ಶಿವಮೊಗ್ಗ: ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಉದ್ದೇಶದಿಂದ ಶಾಂತಿ ನಡಿಗೆ ಸೌಹಾರ್ದವೆ ಹಬ್ಬ ಸಮಿತಿಯ ನೇತೃತ್ವದಲ್ಲಿ ವಿವಿಧ ಧರ್ಮಗಳ ಮುಖಂಡರು ಹಾಗೂ ನಾಗರಿಕರು ಸೋಮವಾರ ಒಂದಾಗಿ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿಗೆ ಮಾಲಾರ್ಪಣೆ ಮಾಡಿ ಸೌಹಾರ್ದತೆ ಮೆರೆದರು.

ನಗರದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಕಳೆದ ಐದು ವರ್ಷಗಳಿಂದ ಸತತವಾಗಿ ಸರ್ವಧರ್ಮೀಯ ನಾಗರಿಕರು ಒಗ್ಗೂಡಿ ಶಾಂತಿ ನಡಿಗೆ ನಡೆಸಿಕೊಂಡು ಬರುತ್ತಿದ್ದಾರೆ. ಈದ್ ಮಿಲಾದ್ ಮೆರವಣಿಗೆ ಹಾಗೂ ಹಿಂದೂ ಮಹಾಸಭಾ ಗಣಪತಿಗೆ ಮಾಲಾರ್ಪಣೆ ಮಾಡುವ ಮೂಲಕ ಸೌಹಾರ್ದತೆಯ ಸಂದೇಶ ಸಾರುವ ಪರಂಪರೆಯೂ ಮುಂದುವರಿದಿದೆ ಎಂದು ಶಾಂತಿ ನಡಿಗೆ ಸಮಿತಿ ಸಂಚಾಲಕ ಕೆ.ಪಿ. ಶ್ರೀಪಾಲ್ ತಿಳಿಸಿದರು.

ಈ ಕುರಿತು ಮಾತನಾಡಿದ ವಕೀಲ ಕೆ ಪಿ ಶ್ರೀಪಾಲ್ ವಿವಿಧ ಧರ್ಮಗಳ ಜನರು ಪರಸ್ಪರ ಗೌರವ, ಸಹಬಾಳ್ವೆ ಹಾಗೂ ಸಹೋದರತ್ವದೊಂದಿಗೆ ಬದುಕುವುದು ಸಮಾಜದ ಶಾಂತಿಗೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ವಧರ್ಮೀಯರು ಒಗ್ಗೂಡಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಸಮಾಜಕ್ಕೆ ನೀಡಲಾಗುತ್ತಿದೆ ಎಂದರು.
ಸೋಮವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಪ್ರತಿನಿಧಿಗಳು ಹಾಗೂ ಸಾಮಾಜಿಕ ಸಂಘಟನೆಗಳ ಮುಖಂಡರು ಒಟ್ಟಾಗಿ ತೆರಳಿ ಹಿಂದೂ ಮಹಾಸಭಾ ಗಣಪತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀಪಾಲ್ ಕೆ.ಪಿ., ಸುರೇಶ್ ಅರಸಾಳು, ಲಿಯಾಕತ್ (ಸುದ್ದಿಭಾರತಿ ಮತ್ತು ಇನ್ಕಿಲಾಬ್ ಪತ್ರಿಕೆಗಳ ವರದಿಗಾರರು), ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ನ ಸಹಾಯಕ ಪ್ಯಾರಿμï ಪಾದ್ರಿ ಫಾದರ್ ಗ್ಲಾನ್ಸನ್ ಡಿಸೋಜಾ, ರಾಗಿಗುಡ್ಡ ಸೇಂಟ್ ಆಂಥೋನಿಸ್ ಚರ್ಚ್ನ ಪ್ಯಾರಿμï ಪಾದ್ರಿ ಫಾದರ್ ಸಂತೋμï ಪೆರೇರಾ, ಮಲ್ಲಿಗೆನಹಳ್ಳಿಯ ಫಾದರ್ ಅರುಣ್ ವೆನಿಲ್ ಡಿಸಿಲ್ವಾ ಉಪಸ್ಥಿತರಿದ್ದರು.

ಅದೇ ರೀತಿ ರೈತ ಸಂಘದ ರಾಘವೇಂದ್ರ, ನಾಗರಾಜ್ ಪುರದಾಳು, ಅಂಬೇಡ್ಕರ್ ಸೇನೆಯ ಜಮೀರ್, ಮುಸ್ಲಿಂ ಮುಖಂಡರಾದ ಮಹಮದ್ ಹುಸೇನ್, ವಕೀಲರಾದ ಅತಾವುಲ್ ಖಾನ್, ಲಿಯಾಕತ್ ಹಾಗೂ ಮುಭಾರಕ್, ಶೇಕ್ ಹಸೀನ್, ಕಾನೂನು ವಿದ್ಯಾರ್ಥಿಗಳಾದ ಪ್ರತಾಪ್ ಹಾಗೂ ಆಧ್ಯಾಂತ್ ಕೆ.ಎಸ್. ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ನಾಗರಿಕರು ಭಾಗವಹಿಸಿದ್ದರು.
ವಿವಿಧ ಧರ್ಮಗಳ ಜನರು ಪರಸ್ಪರ ಗೌರವ ಹಾಗೂ ಸಹಬಾಳ್ವೆಯೊಂದಿಗೆ ನಡೆದುಕೊಂಡಾಗ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಮತ್ತಷ್ಟು ಬಲಗೊಳ್ಳುತ್ತದೆ. ಇಂತಹ ಸರ್ವಧರ್ಮೀಯ ಕಾರ್ಯಕ್ರಮಗಳ ಮೂಲಕ ಶಿವಮೊಗ್ಗ ನಗರದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದ ವಾತಾವರಣವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಸಮಿತಿ ಸದಸ್ಯರು ತಿಳಿಸಿದರು.