ಶಿವಮೊಗ್ಗ, ಸೆ.22 ಮ್ಯಾಪಿಂಗ್ ಇಲ್ಲದಿರುವ, ದೋಷವಿರುವ ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಮತದಾರರಿಂದ ಸಮರ್ಪಕವಾದ ದಾಖಲೆಗಳನ್ನು ಪಡೆದು ಸರಿಪಡಿಸುವ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಮಾಡಬೇಕೆಂದು ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರಾದ ಕೆ.ಬಿ.ಶಿವಕುಮಾರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್ ಐ ಆರ್)ಹಾಗೂ ಭಾವಚಿತ್ರ ಸಹಿತ ಮತದಾರರ ಪಟ್ಟಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಮತದಾರರ ಪಟ್ಟಿಯನ್ನು ದೋಷರಹಿತವಾಗಿ ಹಾಗೂ ಪಾರದರ್ಶಕವಾಗಿ ಸಿದ್ಧಪಡಿಸುವ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
ಮ್ಯಾಪಿಂಗ್ ಇಲ್ಲದಿರುವ/ದೋಷವಿರುವ ಮತದಾರರ ಅಂಕಿ-ಅಂಶಗಳನ್ನು ಪರಿಶೀಲಿಸಿದ ಅವರು, ವರದಿಯ ಪ್ರಕಾರ ಜಿಲ್ಲೆಯಲ್ಲಿ ಮ್ಯಾಪಿಂಗ್ ಇಲ್ಲದಿರುವ ಮತ್ತು ದೋಷವಿರುವ ಒಟ್ಟು 48,666 ಮತದಾರರನ್ನು ಗುರುತಿಸಲಾಗಿದೆ.
ಮ್ಯಾಪಿಂಗ್ ಇರದ ಮತದಾರರು 15,164
ದೋಷವಿರುವ ಮತದಾರರು 33,502 ಇದ್ದು ಈ ಸಂಬಂಧ ಮತದಾರರಿಂದ ಸಮರ್ಪಕ ದಾಖಲೆಗಳನ್ನು ತೆಗೆದುಕೊಂಡು ಇದನ್ನು ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿ ಎಲ್ ಓ ಗಳು ನಿಗದಿತ ಭೇಟಿಗಳನ್ನು ಮಾಡಬೇಕು. ಮರಣ ಹೊಂದಿದವರು, ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡವರು ಅಥವಾ ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವಾಗ, ನಿಯಮಾವಳಿ ಪ್ರಕಾರ ಮಾಡಬೇಕು. ಮತದಾರರ ಕರಡು ಪಟ್ಟಿಯನ್ನು ಪ್ರದರ್ಶಿಸಬೇಕು. ಮನೆ ಭೇಟಿ ವೇಳೆ ಸ್ಟಿಕ್ಕರ್ ಹಚ್ಚುವುದನ್ನು ದಾಖಲು ಮಾಡಬೇಕು. ಎಸ್ ಐ ಆರ್ ನ ಪ್ರತಿ ಚಟುವಟಿಕೆಗಳ ಬಗ್ಗೆ ಕಡತ ನಿರ್ವಹಿಸಬೇಕು. ಸಮರ್ಪಕ ದಾಖಲಾತಿಗಳ ನಿರ್ವಹಣೆ ಅತಿ ಮುಖ್ಯವಾಗಿದ್ದು ಫಾರ್ಮ್, 6, 7, 8 ರ ಬಗ್ಗೆ ನಿಗಾ ವಹಿಸಿ ದಾಖಲು ಮಾಡಿ ಕ್ರಮ ವಹಿಸಬೇಕು.
ಅರ್ಹ ಮತದಾರರ ಸೇರ್ಪಡೆ: 18 ವರ್ಷ ತುಂಬಿದ ಯುವ ಮತದಾರರನ್ನು ತಪ್ಪದೇ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಬಿಎಲ್ಒ ಮಟ್ಟದಲ್ಲಿ ಪರಿಣಾಮಕಾರಿ ಜಾಗೃತಿ ಮೂಡಿಸಲು ಸೂಚಿಸಿದರು.

ದೋಷರಹಿತ ಪಟ್ಟಿ ಸಿದ್ಧತೆ: ಮತದಾರರ ಪಟ್ಟಿಯಲ್ಲಿರುವ ಹೆಸರು, ವಿಳಾಸ, ಭಾವಚಿತ್ರ ಹಾಗೂ ಲಿಂಗ ವರ್ಗೀಕರಣದಲ್ಲಿರುವ ಲೋಪದೋಷಗಳನ್ನು ತಕ್ಷಣ ಸರಿಪಡಿಸಿ, ಯಾವುದೇ ಅರ್ಹ ಮತದಾರರು ಹೊರಗುಳಿಯದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮತಗಟ್ಟೆ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳು ಹಾಗೂ ಮತದಾರರ ಅನುಕೂಲಕ್ಕೆ ತಕ್ಕಂತೆ ಮತಗಟ್ಟೆಗಳ ಮರುಸಂಘಟನೆ ಕುರಿತು ಪ್ರಸ್ತಾಪಿಸಿದ ಅವರು ಬಿಎಲ್ ಒ ಯಿಂದ ಹಿಡಿದು ಎಲ್ಲ ಅಧಿಕಾರಿಗಳು ಉತ್ತಮವಾಗಿ, ಸಮರ್ಪಕವಾಗಿ ತಮ್ಮ ತಮ್ಮ ಕರ್ತವ್ಯ ನಿರ್ವಹಿಸುವ ಮೂಲಕ ಪ್ರಗತಿ ಸಾಧಿಸಬೇಕೆಂದು ತಿಳಿಸಿದರು.


ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 15,19,459 ಮತದಾರರಿದ್ದು, ಅವರಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ. 9044 ಯುವ ಮತದಾರರ ಸೇರ್ಪಡೆಯಾಗಿದೆ.
ಪುರುಷ ಮತದಾರರು: 7,45,941
ಮಹಿಳಾ ಮತದಾರರು: 7,73,487
ತೃತೀಯ ಲಿಂಗಿಗಳು: 31 ಇದ್ದಾರೆ.
ಶಿವಮೊಗ್ಗ ಗ್ರಾಮಾಂತರ: 2,20,250.
ಭದ್ರಾವತಿ: 2,14,907. ಶಿವಮೊಗ್ಗ: 2,77,098.ತೀರ್ಥಹಳ್ಳಿ: 1,92,314.
ಶಿಕಾರಿಪುರ: 2,06,415.ಸೊರಬ: 1,98,955. ಸಾಗರ: 2,09,520 ಮತದಾರರು ಇದ್ದಾರೆಂದು ತಿಳಿಸಿದರು.
ಎನ್ಯುಮರೇಷನ್ ಫಾರ್ಮ್ ಡಿಜಿಟಲೀಕರಣದ ಸ್ಥಿತಿ:
ಒಟ್ಟು ಮತದಾರರಲ್ಲಿ ಶೇಕಡಾ 87.59% ರಷ್ಟು ಅಂದರೆ 13,30,905 ಅರ್ಜಿಗಳ ಡಿಜಿಟಲೀಕರಣ ಪೂರ್ಣಗೊಂಡಿದೆ.
ತೀರ್ಥಹಳ್ಳಿ ಕ್ಷೇತ್ರದಲ್ಲಿ ಗರಿಷ್ಠ 92.39% ಡಿಜಿಟಲೀಕರಣ ಪೂರ್ಣಗೊಂಡಿದೆ.

ಸೊರಬ ಕ್ಷೇತ್ರದಲ್ಲಿ 91.85% ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ 91.56% ಪ್ರಗತಿ ಸಾಧಿಸಲಾಗಿದೆ.
ಶಿವಮೊಗ್ಗ ಕ್ಷೇತ್ರದಲ್ಲಿ ಕನಿಷ್ಠ 79.63% ಡಿಜಿಟಲೀಕರಣವಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಎಸಿ ಡಾ.ಮೈತ್ರಿ, ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು,
ತಹಶೀಲ್ದಾರರು, ಚುನಾವಣಾ ಶಾಖೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭಾಗವಹಿಸಿದ್ದರು.
————————-