ಶಿವಮೊಗ್ಗ: ಪ್ರಚೋದನಾಕಾರಿ ಹೇಳಿಕೆ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವ ಕಾಂಗ್ರೆಸ್ ರಾಜ್ಯ ಹಾಗೂ ಜಿಲ್ಲಾ ಸಮಿತಿ ಇಂದು ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದೆ.ಈಶ್ವರಪ್ಪ ಅವರು ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಒಂದಕ್ಕೆ ಎರಡು ತಲೆ ತೆಗೆಯಿರಿ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಜನಪ್ರತಿನಿಧಿಯೊಬ್ಬರು ಈ ರೀತಿ ಮಾತನಾಡುವುದು ಕಾನೂನಿಗೆ ವಿರೋಧವಾಗಿದೆ. ಈ ಹೇಳಿಕೆಯಿಂದ ಕೋಮುಗಲಭೆಯಾದರೂ ಆಶ್ಚರ್ಯವಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಿಜೆಪಿ ಮಾತೆತ್ತಿದರೆ ನಮ್ಮದು ಸಂಸ್ಕೃತಿ, ಸಂಸ್ಕಾರದ ಪಕ್ಷ ಎಂದು ಹೇಳುತ್ತಾರೆ. ಹೊಡೆಯಿರಿ, ಬಡಿಯಿರಿ, ಕಡಿಯಿರಿ ಎನ್ನುವುದು ಯಾವ ಸಂಸ್ಕೃತಿ? ಇದೊಂದು ಪ್ರಚೋದನಾಕಾರಿ ಹೇಳಿಕೆಯಾಗಿದ್ದು, ಸಚಿವರ ವಿರುದ್ಧ ಸಮಾಜಘಾತುಕ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಈಶ್ವರಪ್ಪ ಅವರು ವಿರೋಧ ಪಕ್ಷದ ಕಾಂಗ್ರೆಸ್ ನಾಯಕರನ್ನು ಕುಡುಕರು

ಸೂ…ಮಕ್ಕಳು ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಇದು ರಾಜ್ಯಾದ್ಯಂತ ಎಲ್ಲ ಮಾಧ್ಯಮಗಳನ್ನು ಭಿತ್ತರಗೊಂಡಿದೆ. ಇದರ ಆಧಾರದಲ್ಲಿ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ. ಪ್ರವೀಣ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್. ಪಿ. ಗಿರೀಶ್, ಪಾಲಿಕೆ ಸದಸ್ಯ ಹೆಚ್.ಸಿ. ಯೋಗೇಶ್, ರಂಜಿತ್, ಎಸ್. ಕುಮರೇಶ್, ರಾಹುಲ್, ವೆಂಕಟೇಶ್ ಕಲ್ಲೂರು, ಇರ್ಫಾನ್, ಸಚಿನ್, ಸೀನ, ಸುಹಾಸ್ ಗೌಡ, ನಂದಕುಮಾರ್, ಚೇತನ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!