ಶಿವಮೊಗ್ಗ,ಅ.
ನ.05:
ಸ್ಪರ್ಧಾತ್ಮಕ ಜಗತ್ತಿನ ಇಂದಿನ ಯುಗದಲ್ಲಿ ಅಗತ್ಯವಿರುವ ಸ್ಪರ್ಧೆ ಹಾಗೂ ಬದುಕುವ ಕಲೆ ಕಲಿಸುವಂತಹ ನಿಟ್ಟಿನಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಆಶಯದಂತೆ ಇಂದು ರಾಜ್ಯಾದ್ಯಂತ ದೀನ ದಲಿತರಿಗೆ, ಬಡವರಿಗೆ ಹಾಗೂ ಎಲ್ಲಾ ವರ್ಗದವರಿಗೆ, ಜಾತಿ ಮತ ಭೇದ ಭಾವವಿಲ್ಲದೆ ಶಿಕ್ಷಣ ನೀಡುವ ಜೊತೆಗೆ ಅವರ ಬದುಕನ್ನು ರೂಪಿಸಲು ಕಾರಣಕರ್ತವಾಗಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.

ಅವರಿಂದು ಬೆಳಿಗ್ಗೆ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಶಾಖಾ ಮಠದ 36ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಭಕ್ತರಿಗೆ ಕೇವಲ ಆಶೀರ್ವಾದ ನೀಡುವ ಕಾರ್ಯ ಮಾಡುತ್ತಿಲ್ಲ. ಭಕ್ತರ ಮಕ್ಕಳಿಗೆ ಬದುಕು ಕಟ್ಟಿಕೊಡುವ ನಿಟ್ಟಿನ ಶಿಕ್ಷಣವನ್ನು ರಾಜ್ಯಾದ್ಯಂತ ನೀಡುತ್ತಿದೆ. ಉನ್ನತ ಮಟ್ಟದ ವೈದ್ಯಕೀಯ, ತಾಂತ್ರಿಕ ಸಂಸ್ಥೆಗಳನ್ನು ಮಹಾ ಸಂಸ್ಥಾನ ಅತ್ಯಂತ ವ್ಯವಸ್ಥಿತವಾಗಿ ನಡೆಸುತ್ತಿದೆ ಎಂದು ಹೇಳಿದರು.

ಮಕ್ಕಳು ಶ್ರದ್ಧೆ ಹಾಗೂ ಶಿಸ್ತು ಬದ್ಧವಾಗಿ ಬಾಲ್ಯಾವಸ್ಥೆಯಿಂದ ಬದುಕು ರೂಪಿಸಿಕೊಂಡಾಗ ಮಾತ್ರ ಅತ್ಯಂತ ವ್ಯವಸ್ಥಿತವಾದ ಸಮಾಜದ ಪ್ರಜೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಚಿಕ್ಕ ವಯಸ್ಸಿಂದಲೇ ಕಾರ್ಯ ಪ್ರವೃತ್ತರಾಗಬೇಕು ಹಾಗೂ ಎಚ್ಚರಿಕೆ ಹೆಜ್ಜೆಗಳನ್ನು ಇಡಬೇಕು ಎಂದು ಹೇಳಿದರು.

1984ರಲ್ಲಿ ಆರಂಭಗೊಂಡ ಶಿವಮೊಗ್ಗ ಶಾಖಾ ಮಠದ ಪರಮ ಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಇಲ್ಲಿಗೆ ಆಗಮಿಸಿದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು 36 ವರ್ಷಗಳ ಕಾಲ ಪುಟ್ಟದಾಗಿದ್ದ ಮಠವನ್ನು ಅತ್ಯಂತ ವಿಸ್ತಾರವಾಗಿ ಜಾತಿ ಮತ ಭೇದವಿಲ್ಲದೆ ಅಪಾರ ಭಕ್ತ ಸಮುದಾಯದ ಜೊತೆಗೆ ಬೆಳೆಸಿರುವುದು ನಿಜಕ್ಕೂ ಶ್ಲಾಘನೀಯ ಹಾಗೂ ಸಂತಸದ ವಿಷಯ ಎಂದರು.
ಮಹಾಸಂಸ್ಥಾನ ನೊಂದವರಿಗೆ ನೆರಳಾಗುವ ಕೆಲಸವನ್ನು ಮಾಡುತ್ತಿದೆ ಎಂಬುದಕ್ಕೆ ನಮ್ಮ ಈ ಶ್ರೀಗಳೇ ಕಾರಣ. ಶಿಕ್ಷಣದ ಜೊತೆ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸಂಗೀತ,ಸಾಹಿತ್ಯಕ್ಕೆ ಅತಿ ಹೆಚ್ಚು ಆದ್ಯತೆ ನೀಡಿದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಕಾರ್ಯ ಇಂದು ಸಾವಿರಾರು ಪ್ರತಿಭಾನ್ವಿತರನ್ನು ರಾಜ್ಯಾದ್ಯಂತ ಹೊರ ತಂದಿದೆ ಎಂದು ಹೇಳಿದರು.

ಮಾಜಿ ಸಚಿವ ಸಿ.ಟಿ. ರವಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಆದಿಚುಂಚನಗಿರಿ ಮಹಾ ಸಂಸ್ಥಾನಮಠ ಶಿಕ್ಷಣ ಹಾಗೂ ಅನ್ನದಾಸೋಹಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದೆ. ಮಠದ ಉದ್ದೇಶ ಎಲ್ಲರ ನಡುವಿನ ಬಾಂಧವ್ಯವನ್ನು ಹೆಚ್ಚಿಸುವುದು ಹಾಗೂ ಸಮಾಜಕ್ಕೆ ಸತ್ಪ್ರಜೆಗಳನ್ನು ನೀಡುವುದೇ ಆಗಿದೆ ಎಂದರು.
ಅತ್ಯಂತ ಉನ್ನತ ಮಟ್ಟದ ಶಿಕ್ಷಣವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ನೀಡುವಂತಹ ಪ್ರಖ್ಯಾತಿಯನ್ನು ಪಡೆದಿರುವ ಆದಿಚುಂಚನಗಿರಿ ಮಠದ ಹಿಂದಿನ ಶ್ರೀಗಳು ಹಾಗೂ ಈಗಿನ ಜಗದ್ಗುರು ಶ್ರೀಗಳ ಕಾರ್ಯ ಶ್ಲಾಘನೀಯವಾದದು ಎಂದರು.
ಆದಿಚುಂಚನಗಿರಿ ಮಠವು ನಮ್ಮಲ್ಲಿ ಸಾತ್ವಿಕತೆಯನ್ನು ಹಾಗೂ ಬೌದ್ಧಿಕತೆಯನ್ನು ಬೆಳೆಸುವ ಜೊತೆಗೆ ನೈತಿಕತೆಯನ್ನು ಬೆಳೆಸಿದೆ. ನಮ್ಮ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮಠದ ಕೊಡುಗೆ ಅಪಾರವಾದದ್ದು, ಶಿಕ್ಷಣದ ಜೊತೆಗೆ ನಮ್ಮ ವ್ಯಕ್ತಿತ್ವ ವೃದ್ದಿಗೆ ಮಠದ ಕೊಡುಗೆ ಅತ್ಯಂತ ಹೆಚ್ಚು ಎಂದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಶಾಖೆಯ ಮುಖ್ಯ ರೂವಾರಿ ಪೂಜ್ಯ ಶ್ರೀ ಪ್ರಸನ್ನನಾಥಸ್ವಾಮೀಜಿ ಸಾನಿಧ್ಯ ವಹಿಸಿದ್ದ ಸಮಾರಂಭದಲ್ಲಿ ಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು ಸ್ವಾಗತಿಸುವ ಜೊತೆಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ವಿಶ್ವವಿದ್ಯಾ ನಿಲಯದ ಕುಲಸಚಿವ ಸುಬ್ಬರಾಯ,ಮಾಯಸಂದ್ರ ಬಿಜಿಎಸ್ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಪುಟ್ಟರಂಗಪ್ಪ, ಚಂದ್ರೇಗೌಡರು ಇನ್ನು ಮುಂತಾದವರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ಲೆಕ್ಕಪರಿಶೋದಕ ವಿಭಾಗದಲ್ಲಿ ಸಾಧನೆ ಮಾಡಿರುವ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಗೆ
ಪರಮಪೂಜ್ಯ ಮಹಾಸ್ವಾಮೀಜಿಯರು ಸನ್ಮಾನಿಸಿ ಕಿರುಕಾಣಿಕೆ ನೀಡಿ ಗೌರವಿಸಿದರು.