ಶಿವಮೊಗ್ಗ: ಭದ್ರಾವತಿ ನಗರದ ವಿವಿಧ ಹೋಟೆಲ್ಗಳು, ಬೇಕರಿಗಳು ಹಾಗೂ ಸಿಹಿ ತಿನಿಸುಗಳ ತಯಾರಿಕಾ ಘಟಕಗಳ ಮೇಲೆ ಉಪವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದ ಅಧಿಕಾರಿಗಳ ತಂಡ ಬುಧವಾರ ಸಂಜೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿತು.

ಉಪವಿಭಾಗಾಧಿಕಾರಿ ಡಾ. ಮೈತ್ರಿ ಹಾಗೂ ತಹಶೀಲ್ದಾರ್ ಪ್ರದೀಪ್ ದೇವಗಿರಿ ಅವರ ಜಂಟಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆಹಾರ ತಯಾರಿಕೆ ಮತ್ತು ಮಾರಾಟದ ವೇಳೆ ನಿಯಮಗಳನ್ನು ಪಾಲಿಸದಿರುವುದು ಸೇರಿದಂತೆ ಹಲವು ಲೋಪದೋಷಗಳು ಕಂಡುಬಂದವು. ನಿಯಮ ಉಲ್ಲಂಘಿಸಿದ ಅಂಗಡಿ ಮಾಲೀಕರಿಗೆ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದರು.

ಸಿಹಿ ತಿನಿಸು, ಬ್ರೆಡ್, ಕೇಕ್ ಹಾಗೂ ಕ್ರೀಮ್ ತಯಾರಿಕಾ ಘಟಕಗಳಲ್ಲಿ ಪರಿಶೀಲನೆ ನಡೆಸಿದಾಗ ಸ್ವಚ್ಛತೆ ಮತ್ತು ಆಹಾರ ಸುರಕ್ಷತೆಗೆ ಸಂಬಂಧಿಸಿದ ಹಲವು ಅಂಶಗಳನ್ನು ಅಧಿಕಾರಿಗಳು ಗಮನಿಸಿದರು. ಕೆಲವು ಪ್ಯಾಕೆಟ್ಗಳ ಮೇಲೆ ಉತ್ಪನ್ನದ ದರ ಹಾಗೂ ಉತ್ಪಾದನೆ ಮತ್ತು ಅವಧಿ ಮುಗಿಯುವ ದಿನಾಂಕದ ಲೇಬಲ್ಗಳನ್ನು ನಮೂದಿಸದಿರುವುದನ್ನು ಗಮನಿಸಿ, ಸಂಬಂಧಪಟ್ಟ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ, ಪಾನ್ ಶಾಪ್ಗಳ ಸುತ್ತಮುತ್ತಲಿನ ಪ್ರದೇಶಗಳನ್ನೂ ಪರಿಶೀಲಿಸಲಾಯಿತು. ಸಾರ್ವಜನಿಕ ಸ್ಥಳಗಳು ಹಾಗೂ ಪಾದಚಾರಿ ರಸ್ತೆಗಳಲ್ಲಿ ಗುಟ್ಕಾ ತಿಂದು ಉಗುಳಿರುವುದನ್ನು ಕಂಡು ಉಪವಿಭಾಗಾಧಿಕಾರಿ ಡಾ. ಮೈತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಂಗಡಿ ಮಾಲೀಕರು ತಮ್ಮ ಮಳಿಗೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಆಹಾರ ಪದಾರ್ಥಗಳ ತಯಾರಿಕೆ ಮತ್ತು ಮಾರಾಟದಲ್ಲಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕರ ಆರೋಗ್ಯದೊಂದಿಗೆ ಆಟವಾಡುವ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹೋಟೆಲ್ಗಳು, ಬೇಕರಿಗಳು ಹಾಗೂ ಆಹಾರ ತಯಾರಿಕಾ ಘಟಕಗಳಲ್ಲಿ ನಿಯಮಿತ ತಪಾಸಣೆ ನಡೆಸುವ ಅಗತ್ಯವಿದೆ ಎಂಬ ಸಂದೇಶವನ್ನು ಈ ಕಾರ್ಯಾಚರಣೆ ಸಾರಿದೆ.