ಶಿವಮೊಗ್ಗ : ಅಕ್ಟೋಬರ್ 17 : ಪ್ರಜಾಸೇವೆ ಎಂದರೆ ಅಧಿಕಾರಿಗಳು ಸರ್ಕಾರಿ ಕಚೇರಿಯಲ್ಲಿದ್ದು ಕರ್ತವ್ಯ ನಿರ್ವಹಿಸುವುದು ಮಾತ್ರವಲ್ಲ, ಜನರ ನೋವು-ನಲಿವುಗಳಿಗೆ ಸ್ಪಂದಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದು, ಸರ್ಕಾರ ಮತ್ತು ಜನರ ನಡುವಿನ ವಿಶ್ವಾಸದ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಾಗರ ವಿಧಾನ ಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಹೇಳಿದರು.

ಅವರು ಇಂದು ಸಾಗರ ತಾಲೂಕಿನ ಆನಂದಪುರದ ಕಡ್ಲೆಹಂಕ್ಲು ಶ್ರೀ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಪ್ರಜಾಸೇವೆಯ ಮೂಲ ಉದ್ದೇಶವೇ ಜನರ ಕಲ್ಯಾಣ, ಜನರ ಸಮಸ್ಯೆಗಳಿಗೆ ಸ್ಪಂದನೆ ಹಾಗೂ ಸರ್ಕಾರದ ಸೇವೆಗಳನ್ನು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ತಲುಪಿಸುವುದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಕೇಂದ್ರಬಿಂದುವಾಗಿದ್ದು, ಆಡಳಿತವು ಜನಸ್ನೇಹಿ, ಜವಾಬ್ದಾರಿಯುತ ಮತ್ತು ಪರಿಣಾಮಕಾರಿಯಾಗಿರಬೇಕು ಎಂದ ಅವರು ಸಮಾಜದ ಎಲ್ಲ ವರ್ಗಗಳ ಜನರ ಜೀವನಮಟ್ಟ ಸುಧಾರಿಸಿ, ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದು ಸರ್ಕಾರದ ಆಶಯವಾಗಿದೆ ಎಂದರು.

ಈ ಆಂದೋಲನದಲ್ಲಿ ಸ್ವೀಕರಿಸಲಾಗುವ ಸಾರ್ವಜನಿಕರ ಕುಂದುಕೊರತೆಗಳಿಗೆ ನಿಗದಿಪಡಿಸಿದ ಕಾಲಮಿತಿಯಲ್ಲಿ ಪರಿಹಾರ ಒದಗಿಸಲಾಗುವುದು. ಅಲ್ಲದೇ ಸರ್ಕಾರದ ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳ್ಳುವ ಜನಪರ ಯೋಜನೆಗಳು ಮತ್ತು ಅವುಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದಾಗಿದೆ ಎಂದರು.

ಈ ನಿಟ್ಟಿನಲ್ಲಿ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯಿಂದ ಆಡಳಿತ ಯಂತ್ರ ಕಾರ್ಯನಿರ್ವಹಿಸಲು ಹಾಗೂ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಉದ್ದೇಶಿಸಲಾಗಿದೆ ಎಂದರು.
ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಕಾರ್ಯಗಳಲ್ಲಿ ಸಾರ್ವಜನಿಕರ ಅಭಿಪ್ರಾಯ ಮತ್ತು ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಸ್ವಚ್ಛತೆ ಮತ್ತು ಉದ್ಯೋಗಾವಕಾಶಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಾಗೂ ಗ್ರಾಮೀಣ ಜನರ ವೈಯಕ್ತಿಕ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕೊಡಿಸಲು ವಿಶೇಷ ಗಮನಹರಿಸಲಾಗುವುದು ಎಂದರು.

ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳು ಸೇವಾ ಮನೋಭಾವ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಹಾಗೂ ಮಾನವೀಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಪ್ರಜಾಸೇವೆಯ ಉದ್ದೇಶ ಸಫಲವಾಗಲಿದೆ ಎಂದರು.

ಕಸ್ತೂರಿ ರಂಗನ್ ವರದಿ, ಅರಣ್ಯ ಕಾಯ್ದೆಗಳು ಮಲೆನಾಡಿನ ಜನರನ್ನು ಚಿಂತಾಕ್ರಾಂತರನ್ನಾಗಿಸಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವು ರೈತರ ಪರವಾಗಿ ನಿಲ್ಲಲಿದೆ. ಅದಾಗ್ಯೂ ಪರಿಸರ ಸಮತೋಲನ ಕಾದುಕೊಳ್ಳುವಲ್ಲಿ ರೈತರು ತಮಗಿರುವ ಭೂಮಿಯಲ್ಲಿ ಗಿಡ-ಮರಗಳನ್ನು ನೆಟ್ಟು ಪೋಷಿಸುವಂತೆ ಸಲಹೆ ನೀಡಿದರು.
ಎಲ್ಲರೂ ಸ್ವಂತ ಸೂರನ್ನು ಹೊಂದಬೇಕೆಂಬ ಸದಾಶಯದಿಂದ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಉದ್ದೇಶಿಸಿದೆ. ಅದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಅರ್ಹರಾದ 50000 ಫಲಾನುಭವಿಗಳನ್ನು ಗುರುತಿಸಿ ನಿವೇಶನ ನೀಡಲಿದೆ. ಸಾಗರ ತಾಲೂಕಿನ ಸುಮಾರು 8000 ಜನರಿಗೆ ನಿವೇಶನ ಕೊಡಿಸುವ ಆಶಯ ನನಗಿದೆ ಎಂದರು.
ಕಾರ್ಯಕ್ರಮದಲ್ಲಿ ಹೊಲಕ್ಕೆ ಕಾಲುದಾರಿ ನಿರ್ಮಿಸಿ, ಕುಡಿಯುವ ನೀರು ಪೂರೈಸಿ, ಭಾಗ್ಯಲಕ್ಷ್ಮಿ ಸೌಲಭ್ಯ ಕೊಡಿಸಿ, ಅಂಗವಿಕಲರ ವೇತನ ಕೊಡಿಸಿ, ವಿದ್ಯುತ್ ಸೌಲಭ್ಯ ಕಲ್ಪಿಸಿ, ಜಮೀನಿನ ಹಕ್ಕುಪತ್ರ ಕೊಡಿಸಿ, ದುರ್ಬಲ ಮರಗಳನ್ನು ಉರುಳಿಸಿ ಇನ್ನೂ ಮುಂತಾದ ವಿಷಯಗಳ ಅರ್ಜಿಗಳು ಸಲ್ಲಿಕೆಯಾದವು.
ಬೆಳಿಗ್ಗೆ 9ಗಂಟೆಯಿಂದಲೇ ಗ್ರಾಮೀಣ ಜನರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಸರದಿ ಸಾಲಿನಲ್ಲಿ ನಿಂತಿದ್ದರು. ಕಾರ್ಯಕ್ರಮದ ನಡುವೆ ರೈತರಿಗೆ ಮೇವಿನ ಬೀಜದ ಪ್ಯಾಕೆಟ್ ಗಳನ್ನು ಶಾಸಕರು ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಸಿಇಓ ರಿಷಿ ಆನಂದ್, ಎಸಿ ವೀರೇಶ್ ಕುಮಾರ್, ಎಎಸ್ಪಿ ಬೆನಕಪ್ಪ, ಡಾ. ಪ್ರತಿಭಾ ಆರ್, ಮೌನೇಶ್, ಸುಜಾತಾ, ನಂದಿನಿ, ಸಂತೋಷಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಸಹಸ್ರಾರು ಸಂಖ್ಯೆಯ ಗ್ರಾಮಸ್ಥರು ಭಾಗವಹಿಸಿದ್ದರು.