
ಶಿವಮೊಗ್ಗ : ಆಲ್ಕೊಳ ಸರ್ಕಲ್ನಲ್ಲಿ ಸಂಚಾರ ಪೊಲೀಸರ ಕಾರ್ಯಾಚರಣೆ; ಪೋಷಕರಿಗೆ ಖಡಕ್ ಎಚ್ಚರಿಕೆ
ಶಿವಮೊಗ್ಗ: ಅಪ್ರಾಪ್ತನಿಗೆ ವಾಹನ ಚಲಾಯಿಸಲು ನೀಡಿದ ಸ್ಕೂಟರ್ ಮಾಲೀಕೆಗೆ ₹26,500 ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಸ್ಕೂಟರ್ ನೀಡಿದ್ದ ಪ್ರಕರಣದ ವಿಚಾರಣೆ ನಡೆಸಿದ ಶಿವಮೊಗ್ಗದ 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ ಈ ದಂಡ ವಿಧಿಸಿದೆ.

ಸಂಚಾರ ಪೊಲೀಸರಿಂದ ತಪಾಸಣೆ
2026ರ ಅಕ್ಟೋಬರ್ 9ರಂದು ಸಂಜೆ 5.57ರ ಸಮಯದಲ್ಲಿ ಶಿವಮೊಗ್ಗ ನಗರದ ಆಲ್ಕೊಳ ಸರ್ಕಲ್ ಬಳಿ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಸ್ವಪ್ನಾ ಎಲ್. ಹಾಗೂ ಸಿಬ್ಬಂದಿಗಳಾದ ಸೂರ್ಯನಾಯ್ಕ (ಸಿಪಿಸಿ-1275) ಮತ್ತು ಮೊಹಮ್ಮದ್ ಫಾರೂಕ್ (ಸಿಪಿಸಿ-1371) ಅವರು ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದರು.

ಈ ವೇಳೆ ವಿನೋಬನಗರ ಪೊಲೀಸ್ ಚೌಕಿ ರಸ್ತೆಯ ಕಡೆಯಿಂದ ಆಲ್ಕೊಳ ಸರ್ಕಲ್ ಕಡೆಗೆ ಟಿವಿಎಸ್ ಜುಪಿಟರ್ ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿದ್ದ ಅಪ್ರಾಪ್ತ ಬಾಲಕನನ್ನು ಗಮನಿಸಿದ ಪೊಲೀಸರು, ವಾಹನವನ್ನು ತಡೆದು ಪರಿಶೀಲನೆ ನಡೆಸಿದರು.

ವಾಹನ ಮಾಲೀಕೆಗೆ ಕಾನೂನು ಕ್ರಮ
ವಿಚಾರಣೆ ವೇಳೆ ಸ್ಕೂಟರ್ನ ನೋಂದಾಯಿತ ಮಾಲೀಕೆಯೇ ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ನೀಡಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ವಾಹನದ ಮಾಲೀಕೆಯ ವಿರುದ್ಧ ಮೋಟಾರು ವಾಹನ ಕಾಯ್ದೆಯ ಕಲಂ 199(ಎ), 146, 196, 190(2) ಹಾಗೂ ಕೇಂದ್ರ ಮೋಟಾರು ವಾಹನ ನಿಯಮಾವಳಿ 115ರ ಅಡಿಯಲ್ಲಿ ಪ್ರಕರಣ ದಾಖಲಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ವಾಹನದ ನೋಂದಾಯಿತ ಮಾಲೀಕೆಗೆ ₹26,500 ದಂಡ ವಿಧಿಸಿ ಆದೇಶಿಸಿದೆ.

⚠️ ಪೋಷಕರೇ ಎಚ್ಚರ! ಮಕ್ಕಳ ಕೈಗೆ ವಾಹನ ಕೊಡುವ ಮುನ್ನ ಯೋಚಿಸಿ!
ಅಪ್ರಾಪ್ತರಿಗೆ ಮೋಟಾರು ವಾಹನ ಚಲಾಯಿಸಲು ಅವಕಾಶ ನೀಡುವುದು ಕಾನೂನುಬಾಹಿರ. ಮಕ್ಕಳ ಸುರಕ್ಷತೆಯ ಜೊತೆಗೆ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರ ಜೀವಕ್ಕೂ ಅಪಾಯ ಉಂಟಾಗಬಹುದು.

ಹೀಗಾಗಿ ಪೋಷಕರು ತಮ್ಮ ಮಕ್ಕಳಿಗೆ ವಾಹನ ಚಲಾಯಿಸಲು ನೀಡಬಾರದು. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಶಿವಮೊಗ್ಗ ನಗರ ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ನಿಮ್ಮ ನಿರ್ಲಕ್ಷ್ಯಕ್ಕೆ ಬೀಳಬಹುದು ಭಾರಿ ದಂಡ; ಸಂಚಾರ ನಿಯಮ ಪಾಲಿಸಿ, ಜೀವ ಉಳಿಸಿ!