ಶಿವಮೊಗ್ಗ: ಅ.19: ಅಪರಿಚಿತ ಮೊಬೈಲ್ ಸಂಖ್ಯೆಗಳ ಮೂಲಕ ನಿರಂತರ ಕರೆ ಹಾಗೂ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಕೆ.ಎಸ್.ಈಶ್ವರಪ್ಪ ಅವರು ಗೃಹ ಸಚಿವರಿಗೆ ದೂರು ನೀಡಿದ್ದಾರೆ.

ಈ ಕುರಿತು ಅಕ್ಟೋಬರ್ 19, 2026ರಂದು ಗೃಹ ಸಚಿವರಿಗೆ ಪತ್ರ ಬರೆದಿರುವ ಅವರು, ತಮ್ಮ ಮೊಬೈಲ್ ಸಂಖ್ಯೆಗೆ ಅಪರಿಚಿತ ವ್ಯಕ್ತಿಗಳಿಂದ ಕರೆಗಳು ಹಾಗೂ ಸಂದೇಶಗಳು ಬರುತ್ತಿರುವ ಬಗ್ಗೆ ಗಮನ ಸೆಳೆದಿದ್ದಾರೆ.

ಅಕ್ಟೋಬರ್ 17ರಂದು ಮಧ್ಯಾಹ್ನ 12:30ರ ಸುಮಾರಿಗೆ 9880030004 ಸಂಖ್ಯೆಗೆ ಕರೆ ಬಂದಿದ್ದು, ಬಳಿಕ 7019994981 ಸಂಖ್ಯೆಯಿಂದ ಮಧ್ಯಾಹ್ನ 8:49ರ ಸುಮಾರಿಗೆ ಹಾಗೂ 9823658527 ಸಂಖ್ಯೆಯಿಂದ ರಾತ್ರಿ 10:49ರ ಸುಮಾರಿಗೆ ಕರೆಗಳು ಬಂದಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಕರೆಗಳ ಕುರಿತು ಪರಿಶೀಲನೆ ನಡೆಸಿದಾಗ, ಟೆಲಿಕಾಂ ನಿಯಂತ್ರಣ ಪ್ರಾಧಿಕಾರಕ್ಕೆ (TRAI) ಸಂಬಂಧಿಸಿದಂತೆ ಕರೆ ಮಾಡುತ್ತಿರುವುದಾಗಿ ತಿಳಿಸಿರುವುದನ್ನೂ ಪತ್ರದಲ್ಲಿ ವಿವರಿಸಲಾಗಿದೆ.

ಅಪರಿಚಿತ ವ್ಯಕ್ತಿಗಳಿಂದ ಬರುತ್ತಿರುವ ಇಂತಹ ಕರೆಗಳು ಹಾಗೂ ಸಂದೇಶಗಳಿಂದ ತೊಂದರೆಯಾಗುತ್ತಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆ.ಎಸ್.ಈಶ್ವರಪ್ಪ ಅವರು ಮನವಿ ಮಾಡಿದ್ದಾರೆ.