ಶಿವಮೊಗ್ಗ,ಸೆ.30:
ರೈಲ್ವೆ ನಿಲ್ದಾಣದ ಪ್ರೀ-ಪೇಯ್ಡ್ ಆಟೋ ಕೌಂಟರ್ನಿಂದ ಟಿಕೆಟ್ ಪಡೆದು ಪ್ರಯಾಣಿಸಿದ ಬಳಿಕ, ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ಪಾವತಿಸುವಂತೆ ಕೆಲವು ಆಟೋ ಚಾಲಕರು ಪ್ರಯಾಣಿಕರನ್ನು ಒತ್ತಾಯಿಸುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಸಂಚಾರ ಪೊಲೀಸರು ದಿಢೀರ್ ತಪಾಸಣೆ ನಡೆಸಿದರು.

ಇಂದು ಬೆಳಗಿನ ಜಾವ ೪.೩೦ರಿಂದ ರೈಲ್ವೆ ನಿಲ್ದಾಣದ ಆಟೋಗಳನ್ನು ತಪಾಸಣೆ ನಡೆಸಲಾಯಿತು. ಈ ವೇಳೆ ಆಟೋ ಚಾಲಕರಿಗೆ ಪ್ರೀ-ಪೇಯ್ಡ್ ಟಿಕೆಟ್ನಲ್ಲಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಹಣವನ್ನು ಪ್ರಯಾಣಿಕರಿಂದ ಪಡೆಯದಂತೆ ಎಚ್ಚರಿಕೆ ನೀಡಲಾಯಿತು.

ಬೆಂಗಳೂರು-ತಾಳಗುಪ್ಪ ರೈಲಿನಲ್ಲಿ ಆಗಮಿಸಿದ ಪ್ರಯಾಣಿಕರು ಒಟ್ಟು ೧೧೨ ಪ್ರೀ-ಪೇಯ್ಡ್ ಆಟೋ ಟಿಕೆಟ್ಗಳನ್ನು ಪಡೆದು ಪ್ರಯಾಣಿಸಿರುವುದು ಕಂಡುಬಂದಿದೆ. ರೈಲ್ವೆ ನಿಲ್ದಾಣದಿಂದ ಆಟೋದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಕಡ್ಡಾಯವಾಗಿ ಪ್ರೀ-ಪೇಯ್ಡ್ ಕೌಂಟರ್ನಿಂದ ಟಿಕೆಟ್ ಪಡೆದು, ನಿಗದಿತ ದರದಲ್ಲೇ ಸುರಕ್ಷಿತ ಹಾಗೂ ಪಾರದರ್ಶಕವಾಗಿ ಪ್ರಯಾಣಿಸುವಂತೆ ಪೊಲೀಸರು ಜಾಗೃತಿ ಮೂಡಿಸಿದರು.

ಕಾರ್ಯಾಚರಣೆಯಲ್ಲಿ ಸಿಪಿಐ ದೇವರಾಜ್ ಟಿ.ವಿ., ಪೂರ್ವ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜ್ ಹೆಚ್.ಎನ್. ಸೇರಿದಂತೆ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಪ್ರಯಾಣಿಕರ ಹಿತವೇ ನಮ್ಮ ಆದ್ಯತೆ ಪ್ರೀ-ಪೇಯ್ಡ್ ಟಿಕೆಟ್ ಪಡೆಯಿರಿ, ನಿಗದಿತ ದರದಲ್ಲೇ ಪ್ರಯಾಣಿಸಿ ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.