಂಖ್ಯಾತ ಜನರ ಬಾಳಿನಲ್ಲಿ, ಕುಟುಂಬಗಳ ಜೀವನ ಪಯಣದಲ್ಲಿ ಮನೆಮಾತಾಗಿದೆ.
ದೇಶದ ಹತ್ತು ಆಸ್ಪತ್ರೆಗಳಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಮೊದಲ ಸ್ಥಾನದಲ್ಲಿರಲು ನಿಸ್ಸಂದೇಹ ವಾಗಿ ಮಂಜುನಾಥ್ ಅವರ ತಪಸ್ಸು ಎನ್ನಬಹುದು. ಇವರು ೨೦೦೬ರಲ್ಲಿ ನಿರ್ದೇಶಕರಾಗಿ ಜವಾಬ್ದಾರಿ ತೆಗೆದು ಕೊಂಡಾಗ ಈ ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯ ೩೦೦ ಇತ್ತು. ಆದರೆ ಈಗ ೧೮೦೦ ಆಗಿದೆ. ಮೈಸೂರು, ಕಲ್ಬುರ್ಗಿ ಗಳಲ್ಲಿ ಜಯದೇವ ಆಸ್ಪತ್ರೆಯ ಶಾಖೆ ಗಳನ್ನು ತೆರೆಯಲಾಗಿದೆ.ಕಳೆದ ೧೫ ವರ್ಷಗಳಲ್ಲಿ ಈ ಆಸ್ಪತ್ರೆ ಶೇ. ೫೫೦ರಷ್ಟುಪ್ರಗತಿಯನ್ನು ಸಾಧಿಸಿದೆ. ಪ್ರತಿದಿನ ಎರಡು ಸಾವಿರಕ್ಕೂ ಹೆಚ್ಚು ಹೊರ ರೋಗಿಗಳು ಬರುತ್ತಾರೆ. ಪ್ರತಿದಿನ ೧೫೦-೧೭೫ ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ, ಸ್ಟಂಟಿಂಗ್ ಶಸ್ತ್ರಚಿಕಿತ್ಸಾ ವಿಧಾನಗಳು ನಡೆಯುತ್ತಿವೆ. ಸುಮಾರು ಒಂದು ಸಾವಿರ ಎಕೋಕಾರ್ಡಿ ಯೋಗ್ರಾಮ್ ಆಗ್ತಾ ಇದೆ. ಸುಮಾರು ೧೦೦ ತ್ರೆಡ್ ಮಿಲ್ ಟೆಸ್ಟ್ ಆಗ್ತಾ ಇದೆ. ೨೦೦೬ರಿಂದ ಇದುವರೆವಿಗೆ ಸುಮಾರು ೫ ಲಕ್ಷ ರೋಗಿಗಳಿಗೆ ಆಂಜಿಯೊ ಗ್ರಾಮ್, ಆಂಜಿಯೋಪ್ಲಾಸ್ಟಿ, ಸ್ಟಂಟಿಂಗ್ ವಿಧಾನದ ಚಿಕಿತ್ಸೆ ಮಾಡ ಲಾಗಿದೆ. ೪೦ ಲಕ್ಷ ಎಕೋಕಾರ್ಡಿ ಯೋಗ್ರಾಮ್, ೨೫,೦೦೦ ಬಲೂನ್ ಮಿಟ್ರಲ್‌ವಾಲ್ವು ಲೋಪ್ಲಾಸ್ಟಿ (ಮಂಜು ನಾಥ್ ಟೆಕ್ ನಿಕ್ ಎಂದೇ ಪ್ರಸಿದ್ಧಿ) ಮಾಡಲಾಗಿದೆ. ಇಡೀ ಭಾರತದಲ್ಲಿಯೇ ಅತೀ ಹೆಚ್ಚಿನ ಹೃದಯ ಶಸ್ತ್ರ ಚಿಕಿತ್ಸೆಗಳನ್ನು ಮಾಡುತ್ತಿರುವಂತಹ ಆಸ್ಪತ್ರೆ ಅಂದರೆ ಜಯದೇವ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸದರಿ ಸಂಸ್ಥೆಯ ಏಳಿಗೆಯಲ್ಲಿ ಇವರ ಕಾರ್ಯಶೀಲತೆ ಅಪಾರ. ಸುದೀರ್ಘ ಕಾಲ ವೈದ್ಯಕೀಯ ವೃತ್ತಿ ಯಲ್ಲಿದ್ದುಕೊಂಡು ಇವರ ಕಾರ್ಯ ಶೀಲತೆ, ರೋಗಿಗಳ ಬಗೆಗಿನ ಕಾಳಜಿ ಅಮೋಘವಾದುದು. ಇವರ ಆಡಳಿತ, ಕಾರ್ಯವೈಖರಿ, ಸಾಮಾಜಿಕ ಪರ ಚಟುವಟಿಕೆಗಳನ್ನು ಗುರುತಿಸಿ ಸರ್ಕಾರವು ಇವರ ನಿವೃತ್ತಿಯ ನಂತರವು ಇವರ ಕೆಲಸದ ಅವಧಿಯನ್ನು ವಿಸ್ತರಿಸಿದ್ದು ನಿಜಕ್ಕೂ ಶ್ಲಾಘನೀಯ. ವೃತ್ತಿ ಜೀವನಕ್ಕೆ ಸವಾಲೆಂಬಂತೆ ಜಾಗತಿಕ ಪಿಡುಗಾಗಿರುವ ಕೊರೊನಾ ಎಂಬ ಮಹಾಮಾರಿಯನ್ನು ನಿಯಂತ್ರಿಸಲು ಹಗಲಿರುಳು ಶ್ರಮಿಸಿ ಅಮಾಯಕರ ಜೀವ ಕಾಪಾಡುವುದಕ್ಕಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದಾರೆ. ಯಾವುದೇ ಪ್ರತಿಫಲಾಕ್ಷೆಗಳಿಲ್ಲದೇ ಸೇವೆ ಮಾಡುವ ಇಂಥಹ ಸಹೃದಯಿ ಸೇವೆಯನ್ನು ಸರ್ಕಾರಿ ಗುರುತಿಸಿ ಕಳೆದ ವರ್ಷ ವೈದ್ಯರಿಗೆ ಮಾನ್ಯತೆ ಕೊಡುವ ಸಲುವಾಗಿ ಡಾ. ಮಂಜುನಾಥ್ ರವರಿಗೆ ಸರ್ಕಾರವು ವಿಶ್ವವಿಖ್ಯಾತ ದಸರಾ ಉದ್ಘಾಟಿಸುವ ಅವಕಾಶ ಮಾಡಿಕೊಟ್ಟಿದ್ದು ಇವರಿಗೆ ದೊರಕಿದ ಬಹುದೊಡ್ಡ ಗೌರವ. ಕರ್ನಾಟಕ ಜನತೆಗೆಲ್ಲಾ ಹೆಮ್ಮೆಯ ಸಂಗತಿ.
ವೈದ್ಯಲೋಕದ ಈ ಅದ್ಭುತ ಸಾಧಕನ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸರ್ ಸಿ. ವಿ. ರಾಮನ್ ಯುವ ವಿಜ್ಞಾನಿ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಮತ್ತು ಮಂಗಳ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್, “ದಿ ಗ್ರೇಟ್ ಸನ್ ಆಫ್ ಕರ್ನಾಟಕ”, ದೂರದರ್ಶನ ಚಂದನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿಯ ಜೊತೆ ಇನ್ನಿತ್ತರ ಹಲವಾರು ಪ್ರಶಸ್ತಿಗಳು ಇವರ ಕೀರ್ತಿಯ ಕಿರೀಟವನ್ನು ಅಲಂಕರಿಸಿವೆ. ರಾಜೀವ್ ಗಾಂಧೀ ಆರೋಗ್ಯ ವಿಶ್ವವಿದ್ಯಾನಿಲಯವು “ಡಾಕ್ಟರ್ ಆಫ್ ಸೈನ್ಸ್” ಪ್ರಧಾನ ಮಾಡಿದೆ. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯ ಗರಿಯೂ ಸೇರಿದೆ. ಇವರ ಸೇವೆಗೆ ಮುಕುಟ ಪ್ರಾಯವೆನ್ನುವಂತೆ ದೇಶದ ಪದ್ಮಶ್ರೀ ಪ್ರಶಸ್ತಿಯು ಇವರಿಗೆ ಸಂದಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಭವಿಷ್ಯದಲ್ಲಿ ಕೇಂದ್ರ ಸರ್ಕಾರವು ಇವರಿಗೆ “ಭಾರತರತ್ನ ಪ್ರಶಸ್ತಿ” ನೀಡಲೆಂದು ನಮ್ಮೆಲ್ಲರ ಆಶಯ.
ನೈರೋಬಿ, ಕೀನ್ಯಾ.