ಶಿವಮೊಗ್ಗ : ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಜಲಾಶಯದ ಒಳಹರಿವಿನ ಪ್ರಮಾಣ ಕ್ರಮೇಣ ಹೆಚ್ಚಾಗುತ್ತಿದ್ದು ಹೆಚ್ಚುವರಿ ನೀರನ್ನು ನದಿಗೆ ಬಿಡುವ ಸಂಭವ ಇರುವುದರಿಂದ ನದಿ ಎಡ ಮತ್ತು ಬಲದಂಡೆಯ ತಗ್ಗು ಪ್ರದೇಶದ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಕೋರಲಾಗಿದೆ.
ಜುಲೈ 26 ರಂದು ಜಲಾಶಯದ ಮಟ್ಟ 180 ಅಡಿಗಿಂತ ಹೆಚ್ಚಾಗಿದ್ದು, ಪ್ರಸ್ತುತ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ 18 ರಿಂದ 20 ಸಾವಿರ ಕ್ಯೂಸೆಕ್‍ಗಳಾಗಿವೆ. ಮುಂದಿನ ದಿನಗಳ ಹೆಚ್ಚಿನ ಮಳೆ ಆಗುವ ಸಂಭವ ಇದ್ದು, ಇದೇ ರೀತಿ ನೀರಿನ ಪ್ರಮಾಣ ಮುಂದುವರೆದಲ್ಲಿ ಜಲಾಶಯದ ಗರಿಷ್ಟ ಮಟ್ಟ 186 ಅಡಿ ಭರ್ತಿಯಾಗುವ ಸಂಭವ ಹೆಚ್ಚಾಗಿದೆ. ಅಣೆಕಟ್ಟು ಸುರಕ್ಷತೆಯ ಹಿತದೃಷ್ಟಿಯಿಂದ ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ಒಳಹರಿವಿನ ಪ್ರಮಾಣಕ್ಕೆ ಅನುಗುಣವಾಗಿ ಸ್ಪಿಲ್ ಗೇಟ್‍ವೇ ಮುಖಾಂತರ ನದಿಗೆ ಬಿಡಲಾಗುವುದು.
ಆದ್ದರಿಂದ ಭದ್ರಾ ನದಿ ಎಡ ಮತ್ತು ಬಲದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ಹೋಗಬೇಕೆಂದು ಕೋರಲಾಗಿದೆ. ನದಿಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ಮೇಯಿಸುವುದನ್ನು ನಿಷೇಧಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಭದ್ರಾ ಯೋಜನಾ ವೃತ್ತದ ಅಧೀಕ್ಷ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!