ಶಿವಮೊಗ್ಗ, ಸೆ, 1ನಗರದ ಆಟೋ ಕಾಂಪ್ಲೆಕ್ಸ್ ಪ್ರದೇಶದಲ್ಲಿರುವ ಗ್ಯಾರೇಜ್ ಒಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ, ಕೆಲಸದಲ್ಲಿ ತೊಡಗಿದ್ದ ಇಬ್ಬರು ಕಿಶೋರ ಕಾರ್ಮಿಕರನ್ನು ರಕ್ಷಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ಆಗಸ್ಟ್ 28 ರಂದು ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ಜಂಟಿಯಾಗಿ ಆಟೋ ಕಾಂಪ್ಲೆಕ್ಸ್ ಪ್ರದೇಶದಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಿದರು.

- ಈ ವೇಳೆ ‘ಸ್ಟಾರ್ ಡ್ರೈವ್ ಶಾಪ್ ವರ್ಕ್ಸ್’ ಎಂಬ ಗ್ಯಾರೇಜ್ನಲ್ಲಿ ಇಬ್ಬರು ಕಿಶೋರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವುದು ಕಂಡುಬಂದಿದೆ. ಅಧಿಕಾರಿಗಳು ತಕ್ಷಣವೇ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಿದ್ದಾರೆ. ಜೊತೆಗೆ ಗ್ಯಾರೇಜ್ ಮಾಲೀಕರಿಗೆ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016ರ ಕುರಿತು ಅರಿವು ಮೂಡಿಸಿದ್ದಾರೆ.

ಈ ಜಂಟಿ ತಪಾಸಣೆ ಕಾರ್ಯಚರಣೆಯಲ್ಲಿ ಕಾರ್ಮಿಕ ನಿರೀಕ್ಷಕಿ ಶ್ರೀಮತಿ ಸುಖೀತಾ ಕೆ.ಸಿ, ಯೋಜನಾ ನಿರ್ದೇಶಕ ರಘುನಾಥ್ ಎ.ಎಸ್, ವಿನೋಬನಗರ ಪೊಲೀಸ್ ಠಾಣೆಯ ಇಸ್ರತ್ ಅಲಿ ಬೇಗ್, ಶಿಕ್ಷಣ ಇಲಾಖೆಯ ಪ್ರವೀಣ್, ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ವನಜಾ ಹಾಗೂ ಮಕ್ಕಳ ಸಹಾಯವಾಣಿಯ ಸಿಬ್ಬಂದಿಗಳಾದ ಅಭಿಷೇಕ್, ಅರ್ಪಿತಾ ಮತ್ತು ಕಾವ್ಯ ಉಪಸ್ಥಿತರಿದ್ದರು.

ಕಾನೂನು ಕ್ರಮದ ಎಚ್ಚರಿಕೆ:
ಶಿವಮೊಗ್ಗ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಅಂಗಡಿ, ವಾಣಿಜ್ಯ ಸಂಸ್ಥೆಗಳು ಮತ್ತು ಇತರ ಉದ್ದಿಮೆಗಳಲ್ಲಿ 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಸಂಪೂರ್ಣ ನಿಷಿದ್ಧವಾಗಿದೆ. ಹಾಗೆಯೇ 18 ವರ್ಷದೊಳಗಿನ ಕಿಶೋರ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ.
ಯಾರಾದರೂ ಕಾನೂನು ಉಲ್ಲಂಘಿಸಿ ಬಾಲ ಅಥವಾ ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿರುವುದು ಕಂಡುಬಂದಲ್ಲಿ, ಅವರ ವಿರುದ್ಧ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಕಾಯ್ದೆಯಡಿ ಪೊಲೀಸ್ ಪ್ರಕರಣ ದಾಖಲಿಸಲಾಗುವುದು. ತಪ್ಪಿತಸ್ಥ ಮಾಲೀಕರಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 50,000 ರೂಪಾಯಿಗಳವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ತಿಳಿಸಿದ್ದಾರೆ.