ಶಿವಮೊಗ್ಗ,ಅ.12: ಹಿರಿಯ ಪತ್ರಕರ್ತರು, ವಾಯ್ಸ್ ಆಫ್ ಶಿವಮೊಗ್ಗದ ಶಿವಮೊಗ್ಗ ಪತ್ರಿಕೆಯ ಸಂಪಾದಕರು ಆಗಿದ್ದ ಭಂಡಿಗಡಿ ನಂಜುಂಡಪ್ಪ ಇಂದು (ಸೋಮವಾರ) ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ (75) ವರ್ಷ ವಯಸ್ಸಾಗಿತ್ತು.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಅವರು ಪತ್ನಿ ಉಮಾ ಭಂಡಿಗಡಿ ಮತ್ತು ಸಹೋದರರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ನಂಜುಂಡಪ್ಪ ಅವರು ಪತ್ರಿಕಾ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ತಮ್ಮ ವಾಯ್ಸ್ ಆಫ್ ಶಿವಮೊಗ್ಗ ಪತ್ರಿಕೆಯ ಸಂಪಾದಕರಾಗಿದ್ದ ಅವರು, ಪತ್ರಿಕೆಯನ್ನು ಅತ್ಯಂತ ಪ್ರೀತಿಯಿಂದ ಹಲವು ದಶಕಗಳ ಕಾಲ ಒಂದು ದಿನವು ತಪ್ಪಿಸದಂತೆ ಜೋಪನವಾಗಿ ಪ್ರಕಟಿಸುತ್ತಾ ಬಂದವರು, ಪ್ರತಿದಿನವು ಪತ್ರಿಕೆಗಳನ್ನು ಅಂಚೆ ಮೂಲಕ ನಿಷ್ಠೆಯಿಂದ ಚಂದದಾರರಿಗೆ ಸ್ವತಃ ಅಂಚೆ ಚೀಟಿ ಅಚ್ಚಿ ಪೋಸ್ಟ್ ಮಾಡುತ್ತಿದ್ದರು.

ಅತ್ಯಂತ ಸರಳ ಮತ್ತು ಧೈವ ಭಕ್ತರಾಗಿದ್ದ ನಂಜುಂಡಪ್ಪನವರು ಪತ್ರಿಕಾ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾಗಿದ್ದರು. ಮತ್ತು ರಾಷ್ಟೀಯ ಮಂಡಳಿ ಸದಸ್ಯರಾಗಿಯೂ ಕೂಡ ಹಲವು ವರ್ಷಗಳಿಂದ ಕರ್ತ್ಯವ್ಯ ನಿಭಾಯಿಸಿದ್ದಾರೆ.

ಅತ್ಯಂತ ಚಟುವಟಿಕೆಯಿಂದ ಇರುತ್ತಿದ್ದ ನಂಜುಂಡಪ್ಪ ಪತ್ರಿಕಾ ಸಂಘಟನೆಯ ಎಲ್ಲಾ ಕೆಲಸಗಳಿಗೂ ಹಾಜರಾಗಿ ಉತ್ತೇಜನ ನೀಡುತ್ತಿದ್ದರು. ವಿಶೇಷವಾಗಿ ತಮ್ಮ ಇಳಿ ವಯಸ್ಸಿನಲ್ಲೂ ಕ್ರೀಡಾ ಕೂಟಗಳಲ್ಲೂ ಭಾಗವಹಿಸಿ ಬಹುಮಾನ ಗೆಲ್ಲುತ್ತಿದ್ದರು. ಯಾರೊಂದಿಗೂ ವಿರಸ ಮಾಡಿಕೊಳ್ಳದ ಅವರು ವೀರಶೈವ ಸಮಾಜದ ಮುಖಂಡರು ಆಗಿದ್ದರು.
ಅವರ ನಿಧನಕ್ಕೆ ಹಲವು ಗಣ್ಯರು ಪತ್ರಕರ್ತ ಸಂಘಟನೆಗಳು, ರಾಜಕೀಯ ಮುಖಂಡರುಗಳು, ಸಮಾಜದ ಬಾಂಧವರು ಕಂಬನಿ ಮಿಡಿದಿದ್ದಾರೆ.