ಶಿವಮೊಗ್ಗ: ಶಿವಮೊಗ್ಗ ದಸರಾ-2026ರ ಅಂಗವಾಗಿ ಮಲೆನಾಡು ನಾಣ್ಯ ಮತ್ತು ಅಂಚೆಚೀಟಿ ಸಂಗ್ರಾಹಕರ ಸಂಘ ಟ್ರಸ್ಟ್ ವತಿಯಿಂದ ಅ.17 ಮತ್ತು 18ರಂದು ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಪುರಾತನ ನಾಣ್ಯಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಪ್ರಧಾನಕಾರ್ಯದರ್ಶಿ ಎಸ್. ಚಂದ್ರಕಾಂತ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.17ರಂದು ಬೆಳಿಗ್ಗೆ 10.30ಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಸ್. ರುದ್ರೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಕೆ. ಮಾಯಣ್ಣ ಗೌಡ, ಮಲೆನಾಡು ನಾಣ್ಯ ಮತ್ತು ಅಂಚೆಚೀಟಿ ಸಂಗ್ರಾಹಕರ ಸಂಘದ ಅಧ್ಯಕ್ಷ ದೇವದಾಸ ಎನ್. ನಾಯಕ್, ವೀರಶೈವ ಕಲ್ಯಾಣ ಮಂದಿರ ಸಮಿತಿ ಅಧ್ಯಕ್ಷ ಜೆ. ವಿರೂಪಾಕ್ಷಪ್ಪ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಚಂದ್ರಕಾಂತ್ ಉಪಸ್ಥಿತರಿರಲಿದ್ದಾರೆ ಎಂದರು.

ಕರ್ನಾಟಕವನ್ನು ಆಳಿದ ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಅಳುಪರು, ಹೊಯ್ಸಳರು, ವಿಜಯನಗರ ಮತ್ತು ಮೈಸೂರು ಅರಸರ ಕಾಲದ ನಾಣ್ಯಗಳು ಪ್ರದರ್ಶನದಲ್ಲಿರಲಿವೆ. ಹೈದರಾಲಿ ಹಾಗೂ ಟಿಪ್ಪು ಸುಲ್ತಾನ್ ಕಾಲದ ಚಿನ್ನ, ಬೆಳ್ಳಿ, ತಾಮ್ರ ಮತ್ತು ಸೀಸದ ನಾಣ್ಯಗಳನ್ನೂ ವೀಕ್ಷಿಸಬಹುದು ಎಂದರು.

ಶಾತವಾಹನರು, ಕ್ಷತ್ರಪರು, ಗುಪ್ತರು, ಕುಶಾನರು, ಇಂಡೋ-ಗ್ರೀಕರು, ಇಂಡೋ-ಪಾರ್ಥಿಯನ್ನರು, ರೋಮನ್ನರು ಸೇರಿದಂತೆ ವಿವಿಧ ರಾಜವಂಶಗಳ ನಾಣ್ಯಗಳು, ಪ್ರಾಚೀನ ಬೆಳ್ಳಿ ಅಹತ ಮುದ್ರೆಯ ನಾಣ್ಯಗಳು, ದೆಹಲಿ ಸುಲ್ತಾನರು, ಮೊಘಲರು, ಬಹಮನಿ ಹಾಗೂ ವಿಜಯಪುರ ಸುಲ್ತಾನರ ಕಾಲದ ನಾಣ್ಯಗಳೂ ಇರಲಿವೆ. ಬ್ರಿಟಿಷರ ಆಳ್ವಿಕೆಯ ಕಾಲದ ಮತ್ತು ಸ್ವತಂತ್ರ ಭಾರತದ ನಾಣ್ಯಗಳ ಸಂಗ್ರಹವೂ ಪ್ರದರ್ಶನದ ಭಾಗವಾಗಲಿದೆ ಎಂದರು.

ಮೂಡಬಿದಿರೆಯ ನಾಣ್ಯ ಸಂಗ್ರಾಹಕ ನಿತ್ಯಾನಂದ ಪೈ ಸೇರಿದಂತೆ ವಿನೋದ್ ಕುಮಾರ್ ಜೈನ್, ಎಸ್. ಚಂದ್ರಕಾಂತ್, ಎಲ್. ಸುಬ್ರಹ್ಮಣ್ಯ, ಸುರೇಶ್ ಶೇಟ್, ಮಹಮದ್, ಎಸ್. ಸುನಿಲ್ ಕುಮಾರ್, ಮಹೇಂದ್ರ ಕುಮಾರ್ ಜೈನ್, ರಾಘವೇಂದ್ರ, ಸನ್ಮಾನ್ ನಾಗರಾಜ್, ನಾಗಾರ್ಜುನ, ಜಗದೀಶ್, ಮೇರಿ ಡಿಸೋಜಾ ಹಾಗೂ ಪ್ರಕಾಶ್ ಶೇಟ್ ಅವರ ಸಂಗ್ರಹದ ಅಪರೂಪದ ನಾಣ್ಯಗಳು ಪ್ರದರ್ಶನದಲ್ಲಿರಲಿವೆ. ಕರ್ನಾಟಕ ಸೇರಿದಂತೆ ವಿವಿಧ ರಾಜವಂಶಗಳ ಕಾಲದ ಚಿನ್ನ, ಬೆಳ್ಳಿ, ತಾಮ್ರ ಮತ್ತು ಸೀಸದ ನಾಣ್ಯಗಳು, ಭಾರತೀಯ ಹಾಗೂ ರಾಜಪ್ರಭುತ್ವದ ಕಾಲದ ಅಂಚೆಚೀಟಿಗಳು, ದೇಶ-ವಿದೇಶಗಳ ನೋಟುಗಳು ಮತ್ತು 70ಕ್ಕೂ ಹೆಚ್ಚು ದೇಶಗಳ ಪಾಲಿಮರ್ ನೋಟುಗಳನ್ನು ಪ್ರದರ್ಶಿಸಲಾಗುತ್ತದೆ ಎಂದರು.

ಅ.17 ಮತ್ತು 18ರಂದು ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ಸಾರ್ವಜನಿಕರಿಗೆ ಪ್ರದರ್ಶನ ವೀಕ್ಷಿಸಲು ಅವಕಾಶವಿದೆ. ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.

ಟ್ರಸ್ಟ್ ಅಧ್ಯಕ್ಷ ದೇವದಾಸ ಎನ್. ನಾಯಕ್, ಕೋಶಾಧ್ಯಕ್ಷ ವಿನೋದ್ ಕುಮಾರ್ ಜೈನ್, ಟ್ರಸ್ಟಿಗಳಾದ ಅಬದರಿನಾಥ್, ಬಿ. ಜಿ. ಮಹೇಶ್, ರಾಘವೇಂದ್ರ, ಸನ್ಮಾನ್ ನಾಗರಾಜ್ ಇದ್ದರು.
‘ನಾಣ್ಯಗಳನ್ನು ಚಲಾವಣೆಗೆ ಬಿಡಲು ಒತ್ತಾಯ’
ಇತ್ತೀಚೆಗೆ ಬಿಡುಗಡೆಯಾಗುವ ಸ್ಮರಣಾರ್ಥ ನಾಣ್ಯಗಳು ಚಲಾವಣೆಗೆ ಸಿಗುತ್ತಿಲ್ಲ. ದೀನದಯಾಳ್ ಉಪಾಧ್ಯಾಯ ಅವರ ₹5ರ ನಾಣ್ಯಕ್ಕೆ ₹4,000 ಹಾಗೂ ತಾತ್ಯಾ ಟೋಪಿ ಅವರ ₹10ರ ನಾಣ್ಯಕ್ಕೆ ₹5,000 ನೀಡಬೇಕಾದ ಪರಿಸ್ಥಿತಿ ಇದೆ. ಕವಿ ಮುದ್ರಣದ ನಾಣ್ಯ ನೋಡುವುದಕ್ಕೂ ಸಿಗುತ್ತಿಲ್ಲ. ನಾಣ್ಯ ಸಂಗ್ರಹಕಾರರಿಗೆ ಅನುಕೂಲವಾಗುವಂತೆ ಸ್ಮರಣಾರ್ಥ ನಾಣ್ಯಗಳನ್ನು ಕೇಂದ್ರ ಸರ್ಕಾರ ಚಲಾವಣೆಗೆ ಬಿಡುಗಡೆ ಮಾಡಬೇಕು ಎಂದು ಎಸ್. ಚಂದ್ರಕಾಂತ್ ಒತ್ತಾಯಿಸಿದರು.
‘ಟ್ರ್ಯಾಕ್ಟರ್ ಚಿತ್ರವಿರುವ ₹5ರ ನೋಟಿಗೆ ₹20 ಲಕ್ಷ ಎಂಬುದು ಸುಳ್ಳು ಪ್ರಚಾರ’ಟ್ರ್ಯಾಕ್ಟರ್ ಚಿತ್ರವಿರುವ ₹5ರ ನೋಟಿನ ಮುಖಬೆಲೆ ₹5 ಮಾತ್ರ. ನಾಣ್ಯ ಸಂಗ್ರಹಕಾರರ ಬಳಿ ಅದರ ಬೆಲೆ ₹10ರಿಂದ ₹12ರವರೆಗೆ ಇರಬಹುದು. ಆದರೆ ಕೆಲವರು ₹20 ಲಕ್ಷ ನೀಡುವುದಾಗಿ ಹೇಳಿ ಮುಗ್ಧ ಜನರನ್ನು ವಂಚಿಸುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದ ಜನರು ಇಂತಹ ಆಮಿಷಗಳಿಗೆ ಬಲಿಯಾಗುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಕೋಶಾಧ್ಯಕ್ಷ ವಿನೋದ್ ಕುಮಾರ್ ಜೈನ್ ಹೇಳಿದರು.