
ಕಳೆದ ಗುರುವಾರ ಬೆಂಗಳೂರಿನ ಡಾಲರ್ ಕಾಲೋನಿಯ ನಿವಾಸ ಧವಳಗಿರಿಯಲ್ಲಿ ಸಂಭ್ರಮಾಚರಣೆ ನಡೆಸುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಒಂದು ಫೋನ್ ಕರೆ ಬಂದಿದೆ.ಬೆಳಿಗ್ಗೆ ಹನ್ನೊಂದು ಗಂಟೆಯ ಹೊತ್ತಿಗೆ ಅವರಿಗೆ ಈ ಕರೆ ಮಾಡಿದವರು ಕೇಂದ್ರದ ಗೃಹ ಸಚಿವ ಅಮಿತ್ ಶಾ.
ಅವತ್ತು ಅಭಿಮಾನಿಗಳ ನಡುವೆ ತಮ್ಮ ಹುಟ್ಟು ಹಬ್ಬದ ಸಂಭ್ರಮ ಆಚರಿಸುತ್ತಿದ್ದ ವಿಜಯೇಂದ್ರ,ಈ ಕರೆ ಮಾಡಿದ್ದು ಅಮಿತ್ ಶಾ ಅಂತ ಗೊತ್ತಾಗುತ್ತಿದ್ದಂತೆಯೇ ಕೊಂಚ ದೂರಕ್ಕೆ ಹೋಗಿ ನಿಂತಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ ಅವರು ವಿಜಯೇಂದ್ರ ಅವರಿಗೆ ಜನ್ಮ ದಿನದ ಶುಭ ಕೋರಿದ್ದಾರೆ.ಅಷ್ಟೇ ಅಲ್ಲ,ಕರ್ನಾಟಕದಲ್ಲಿ ಪಕ್ಷವನ್ನು ಸಂಘಟಿಸಲು ಅವರು ತೋರುತ್ತಿರುವ ಕಾಳಜಿಯನ್ನು ಪ್ರಶಂಸಿಸಿ:’ನಿಮ್ಮ ನಾಯಕತ್ವದಲ್ಲಿ ಪಕ್ಷ ಮುಂದಿನ ಚುನಾವಣೆಯನ್ನು ಎದುರಿಸಲಿದೆ.ಗೋ ಅಹೆಡ್’ಅಂತ ಹೇಳಿದ್ದಾರೆ.
ಯಾವಾಗ ಅಮಿತ್ ಶಾ ಅವರು ಈ ಮಾತು ಹೇಳಿದರೋ?ಆಗ ವಿಜಯೇಂದ್ರ ಅವರು ಧನ್ಯವಾದಗಳನ್ನು ತಿಳಿಸಿದ್ದಲ್ಲದೆ,ಅಮಿತ್ ಶಾ ಅವರು ತಮಗೆ ಕೊಟ್ಟ ಟಾಸ್ಕನ್ನು ನಿರ್ವಹಿಸಿದ ಬಗ್ಗೆ ವಿವರ ನೀಡಿದ್ದಾರೆ.

ಅಂದ ಹಾಗೆ ರಾಜ್ಯದಲ್ಲಿ ಪಕ್ಷವನ್ನು ನೀವು ಮುನ್ನಡೆಸಿಕೊಂಡು ಹೋಗಿ.ನಿಮ್ಮ ನಾಯಕತ್ವದಲ್ಲಿ ಚುನಾವಣೆಗಳನ್ನು ಎದುರಿಸೋಣ ಅಂತ ಇತ್ತೀಚಿನ ದಿನಗಳಲ್ಲಿ ಹಲ ನಾಯಕರು ವಿಜಯೇಂದ್ರ ಅವರಿಗೆ ಹೇಳಿದ್ದಾರೆ.
ನಾಗೇಂದ್ರ ಎಪಿಸೋಡಿನ ನಂತರ ರಾಜ್ಯದಲ್ಲಿ ವಿಜಯೇಂದ್ರ ಅವರು ಸಂಘಟಿಸಿದ ಪಾದಯಾತ್ರೆ ಇರಬಹುದು ಮತ್ತು ಮಧ್ಯ ಕರ್ನಾಟಕ ಭಾಗದಲ್ಲಿ ಅವರು ನಡೆಸಿದ ಯಡಿಯೂರೋತ್ಸವವೇ ಇರಬಹುದು.ಒಟ್ಟಿನಲ್ಲಿ ಪಕ್ಷ ಸಂಘಟನೆಗಾಗಿ ಅವರು ಇಡುತ್ತಿರುವ ಹೆಜ್ಜೆ ದಿಲ್ಲಿಯ ಬಿಜೆಪಿ ನಾಯಕರ ಗಮನ ಸೆಳೆದಿವೆ.
ಹೀಗಾಗಿಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್,ಕೇಂದ್ರ ಸಚಿವರಾದ ಜಗತ್ ಪ್ರಕಾಶ್ ನಡ್ಡಾ ಅವರೆಲ್ಲ ವಿಜಯೇಂದ್ರ ಅವರನ್ನು ಸಂಪರ್ಕಿಸಿ:’ನೀವು ಅಧ್ಯಕ್ಷರಾಗಿ ಮುಂದುವರಿಯಲಿದ್ದೀರಿ’ಅಂತ ಪಾಸಿಟಿವ್ ಅಗಿ ಮಾತನಾಡಿದ್ದಾರೆ.
ಈಗ ಅಮಿತ್ ಶಾ ಅವರು ಕೂಡಾ ಇದೇ ಧಾಟಿಯಲ್ಲಿ ಮಾತನಾಡಿರುವುದು ವಿಜಯೇಂದ್ರ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಅಮಿತ್ ಶಾ ಖುಷಿ ಆಗಿದ್ದೇಕೆ?
?
ಅಂದ ಹಾಗೆ ವಿಜಯೇಂದ್ರ ಅವರಿಗೆ ಅಮಿತ್ ಶಾ ಪಾಸಿಟಿವ್ ಸಂದೇಶ ರವಾನಿಸಲು ಹಲ ಕಾರಣಗಳಿವೆಯಾದರೂ ಕಳೆದ ವಾರ ಅವರು ಇಂತಹ ಮಾತನಾಡಲು ಮತ್ತೊಂದು ಕಾರಣವೂ ಇದೆ.
ಅದೆಂದರೆ ಕೆಲ ದಿನಗಳ ಹಿಂದೆ ತಾವು ಕೊಟ್ಟಿದ್ದ ಸಂದೇಶವನ್ನು ವಿಜಯೇಂದ್ರ ಅವರು ಪಾಸಿಟಿವ್ ಆಗಿ ಸ್ವೀಕರಿಸಿರುವುದು.ಬಿಜೆಪಿಯ ಮೂಲಗಳ ಪ್ರಕಾರ,ಅಮಿತ್ ಶಾ ಅವರು ರಾಜ್ಯದ ಇಬ್ಬರು ಬಿಜೆಪಿ ನಾಯಕರಿಗೆ ಒಂದು ಸಂದೇಶ ರವಾನಿಸಿದ್ದರು.ಈ ಇಬ್ಬರು ನಾಯಕರ ಪೈಕಿ ವಿಜಯೇಂದ್ರ ಅವರು ಒಬ್ಬರು.
‘ಅಧ್ಯಕ್ಷ್ ಜೀ, ಕರ್ನಾಟಕದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ಟಿಂಗ್ ಆಪರೇಷನ್ ವಿವಾದದ ಬಗ್ಗೆ ಅಷ್ಟು ದೊಡ್ಡ ಹೋರಾಟ ಮಾಡುತ್ತಿದ್ದಾರೆ.ಆದರೆ ಕಾಂಗ್ರೆಸ್ ಸರ್ಕಾರ ಸ್ಟಿಂಗ್ ಆಪರೇಷನ್ ಮಾಡಿದವರನ್ನು ಬಿಟ್ಟು ಅಪ್ ಲೋಡ್ ಮಾಡಿದವರೇ ತಪ್ಪಿತಸ್ಥರು ಅಂತ ದೋಷ ಹೊರಿಸಲು ಹೊರಟಿದೆ. ಅಲ್ಲಿನ ಗೃಹ ಸಚಿವರು ಕುಮಾರಸ್ವಾಮಿ ಅವರ ವಿರುದ್ದ ಅ ರೀತಿ ಧಾಳಿ ಮಾಡುತ್ತಿದ್ದಾರೆ.ಇಂತಹ ಹೊತ್ತಿನಲ್ಲಿ ಕುಮಸರಸ್ವಾಮಿ ಅವರೊಬ್ಬರೇ ನುಗ್ಗಲಿ ಅಂತ ನಾವು ಸುಮ್ಮನಿರುವುದಲ್ಲ.ಹೀಗಾಗಿ ನೀವೂ ಕುಮಾರಸ್ವಾಮಿಯವರ ಪರವಾಗಿ ನಿಂತು ಕೌಂಟರ್ ಅಟ್ಯಾಕ್ ಮಾಡಬೇಕು ಅಂತ ಅಮಿತ್ ಶಾ ಸ್ಪಷ್ಟವಾಗಿ ಹೇಳಿದ್ದಾರೆ.

ಅಷ್ಟೇ ಅಲ್ಲ,ಕರ್ನಾಟಕದಲ್ಲಿ ಯಾಕೆ ಜೆಡಿಎಸ್ ಜತೆಗೂಡಿ ಹೋಗಬೇಕು ಅಂತ ವಿವರಿಸಿ:’ಇವತ್ತು ಕರ್ನಾಟಕದ ಒಕ್ಕಲಿಗ ಮತದಾರರ ಪೈಕಿ ಕೆಲ ಪ್ರಮಾಣದ ಮತದಾರರು ನಮ್ಮ ಜತೆಗಿದ್ದಾರಾದರೂ ಬಹುತೇಕರು ಇರುವುದು ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಜತೆ.
ಹೀಗಾಗಿ ಇವತ್ತು ಕರ್ನಾಟಕದಲ್ಲಿ ಬಿಜೆಪಿಯ ಶಕ್ತಿ ಎಷ್ಟೇ ಇದ್ದರೂ,ಸ್ವಂತ ಶಕ್ತಿಯ ಮೇಲೆ ಬಹುಮತ ಗಳಿಸುವ ನಂಬಿಕೆ ಇದ್ದರೂ ಭವಿಷ್ಯದ ದೃಷ್ಟಿಯಿಂದ ನಾವು ಜೆಡಿಎಸ್ ಜತೆಗೂಡಿ ಹೋಗುವುದು ಒಳ್ಳೆಯದು’ಎಂದಿದ್ದಾರೆ.
ಯಾವಾಗ ಅಮಿತ್ ಶಾ ಅವರು ಈ ಮಾತು ಹೇಳಿದರೋ?ಇದಾದ ನಂತರ ಅದನ್ನು ಪಾಸಿಟಿವ್ ಆಗಿ ಸ್ವೀಕರಿಸಿದ ವಿಜಯೇಂದ್ರ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಪರವಾಗಿ ಬ್ಯಾಟಿಂಗ್ ಶುರು ಮಾಡಿ ಕಾಂಗ್ರೆಸ್ ವಿರುದ್ದ ನಿರಂತರ ವಾಗ್ಧಾಳಿ ನಡೆಸತೊಡಗಿದ್ದಾರೆ.
ಹೀಗೆ ತಾವು ಹೇಳಿದ್ದನ್ನು ವಿಜಯೇಂದ್ರ ಅವರು ಪಾಸಿಟಿವ್ ಆಗಿ ತೆಗೆದುಕೊಂಡ ರೀತಿ ಅಮಿತ್ ಶಾ ಅವರಿಗೆ ಇಷ್ಟವಾಗಿದೆ.ಕಳೆದ ವಾರ ಬರ್ತ್ ಡೇ ಸಂದರ್ಭದಲ್ಲಿ ಅವರು ವಿಜಯೇಂದ್ರ ಅವರಿಗೆ ಪಾಸಿಟಿವ್ ಸಂದೇಶ ರವಾನಿಸಲು ಇದು ಕೂಡಾ ಒಂದು ಕಾರಣ.
ಸೋಮಣ್ಣ ಬೇಟಿ…?
ಹೀಗೆ ವಿಜಯೇಂದ್ರ ಅವರಿಗೆ ಅಮಿತ್ ಶಾ ಕಡೆಯಿಂದ ಪಾಸಿಟಿವ್ ಸಂದೇಶ ರವಾನೆಯಾದ ಕಾಲದಲ್ಲೇ,ಇತ್ತ ಬಿಜೆಪಿ ಭಿನ್ನರ ಪಾಳಯದಿಂದ ಮತ್ತೊಂದು ವರ್ತಮಾನ ಬರತೊಡಗಿದೆ.
ಅದರ ಪ್ರಕಾರ,ಕಳೆದ ವಾರ ಪ್ರಧಾನಿ ನರೇಂದ್ರಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಮಂತ್ರಿ ವಿ.ಸೋಮಣ್ಷ ಅವರನ್ನು ಕರೆಸಿ ಪ್ರತ್ಯೇಕವಾಗಿ ಮಾತನಾಡಿದ್ದಾರೆ.
ಹೀಗೆ ಮಾತನಾಡುವ ಸಂದರ್ಭದಲ್ಲಿ ಕರ್ನಾಟಕದ ರಾಜಕೀಯ ಸೂಕ್ಷ್ಮಗಳ ಬಗ್ಗೆ ಮಾತನಾಡಿ:’ಸೋಮಣ್ಣಾಜೀ,ನೀವು ಹೆಚ್ಚು ಜವಾಬ್ದಾರಿ ಹೊರಲು ಸಜ್ಜಾಗಬೇಕು ಎಂದಿದ್ದಾರೆ.ಇದರರ್ಥ,ಸಧ್ಯದಲ್ಲೇ ಸೋಮಣ್ಣ ಅವರು ರಾಜ್ಯ ರಾಜಕೀಯಕ್ಕೆ ಮರಳಲಿದ್ದಾರೆ.
ಹೀಗೆ ಅವರು ರಾಜ್ಯ ರಾಜಕೀಯಕ್ಕೆ ಮರಳುವುದು ಎಂದರೆ ಪಕ್ಷದ ಅಧ್ಯಕ್ಷರಾಗುವುದು ಎಂದೇ ಅರ್ಥ.
ಹಾಗೇನಾದರೂ ಅದರೆ ಇವತ್ತು ಪಕ್ಷದಿಂದ ಹೊರಗಿರುವ ಬಸವನಗೌಡ ಪಾಟೀಲ್ ಯತ್ನಾಳ್, ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್ ಸೇರಿದಂತೆ ಹಲವರು ಪಕ್ಷಕ್ಕೆ ಮರಳಲಿದ್ದಾರೆ.
ಈ ಪೈಕಿ ಸಿ.ಪಿ.ಯೋಗೇಶ್ವರ್ ಅವರು ತಕ್ಷಣವೇ ಬರದೆ ಇನ್ನಷ್ಟು ಕಾಲ ಕಾಯಬಹುದು.ಆದರೆ ಘರ್ ವಾಪಾಸಿಗೆ ಒಂದು ಪಡೆಯೇ ಸಜ್ಜಾಗಲಿದೆ ಎಂಬುದು ಬಿಜೆಪಿ ಭಿನ್ನರ ವಾದ.

ಅವರ ಪ್ರಕಾರ,ಈ ಬೆಳವಣಿಗೆಯಿಂದ ಯಡಿಯೂರಪ್ಪ ಅವರನ್ನು ಸಮಾಧಾನಿಸಲು ಪಕ್ಷದ ವರಿಷ್ಟರ ಬಳಿ ಒಂದು ಸೂತ್ರವಿದೆ.
ಅದೆಂದರೆ, ಯಡಿಯೂರಪ್ಪ ಅವರ ಹಿರಿಯ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳುವುದು ಎಂಬುದು.
ಬಿಜೆಪಿ ಭಿನ್ನರ ಈ ವಾದ ಎಷ್ಟರ ಮಟ್ಟಿಗೆ ನಿಜವಾಗುತ್ತದೋ ಗೊತ್ತಿಲ್ಲ.ಕಾದು ನೋಡಬೇಕು.
ಸಂಪುಟ ಸರ್ಕಸ್ಸು
ಮುಗಿಯುತ್ತಿಲ್ಲ
ಇನ್ನು ಕಾಂಗ್ರೆಸ್ಸಿನಲ್ಲಿ ಏನೇ ಮಾಡಿದರೂ ಸಂಪುಟ ಸರ್ಕಸ್ಸು ಮುಗಿಯುತ್ತಿಲ್ಲ.
ಕಾರಣ?ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳ ಪೈಕಿ ಒಂದನ್ನು ಬಸವರಾಜ ಶಿವಣ್ಣನವರ್ ಅವರಿಗೆ,ಮತ್ತೊಂದು ಸ್ಥಾನವನ್ನು ಅನ್ನಪೂರ್ಣ ತುಕಾರಾಂ ಅವರಿಗೆ ನೀಡಬೇಕು ಎಂಬುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಟ್ಟು.
ಅಂದ ಹಾಗೆ ಅನ್ನಪೂರ್ಣ ತುಕಾರಾಂ ಅವರಿಗೆ ಮಂತ್ರಿ ಸ್ಥಾನ ಕೊಟ್ಟರೆ ಏಕಕಾಲಕ್ಕೆ ಮಹಿಳೆಯರ ಕೋಟಾ ಭರ್ತಿಯಾದಂತಾಗುತ್ತದೆ.ವಾಲ್ಮೀಕಿ ಸಮುದಾಯಕ್ಕೂ ಆದ್ಯತೆ ನೀಡಿದಂತಾಗುತ್ತದೆ ಎಂಬುದು ಅವರ ವಾದ.
ಆದರೆ ಸಿಎಂ ಡಿ.ಕೆ.ಶಿವಕುಮಾರ್ ಅವರು ವಾಲ್ಮೀಕಿ ಸಮುದಾಯದ ನಾಯಕ ಬಿ.ನಾಗೇಂದ್ರ ಅವರಿಗೆ ಮರಳಿ ಮಂತ್ರಿ ಸ್ಥಾನ ನೀಡಬೇಕು ಮತ್ತು ಮಹಿಳೆಯರ ಕೋಟಾದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಕಾಶ ಸಿಗಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಪರಿಣಾಮ?ಉಭಯ ನಾಯಕರ ವಾದಕ್ಕೆ ಮದ್ದು ಕಂಡು ಹಿಡಿಯಲಾಗದೆ ವರಿಷ್ಟರು ಮೌನವಾಗಿದ್ದಾರೆ.
ಪರಿಷತ್ ಫೈಟು ಲಾಭ ಯಾರಿಗೆ?
ಈ ಮಧ್ಯೆ ವಿಧಾನಪರಿಷತ್ತಿನ ಐದು ಸ್ಥಾನಗಳಿಗೆ ಯಾರನ್ನು ನೇಮಿಸಬೇಕು ಎಂಬ ವಿಷಯ ಪೈನಲ್ ಹಂತಕ್ಕೆ ಬಂದಿದೆ.
ಮೂಲಗಳ ಪ್ರಕಾರ,ಚಿಮ್ಕೋಡು,ಆರಾಧ್ಯ,ಕಾಂತಾ ನಾಯಕ್,ಮಂಜುಳಾ ನಾಯ್ಡು,ರಮೇಶ್ ಬಾಬು ಮತ್ತು ಗುಲ್ಬರ್ಗದ ಮುಸ್ಲಿಂ ನಾಯಕರೊಬ್ಬರು ಸೇರಿದಂತೆ ಹಲ ಹೆಸರುಗಳು ಪಟ್ಟಿಯಲ್ಲಿವೆ.
ಈ ಪೈಕಿ ಚಿಮ್ಕೋಡು ಮತ್ತು ರಮೇಶ್ ಬಾಬು ಅವರ ಹೆಸರುಗಳ ಹಿಂದೆ ಸಿದ್ದರಾಮಯ್ಯ ಅವರಿದ್ದರೆ,ಮಂಜುಳಾ ನಾಯ್ಡು ಅವರನ್ನು ಪರಿಷತ್ತಿಗೆ ಕಳಿಸಲೇಬೇಕು ಅಂತ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಪಟ್ಟು ಹಿಡಿದಿದ್ದಾರೆ.
ಹಾಗೇನಾದರೂ ಹರಿಪ್ರಸಾದ್ ಪಟ್ಟಿಗೆ ವರಿಷ್ಟರು ಮಣಿದರೆ ರಮೇಶ್ ಬಾಬು ಹೆಸರು ಪಟ್ಡಿಯಿಂದ ಹೊರಬೀಳುತ್ತದೆ.

ಅದರೆ ರಮೇಶ್ ಬಾಬು ಅವರಿಗೆ ಈ ಹಿಂದೆಯೇ ಪ್ರಾಮಿಸ್ ಮಾಡಿದ್ದೇವೆ.ಯಾಕೆಂದರೆ ಕಳೆದ ಬಾರಿ ಅವರಿಗೆ ಅಲ್ಪಾವಧಿಯ ಎಮ್ಮೆಲ್ಸಿಗಿರಿ ನೀಡಲಾಗಿತ್ತು.ಹೀಗಾಗಿ ಈ ಸಲ ಅವರಿಗೆ ಪರಿಷತ್ ದಾರಿ ತೋರಿಸಿ ಹಿಂದೆ ಅದ ಕೊರತೆಯನ್ನು ಸರಿಪಡಿಸಬೇಕು ಎಂಬುದು ಸಿದ್ದರಾಮಯ್ಯ ಅವರ ವಾದ.
ಅವರ ವಾದಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಒತ್ತಾಸೆಯೂ ಇದ್ದು,ರಮೇಶ್ ಬಾಬು ಪರಿಷತ್ತಿಗೆ ಹೋಗಲಿ ಎಂದಿದ್ದಾರೆ.
ಹಾಗೊಂದು ವೇಳೆ ಸಿದ್ಧರಾಮಯ್ಯ,ಮಲ್ಲಿಕಾರ್ಜುನ ಖರ್ಗೆ ಅವರ ವಾದಕ್ಕೆ ವರಿಷ್ಟರು ಮಣಿದರೆ ಮಂಜುಳಾ ನಾಯ್ಡು ಹೆಸರು ಪಟ್ಟಿಯಿಂದ ಹೊರಬೀಳಲಿದೆಯಲ್ಲದೆ,ಮಹಿಳೆಯರ ಕೋಟಾದಡಿ ಕಾಂತಾ ನಾಯಕ್ ಅವರಿಗೆ ಲಕ್ಕು ಕುದುರಲಿದೆ.
ಲಾಸ್ಟ್ ಸಿಪ್
ಅಂದ ಹಾಗೆ ಮುಂಬರುವ ಚುನಾವಣೆಯಲ್ಲಿ ಪಕ್ಷದ ಹಲವು ನಾಯಕರಿಗೆ ಒಂದು ಟಾಸ್ಕ್ ಕೊಡಲು ಬಿಜೆಪಿ ವರಿಷ್ಟರು ನಿರ್ಧರಿಸಿದ್ದಾರಂತೆ.
ಕಾರಣ? ಚುನಾವಣೆಯಲ್ಲಿ ಗೆದ್ದು ಪಕ್ಷ ಅಧಿಕಾರಕ್ಕೆ ಬಂದರೆ ನಾವು ಸಿಎಂ ಆಗಬೇಕು,ಮಿನಿಮಮ್ ಡಿಸಿಎಂ ಆಗಬೇಕು ಅಂತ ಹಲ ನಾಯಕರು ಪಟ್ಟು ಹಿಡಿಯುತ್ತಾರೆ.
ಆದರೆ ಹೀಗೆ ಪಟ್ಟು ಹಿಡಿಯುವವರು ಯಾರು?ಅಂತ ಚುನಾವಣೆಗೂ ಮುನ್ನವೇ ಪಟ್ಟಿ ಮಾಡಲಿರುವ ವರಿಷ್ಟರು ಇಂತಹ ಬಹುತೇಕ ನಾಯಕರಿಗಾಗಿ ಒಂದು ಪರೀಕ್ಷೆ ಏರ್ಪಡಿಸಲಿದ್ದಾರೆ
ಅದರ ಪ್ರಕಾರ,ಇಂತಹ ನಾಯಕರು ಈಗ ತಾವು ಗೆದ್ದು ಬರುತ್ತಿರುವ ಕ್ಷೇತ್ರಗಳ ಬದಲು ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿ ಎಂಬುದು ವರಿಷ್ಟರ ಲೆಕ್ಕಾಚಾರ.
ಕೌತುಕದ ವಿಷಯವೆಂದರೆ ಇಂತಹ ನಾಯಕರ ಪೈಕಿ ಹಲವರಿಗೆ ತಮ್ಮ ಕ್ಷೇತ್ರವನ್ನು ಹೊರತುಪಡಿಸಿದರೆ ಬೇರೆ ಕ್ಷೇತ್ರಗಳಲ್ಲಿ ಪವರ್ ಇಲ್ಲ.
ಹೀಗೆ ತಮ್ಮನ್ನು ಹೊರತುಪಡಿಸಿ ಬೇರೊಬ್ಬರನ್ನು ಗೆಲ್ಲಿಸಲಾಗದವರು ಸಿಎಂ,ಡಿಸಿಎಂ ಹುದ್ದೆಯ ಮೇಲೆ ಕಣ್ಣಿಡುತ್ತಾರೆ.
ಹೀಗಾಗಿ ‘ಬೇರೆ ಕ್ಷೇತ್ರಗಳಲ್ಲಿ ಗೆದ್ದು ತೋರಿಸಿ’ಎಂಬ ಸವಾಲು ಒಡ್ಡಲು,ಅ ಮೂಲಕ ಸಿಎಂ ಹುದ್ದೆ ಆಕಾಂಕ್ಷಿಗಳ ಪಟ್ಟಿಯನ್ನು ಕುಗ್ಗಿಸಲು ವರಿಷ್ಟರು ಯೋಚಿಸಿದ್ದಾರೆ.