ಶಿವಮೊಗ್ಗ: ಆಧ್ಯಾತ್ಮಿಕ ಸಾಧನೆ ಹಾಗೂ ತಪೋನುಷ್ಠಾನಗಳ ಮೂಲಕ ಮಹಾ ತಪಸ್ವಿ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಸಿದ್ಧಿಸಾಧಕರಾಗಿದ್ದಾರೆ. ಕೇವಲ ವೈಯಕ್ತಿಕ ಮುಕ್ತಿಗೆ ಸೀಮಿತವಾಗದೆ ಸಾಮಾಜಿಕ ಹಿತಕ್ಕಾಗಿ ಕಳೆದೆರೆಡು ವರ್ಷಗಳಿಂದ ಕಠಿಣ ಅನುಷ್ಠಾನ ನಡೆಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಇವರ ಅನುಷ್ಠಾನ ಸಂಪನ್ನಗೊಳ್ಳಲಿದ್ದು, ಸಕಲ ಸದ್ಭಕ್ತರ ಸಹಕಾರದಿಂದ ಇವರ ಅನುಷ್ಠಾನ ಮಂಗಲ ಸಮಾರೋಪ ಸಮಾರಂಭದ ರೂಪುರೇಷೆ ಸಿದ್ಧಪಡಿಸಬೇಕಿದೆ ಎಂದು ಸಂಸದ, ಶಿವಯೋಗಾಶ್ರಮದ ಕಾರ್ಯಾಧ್ಯಕ್ಷ ಬಿ.ವೈ. ರಾಘವೇಂದ್ರ ಹೇಳಿದರು.

ಕಾಳೇನಹಳ್ಳಿ- ಕಪ್ಪನಹಳ್ಳಿಯ ಶ್ರೀ ಶಿವಯೋಗಾಶ್ರಮ, ಭದ್ರಾವತಿ ತಾಲೂಕು ಗೋಣಿಬೀಡಿನ ಶ್ರೀಶೀಲ ಸಂಪಾದನಾ ಮಠ ಮತ್ತು ಕಲಬುರಗಿ ಜಿಲ್ಲೆಯ ಕುರಿಕೋಟದ ಶ್ರೀ ಶಿವಲಿಂಗ ಆಶ್ರಮದ ಸಹಯೋಗಾದಲ್ಲಿ ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿಯ ಶಿವಯೋಗಾಶ್ರಮದಲ್ಲಿ ನ.11ರ ಬುಧವಾರ ಮಧ್ಯಾಹ್ನ ಹಮ್ಮಿಕೊಳ್ಳಲಾಗಿದ್ದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಅನುಷ್ಠಾನ ಮಂಗಲ ಸಮಾರೋಪ ಸಮಾರಂಭದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಆಧ್ಯಾತ್ಮಿಕ ಸಾಧನೆಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟಿರುವ ಸಿದ್ದಲಿಂಗ ಶ್ರೀಗಳು ಭಕ್ತರ ಕಷ್ಟ, ಕಾರ್ಪಣ್ಯಗಳೊಂದಿಗೆ ಸಮಾಜದ ಏಳಿಗೆಗೂ ಶ್ರಮಿಸುತ್ತಿದ್ದಾರೆ. ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವAತಹ ಮಹತ್ಕಾರ್ಯ ಮಾಡುತ್ತಿದ್ದಾರೆ. ಕೇವಲ ಧಾರ್ಮಿಕ ಕಾರ್ಯಗಳಿಗಷ್ಟೇ ಸೀಮಿತವಾಗದೆ ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೂ ಆದ್ಯತೆ ನೀಡುತ್ತಿದ್ದಾರೆಂದರು.

ಜನವರಿ 3ರಂದು ಅನುಷ್ಠಾನ ಮಂಗಲ: ಆನಂದಪುರ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, 114 ವರ್ಷಗಳ ಹಿಂದೆ 1912ರಲ್ಲಿ ಹಾನಗಲ್ ಕುಮಾರಸ್ವಾಮಿಗಳಿಂದ ಸ್ಥಾಪಿತವಾದ ಈ ಶಿವಯೋಗಾಶ್ರಮವನ್ನು ಲಿಂ. ರುದ್ರಮುನಿ ಶ್ರೀಗಳು ಮತ್ತು ಲಿಂ. ರೇವಣಸಿದ್ದ ಮಹಾಸ್ವಾಮಿಗಳು ಉನ್ನತ ಮಟ್ಟಕ್ಕೆ ಕೊಂಡೊಯ್ದರು. ಈಗಿನ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾಮಾಜಿಕ ಕಲ್ಯಾಣಕ್ಕಾಗಿ ನಿರಂತರ ಅನುಷ್ಠಾನ ಮಾಡುತ್ತಿದ್ದಾರೆ. ಇವರ ಅನುಷ್ಠಾನ ಮಂಗಲ ಸಮಾರೋಪ ಸಮಾರಂಭ ಜನವರಿ 3ರಂದು ನಡೆಯಲಿದೆ ಎಂದರು.

ಈ ಹಿಂದೆ ಗೋಣಿಬೀಡಿನಲ್ಲಿ ಮೂರು ವರ್ಷ ಅನುಷ್ಠಾನ ನಡೆಸಿದ್ದ ಸಿದ್ದಲಿಂಗ ಶ್ರೀಗಳು ಈಗ ಎರಡು ವರ್ಷದ ಅನುಷ್ಠಾನ ಪೂರ್ಣಗೊಳಿಸಲಿದ್ದಾರೆ. ಮಠವನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸುತ್ತಿರುವ ಶ್ರೀಗಳ ಸೇವೆ ಸಮಾಜಕ್ಕೆ ಅಗತ್ಯ, ಉತ್ತಮ ಸ್ವಾಮೀಜಿಗಳನ್ನುಕಳೆದುಕೊಂಡರೆ ಸಮಾಜಕ್ಕೆ ನಷ್ಟ ಎಂದು ಅಭಿಪ್ರಾಯಿಸಿದರು. ಇದೇ ಸಂದರ್ಭದಲ್ಲಿ ಶ್ರೀಗಳನ್ನು ಅಭಿನಂದಿಸಲಾಯಿತು.
ಮೂಲೆಗದ್ದೆಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ತಿಪ್ಪಾಯಿಕೊಪ್ಪದ ಶ್ರೀ ಮಹಾಂತ ಸ್ವಾಮೀಜಿ, ಗುತ್ತಲದ ಪ್ರಭು ಶ್ರೀಗಳು, ಬರ್ತನೂರು ಮಠದ ಼ಷಡಾಕ್ಷರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಶಿವಯೋಗಾಶ್ರಮದ ಆಡಳಿತಾಧಿಕಾರಿ ಜಿ.ಎ. ಹಿರೇಮಠ, ಶ್ರೀಶೀಲ ಸಂಪಾದನಾ ಮಠದ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ದಯಾಶಂಕರ್, ಕುರಿಕೋಟಮಠದ ಮಠಪತಿ, ಕೆ.ಜಿ. ರುದ್ರಪ್ಪಯ್ಯ ಉಪಸ್ಥಿತರಿದ್ದರು.