ಶಿವಮೊಗ್ಗ,ಆ.22:
ಶಿವಮೊಗ್ಗ ನಗರದಲ್ಲಿ ಅತ್ಯಂತ ವಿಜೃಂಭಣೆಯ ದಸರಾ ಹಬ್ಬದ ಆಚರಣೆ ನಡೆದಿರುವುದು ಶ್ಲಾಘನೀಯ ವಿಚಾರವೇ ಹೌದು. ಆದರೆ ಈ ನಡುವೆ ದಸರಾ ಅಂಬಾರಿ ಮೆರವಣಿಗೆ ಸಂದರ್ಭದಲ್ಲಿ ಅವಘಡ ಇಡೀ ನಾಗರಿಕರನ್ನು ತತ್ತರಗೊಳ್ಳುವಂತೆ ಮಾಡಿದೆ ಎಂದು ಮಾಜಿ ಶಾಸಕ ಕೆಬಿ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

2016ರಲ್ಲಿ ನಾನು ಶಾಸಕನಾಗಿದ್ದಾಗ ಅಂದಿನ ಮೇಯರ್ ಮರಿಯಪ್ಪ ಹಾಗೂ ಕಾರ್ಪೊರೇಟರ್ ಗಳ ಸಹಕಾರದಿಂದ ಅತ್ಯಂತ ವ್ಯವಸ್ಥಿತವಾದ ಚಾಮುಂಡೇಶ್ವರಿ ಅಂಬಾರಿಯನ್ನು ಸಿದ್ಧಪಡಿಸಲಾಗಿತ್ತು. ಈಗ 10 ವರ್ಷದ ಅವಧಿಯಲ್ಲಿ ಈಗ ಅಂಬಾರಿ ಸಂಪೂರ್ಣವಾಗಿ ಪುಡಿ ಪುಡಿಯಾಗಿ ಕಾಣುತ್ತಿರುವುದು ನಿಜಕ್ಕೂ ಮನಸ್ಸಿಗೆ ನೋವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಖ್ಯವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಇದಕ್ಕೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ 10 ತಿಂಗಳಿನಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಲಂಗು ಲಗಾಮು ಇಲ್ಲದೆ ಲಯನ್ಸ್ ಸಫಾರಿ, ಸಕ್ರೇಬೈಲ್ ನಲ್ಲಿ ವರ್ತಿಸುತ್ತಿದ್ದಾರೆ. ವೈದ್ಯೆ ಸಾವು ಕಂಡಾಗಲೂ ಸ್ಪಂದಿಸಿಲ್ಲ. ಈ ಘಟನೆಗಳಹೊಣೆ ಹೊತ್ತುಕೊಂಡಿಲ್ಲ ಅರಣ್ಯ ಇಲಾಖೆಯ ಬೇಜವಾಬ್ದಾರಿಯಿಂದ ಇಡೀ ನಗರದ ನಾಗರಿಕರು ಆತಂಕ ಪಡುವಂತಾಗಿದೆ ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸಮಗ್ರವಾದ ತನಿಖೆ ನಡೆಯಬೇಕು ಎಂದಿದ್ದಾರೆ.

ಅಂಬಾರಿ ಹಾಗೂ ಚಾಮುಂಡೇಶ್ವರಿ ವಿಗ್ರಹ ಮತ್ತು ಘಟನೆಯಲ್ಲಿ ವಾಹನಗಳನ್ನು ಹಾಳು ಮಾಡಿಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಧರ್ಮಾನುಸಾರ ಶಾಂತಿಗೆ ಪೂಜೆ: ಇದೊಂದು ಅಪಶಕುನದ, ಅಶುಭದ ಸಂಕೇತ ಎಂಬ ವಾತಾವರಣ ಜನರ ಮನದಲ್ಲಿ ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಧರ್ಮದವರು ಆಯಾ ಧರ್ಮದ ನಿಯಮಾನುಸಾರ ಶಿವಮೊಗ್ಗ ನಗರದ ನಾಗರಿಕರ ಹಿತಕ್ಕಾಗಿ ಪ್ರಾರ್ಥನೆ ಸಲ್ಲಿಸಲು ಅವರು ಕೋರಿದ್ದಾರೆ.