ಶಿವಮೊಗ್ಗ, ಅ.22
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಕಾರ್ಯಾಚರಣೆ ನಡೆಸುತ್ತಿರುವ ‘ಅಕ್ಕಪಡೆ’ ಇನ್ನು ಮುಂದೆ ತಾಲ್ಲೂಕುಗಳಿಗೆ ಭೇಟಿ ನೀಡಿ ಹೆಚ್ಚಿನ ಅರಿವು ಮೂಡಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ ಸೂಚಿಸಿದರು.
ಗುರುವಾರ ಎಸ್ ಪಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಅಕ್ಕ ಪಡೆ ಯೋಜನೆಯ ಜಿಲ್ಲಾ ಸಮನ್ವಯ ಸಮಿತಿಯ ಎರಡನೇ ತ್ರೈಮಾಸಿಕ ಸಭೆಯ (ಜುಲೈ – ಸೆಪ್ಟೆಂಬರ್ 2026)ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಕುರಿತಂತೆ ಪ್ರಗತಿ ವರದಿಯನ್ನು ಪರಿಶೀಲಿಸಿ, ತಂಡದ ಈವರೆಗಿನ ಕಾರ್ಯವೈಖರಿಯನ್ನು ಶ್ಲಾಘಿಸಿದರು.

‘ಅಕ್ಕ ಪಡೆ’ಯ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಮುಂದುವರೆದಿದ್ದು, ಕಾರ್ಯಾಚರಣೆ ಕೇವಲ ನಗರ ಪ್ರದೇಶಕ್ಕೆ ಸೀಮಿತಗೊಳ್ಳದೆ, ತಾಲ್ಲೂಕುಗಳ ಹಳ್ಳಿಗಳಿಗೂ ತೆರಳಿ ಮಹಿಳಾ ಮತ್ತು ಮಕ್ಕಳ ರಕ್ಷಣೆ ಕುರಿತಂತೆ ಜಾಗೃತಿ ಮೂಡಿಸಲು ವಿಶೇಷ ಗಮನಹರಿಸಬೇಕು.
ಸಂಸ್ಥೆಗಳು ಮತ್ತು ದಾಖಲೆಗಳ ಪರಿಶೀಲನೆ: ಹೋಟೆಲ್ಗಳು ಹಾಗೂ ಲಾಡ್ಜ್ಗಳ ರಿಜಿಸ್ಟರ್ಗಳನ್ನು ತಪಾಸಣೆ ಮಾಡಲು ಹಾಗೂ ಅಪರಿಚಿತ ವ್ಯಕ್ತಿಗಳ ಓಡಾಟದ ಮೇಲೆ ನಿಗಾ ವಹಿಸಲು ಸೂಚಿಸಿದರು.

ಶಾಲೆ-ಕಾಲೇಜುಗಳಲ್ಲಿ ಅರಿವು ಮೂಡಿಸುವಿಕೆ: ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಐ.ಇ.ಸಿ ಕಾರ್ಯಕ್ರಮಗಳ ಸಹಯೋಗದೊಂದಿಗೆ ಶಾಲೆಗಳು ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.
ಭಿಕ್ಷಾಟನೆ, ಬಾಲಕಾರ್ಮಿಕ ಪದ್ಧತಿ ಹಾಗೂ ಇತರೆ ಸಂಕಷ್ಟಗಳಿಗೆ ಒಳಗಾದ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸಿ, ‘ಸಖಿ’ ಕೇಂದ್ರ ಹಾಗೂ ನಿರಾಶ್ರಿತರ ಕೇಂದ್ರಗಳಿಗೆ ದಾಖಲಿಸಲು ಸೂಚಿಸಿದರು.


ಮಹಿಳೆಯರಿಗೆ ಸಂಬಂಧಿಸಿದ ಹೆಚ್ಚಿನ ಕರೆಗಳು ಬಂದ ಸ್ಥಳಗಳು ಮತ್ತು ಹಾಟ್ಸ್ಪಾಟ್ ಪ್ರದೇಶಗಳನ್ನು ಗುರುತಿಸಿ, ಆಯಾ ಸ್ಥಳಗಳಿಗೆ ಭೇಟಿ ನೀಡುವಂತೆ ತಿಳಿಸಿದರು.
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಹಮ್ಮಿಕೊಂಡಿರುವ ಈ ಸಮಗ್ರ ಜಾಗೃತಿ ಹಾಗೂ ರಕ್ಷಣಾ ಕಾರ್ಯಕ್ರಮಗಳು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದು, ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.

ಪ್ರಗತಿ ವರದಿಯ ಮುಖ್ಯಾಂಶಗಳು (ಜುಲೈ – ಸೆಪ್ಟೆಂಬರ್ 2026):
ವರದಿ ಅವಧಿಯಲ್ಲಿ ಅಕ್ಕ ಪಡೆ ತಂಡವು ಶಾಲೆಗಳು, ಕಾಲೇಜುಗಳು, ಹಾಸ್ಟೆಲ್ಗಳು, ಬಸ್ ನಿಲ್ದಾಣಗಳು, ಉದ್ಯಾನವನಗಳು ಮತ್ತು ಮಾರುಕಟ್ಟೆ ಪ್ರದೇಶಗಳಿಗೆ ನೂರಾರು ಭೇಟಿಗಳನ್ನು ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ.
ಅಕ್ಕ ಪಡೆಯು ಜುಲೈ ಯಿಂದ ಸೆಪ್ಟೆಂಬರ್ ವರೆಗೆ ಶಾಲೆ, ಕಾಲೇಜು, ಬಸ್ ನಿಲ್ದಾಣ, ಆಸ್ಪತ್ರೆ, ಉದ್ಯಾನ,ಹೋಟೆಲ್, ಮಾರ್ಕೆಟ್ ಹೀಗೆ 1158 ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ಹಾಗೂ ಮಹಿಳಾ ಸಂಬಂಧಿತ 83 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ.

ಭಿಕ್ಷಾಟನೆ, ಕೌಟುಂಬಿಕ ದೌರ್ಜನ್ಯ, ಬಾಲ ಕಾರ್ಮಿಕ, ಅನಾಥ, ನಿರ್ಗತಿಕ ಸೇರಿದಂತೆ ವಿವಿಧ ರಕ್ಷಣಾ ಕಾರ್ಯಗಳಲ್ಲಿ 685 ರೆಸ್ಕ್ಯು ಪ್ರಕರಣಗಳನ್ನು ದಾಖಲಿಸಿದೆ ಎಂದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಡಿಡಿಪಿಯು, ಡಿಡಿಪಿಐ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.