ಶಿವಮೊಗ್ಗ: ಮನುಷ್ಯನ ಆರೋಗ್ಯ ಹಾಗೂ ಜೀವ ಕಾಪಾಡುವಲ್ಲಿ ವೈದ್ಯಕೀಯ ಸಿಬ್ಬಂದಿಗಳ ಪಾತ್ರ ಮಹತ್ವದಾಗಿದೆ. ವೈದ್ಯರು ಜೀವ ರಕ್ಷಕರಾಗಿದ್ದಾರೆ. ಆರೋಗ್ಯ ಕ್ಷೇತ್ರವು ಸೇವಾ ಕ್ಷೇತ್ರವಾಗಿದೆ. ಆದ್ದರಿಂದ ವೈದ್ಯಕೀಯ ಸಿಬ್ಬಂದಿಗೆ ಸೇವಾ ಮನೋಭಾವ ಅಗತ್ಯವೇ ಹೊರತು ಹೆಚ್ಚು ಹಣ ಸಂಪಾದನೆಯೇ ಉದ್ದೇಶವಾಗಬಾರದು ಎಂದು ಚನ್ನಗಿರಿ ಹಾಲಸ್ವಾಮಿ ವಿರಕ್ತಮಠದ ಡಾ.ಬಸವ ಜಯಚಂದ್ರ ಶ್ರೀಗಳು ಆಶಿಸಿದರು.
ಟಿಎಂಎಇಎಸ್ ಸೊಸೈಟಿ ವತಿಯಿಂದ ತಾಲೂಕಿನ ನಿದಿಗೆಯಲ್ಲಿರುವ ಟಿಎಂಎಇಎಸ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಷ್ಯ ಸಂಸ್ಕಾರ (ಶಿಷ್ಯ ದೀಕ್ಷೆ) ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಅನಾರೋಗ್ಯಕ್ಕೀಡಾದಾಗ ಚಿಕಿತ್ಸೆಗಾಗಿ ವೈದ್ಯರ ಬಳಿ ಹೋಗುವುದು ಸಾಮಾನ್ಯ. ವೈದ್ಯರು ತಮ್ಮ ಬಳಿ ಬರುವ ರೋಗಿಗಳ ಸ್ಥಾನಮಾನ, ಆರ್ಥಿಕ ಸ್ಥಿತಿಗತಿ ನೋಡದೆ ಸೇವಾ ಮನೋಭಾವದಿಂದ ಚಿಕಿತ್ಸೆ ನೀಡಿ ಕಾಯಿಲೆ ಗುಣ ಪಡಿಸಬೇಕೆಂದರು.
ವೈದ್ಯ ವೃತ್ತಿ ಅತ್ಯಂತ ಪವಿತ್ರವಾದುದು. ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದ ನಂತರ ಈ ಪಾವಿತ್ರ್ಯತೆಗೆ ಧಕ್ಕೆ ಬಾರದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಾರೆ. ಇದಕ್ಕೆ ತಕ್ಕಂತೆ ವೈದ್ಯರು ವೃತ್ತಿ ಗೌರವ ಕಾಪಾಡಬೇಕೆಂದರು.
ಆರೋಗ್ಯವೇ ಭಾಗ್ಯ. ನಾವು ಎಷ್ಟು ಹಣ-ಆಸ್ತಿ ಸಂಪಾದನೆ ಮಾಡಿದೆವು ಎಂಬುದಕ್ಕಿಂತಲೂ ಎಷ್ಟರ ಮಟ್ಟಿಗೆ ಆರೋಗ್ಯವನ್ನು ಉಳಿಸಿಕೊಂಡೆವು ಎಂಬುವುದು ಮುಖ್ಯ ನೈತಿಕ ಮೌಲ್ಯವನ್ನು ಮೈಗೂಡಿಸಿಕೊಂಡಲ್ಲಿ ಆರೋಗ್ಯ ಸಂರಕ್ಷಣೆ ಸಾಧ್ಯ ಎಂದು ಪ್ರತಿಪಾದಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಮಾತನಾಡಿ ಶೈಕ್ಷಣಿಕ ಸಂಸ್ಥೆಗಳು ಕೇವಲ ಶಿಕ್ಷಣ ನೀಡುವುದಕಷ್ಟೇ ಸೀಮಿತವಾಗದೆ ಸಂಸ್ಕೃತಿ- ಸಂಸ್ಕಾರ ನೀಡುವ ಕೇಂದ್ರಗಳಾಗಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಚ್ಚು ಅಂಕ ಗಳಿಸುವುದು ಅನಿವಾರ್ಯ. ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗಷ್ಟೇ ಸೀಮಿತವಾಗದೆ ಸಂಸ್ಕೃತಿ- ಸಂಸ್ಕಾರದೊಂದಿಗೆ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಂಡು ಸಮಾಜಮುಖಿಯಾಗಿ ಜೀವನ ನಡೆಸಬೇಕೆಂದರು.
ಆಡಳಿತಾಧಿಕಾರಿ ಜಿ.ಎ.ಹಿರೇಮಠ್, ಉಪ ಪ್ರಾಂಶುಪಾಲ ಡಾ.ಟಿ.ಸಿ.ವಿನಯ್ ಮತ್ತಿತರರು ಉಪಸ್ಥಿತರಿದ್ದರು.