ಶಿವಮೊಗ್ಗ, ಸೆ, 23): ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಾಗಿದ್ದು, ಮಾನವ ದೀರ್ಘಕಾಲ ಸಮತೋಲನದಿಂದ ಬದುಕಲು ಇದು ಸಹಕಾರಿಯಾಗಿದೆ ಹಾಗೂ ಪ್ರಸ್ತುತದ ಒತ್ತಡದ ಜೀವನಕ್ಕೆ ಉತ್ತಮ ಮದ್ದಾಗಿದ್ದು ಆಯುರ್ವೇದ ಜೀವನ ಶೈಲಿಯನ್ನು ನಾವೆಲ್ಲ ಅಳವಡಿಸಿಕೊಳ್ಳೋಣವೆಂದು ಸಂಸದರಾದ ಬಿ.ವೈ.ರಾಘವೇಂದ್ರ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಹಾಗೂ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆ ಶಿವಮೊಗ್ಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ‘ಆರೋಗ್ಯಕರ ನಾಳೆಗಾಗಿ ಆಯುರ್ವೇದ’ ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾಗಿದ್ದ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ – 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಯುರ್ವೇದ ಎಂಬುದು ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಾಗಿದ್ದು, ಆಯುರ್ವೇದದ ಮುಖ್ಯ ಉದ್ದೇಶ ಕೇವಲ ರೋಗಗಳನ್ನು ಗುಣಪಡಿಸುವುದು ಮಾತ್ರವಲ್ಲ, ರೋಗ ಬರದಂತೆ ತಡೆದು ಮನುಷ್ಯನು ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದಾಗಿದೆ.
ಪ್ರಸ್ತುತ ಆಧುನಿಕ ಯುಗದಲ್ಲಿ ಯುವಶಕ್ತಿ ಮಾನಸಿಕ ಒತ್ತಡಕ್ಕೆ ಒಳಗಾಗುವ ಪರಿಸ್ಥಿತಿ ಇದ್ದು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸೈಕಿಯಾಟ್ರಿಸ್ಟ್, ನ್ಯೂರಾಲಜಿಸ್ಟ್ ಸೇರಿದಂತೆ ವೈದ್ಯರ ಅನುಪಾತ ಕಡಿಮೆ ಇದೆ. ಬರುವ ದಿನದಲ್ಲಿ ಮಾನಸಿಕ ಒತ್ತಡಕ್ಕೆ ಆಯುರ್ವೇದ ವಿಚಾರಗಳನ್ನು ಹಾಗೂ ಜೀವನಶೈಲಿಯನ್ನು ವಿದ್ಯಾರ್ಥಿಗಳಿಗೆ ನೀಡಿದರೆ ಖಿನ್ನತೆ, ಒತ್ತಡ ಕಡಿಮೆ ಆಗಲಿದೆ ಎಂದರು.

ಆಯುರ್ವೇದ ಒಂದು ಬಹುದೊಡ್ಡ ಪರಂಪರೆಯಾಗಿದ್ದು ಉತ್ತಮ ಆರೋಗ್ಯದಿಂದ ದೀರ್ಘಕಾಲ ಸಮತೋಲನದಿಂದ ಬದುಕಲು ಇದು ಸಹಕರಿಸುತ್ತದೆ. ಆಯುರ್ವೇದ ಆರೋಗ್ಯಕರ ಸಮಾಜ ಕಟ್ಟಲು ಅವಕಾಶ ನೀಡಿದೆ ಎಂದ ಅವರು ಕೇಂದ್ರ ಸರ್ಕಾರ ಆಯುರ್ವೇದ ಕುರಿತು ಜಾಗೃತಿ ಮೂಡಿಸಲು 2014 ರಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನ ಕಾರ್ಯಕ್ರಮ ಆರಂಭಿಸಿದೆ. ಪ್ರಸ್ತುತ ದೇಶದಾದ್ಯಂತ 200 ಕ್ಕೂ ಹೆಚ್ಚು ಸರ್ಕಾರಿ ಆಯುರ್ವೇದಿಕ್ ಕಾಲೇಜುಗಳು, 385 ಔಷಧಿ ಕೇಂದ್ರಗಳ ಸ್ಥಾಪನೆಯಾಗಿದೆ. ಹೆಚ್ಚೆಚ್ಚು ಸ್ನಾತಕೋತ್ತರ ಆಯುರ್ವೇದ ಕಾಲೇಜುಗಳ ನಿರ್ಮಾಣ ಆಗುತ್ತಿದ್ದು ಪ್ರಪಂಚ ಆಯುರ್ವೇದದ ಕಡೆ ತಿರುಗಿ ನೋಡುವಂತೆ ಆಗಿದೆ. ಪಿಜಿ ಮತ್ತು ಯುಜಿ ಸೀಟ್ ಗಳ ಸಂಖ್ಯೆ ಸಹ ಹೆಚ್ಚಳ ಆಗಿದೆ. ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಾಗತ್ತಿದೆ. ರೈತರಿಗೆ ಆಯುರ್ವೇದ ಗಿಡಮೂಲಿಕೆ ಬೆಳೆಯಲು ಕೇಂದ್ರ ಉತ್ತೇಜನ ನೀಡುತ್ತಿದೆ. ಸರ್ಕಾರ ಆಯುಷ್ ಇಲಾಖೆಗೆ ಬೆಳಕನ್ನು ಕೊಡುವ ಮೂಲಕ ಆರೋಗ್ಯಕರ ಸಮಾಜ ನೀಡಲು ಮುಂದಾಗಿದೆ. ಜಿಲ್ಲೆಯಲ್ಲಿ ಆಯುರ್ವೇದ ನ್ಯಾಚುರೋಪತಿ & ಯೋಗ ರೀಸರ್ಚ್ ರೀಜನಲ್ ಸೆಂಟರ್ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ. ವಿವಿಧ ರಾಜ್ಯಗಳಿಗೆ ಸಂಪರ್ಕಿಸುವ ವಂದೇ ಭಾರತ್ ರೈಲು ಸಹ ಜಿಲ್ಲೆಗೆ ಬರಲಿದ್ದು ಆಯುರ್ವೇದ, ಮೆಡಿಕಲ್ ಕಾಲೇಜುಗಳು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ರಾಷ್ಟಿçÃಯ ರಕ್ಷಾ ವಿಶ್ವವಿದ್ಯಾಲಯಗಳು ಇದ್ದು ಜಿಲ್ಲೆ ಸರ್ವಾಂಗೀಣವಾಗಿ ಅಭಿವೃದ್ಧಿಯಾಗುತ್ತಿದೆ ಎಂದರು.

ಇಂತಹ ಶ್ರೇಷ್ಟ ವೃತ್ತಿ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸಲು ಸಂಕಲ್ಪ ಮಾಡಿರುವುದು ಉತ್ತಮ ವಿಚಾರ ಎಂದು ವಿದ್ಯಾರ್ಥಿಗಳನ್ನು ಇದೇ ವೇಳೆ ಅಭಿನಂದಿಸಿದರು.
ಶಾಸಕರಾದ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ಆಯುರ್ವೇದ ಪದ್ದತಿ ನಮ್ಮ ಪ್ರಾಚೀನ ಪರಂಪರೆ. ಜಗತ್ತಿಗೇ ಶಕ್ತಿ ಕೊಡುವ ಕೆಲಸ ಇದು ಮಾಡುತ್ತಿದೆ. ವಿಶೇಷ ದಿವ್ಯ ಔಷಧದಂತೆ ಇದ್ದ್ದು ಖಾಯಿಲೆಗೆ ಔಷಧಿ ಎನ್ನುವುದಕ್ಕಿಂತ ಇದು ಉತ್ತಮ ಜೀವನಶೈಲಿಯ ಬಗ್ಗೆ ತಿಳಿಸುತ್ತದೆ. ಪಶ್ಚಿಮ ಘಟ್ಟಗಳಲ್ಲಿ ವಿಶೇಷ ಗಿಡಮೂಲಿಕೆಗಳಿವೆ. ಅಡುಗೆ ಮನೆಯಲ್ಲೇ ಆಯುರ್ವೇದ ಇದೆ. ಆರೋಗ್ಯಕ್ಕೆ ಪೂರಕವಾದ ಅನೇಕ ಪದಾರ್ಥಗಳನ್ನು ನಮ್ಮ ಆಹಾರ ಕ್ರಮದಲ್ಲಿ ಪೂರ್ವಜರು ನೀಡಿದ್ದಾರೆ. ಆಯುರ್ವೇದ ನಮ್ಮ ಜೀವನದ ಹಾಸುಹೊಕ್ಕಾಗಿದ್ದು ಇದು ತಿಳಿಸುವ ಜೀವನಶೈಲಿ ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದ ಅವರು ಆಯುಷ್ ಇಲಾಖೆಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಡಾ.ರವಿಶAಕರ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿ, ಆಯುರ್ವೇದ 5000 ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ಪರಂಪರೆ. ಆರೋಗ್ಯಯುತ ಜೀವನಶೈಲಿ ಇದಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರಸ್ತುತ ದಿನಮಾನದಲ್ಲಿ ಅಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡುತ್ತಿದ್ದು ಇದಕ್ಕೆ ನಿಯಂತ್ರಣ ಸಾಧಿಸಲು ಆರೋಗ್ಯ ಮತ್ತು ಜೀವನ ಶೈಲಿ ಕಡೆ ಹೆಚ್ಚಿನ ಗಮನ ಹರಿಸಬೇಕು.
ಆಯುರ್ವೇದ ದಿನಾಚರಣೆ ಅಂಗವಾಗಿ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳಿಗೆ ಉಪನ್ಯಾಸ, ಉಚಿತ ಆರೋಗ್ಯ ತಪಾಸಣೆ, ಔಷಧ ಸಸ್ಯಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಅಂಗರಾಜು ಎಸ್. ಹಿಂಡಸಗಟ್ಟಿ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಯ ಪ್ರಾಚಾರ್ಯರಾದ ಡಾ. ವೀಣಾ ಎಂ ಎಸ್., ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಶಿವಮೊಗ್ಗ ಘಟಕ ಅಧ್ಯಕ್ಷ ಡಾ.ಜಾಧವ್, ಆಯುರ್ವೇದ ಕಾಲೇಜಿನ ಆರ್ ಎಂ ಓ ಡಾ.ಹರ್ಷ ಪುತ್ರಾಯ, ಪುರಪ್ಪೆಮನೆ ಸರ್ಕಾರಿ ಆಯುರ್ವೇದ ಕೇಂದ್ರದ ಡಾ.ಪತಂಜಲಿ, ಬಾಪೂಜಿ ನರ್ಸಿಂಗ್ ಕಾಲೇಜಿನ ಡಾ.ಶುಭ ಕೊಳಗದ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಶಿವಕುಮಾರ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀನಿವಾಸ್ ಹಾಗೂ ಶಿವಮೊಗ್ಗದ ವಿವಿಧ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಗಳು ಮತ್ತು ಬಾಪೂಜಿ ಕಾಲೇಜುಗಳ ವೈದ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.