ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ಅಯುಕ್ತರ ನಿರ್ದೇಶನದ ಮೇರೆಗೆ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ನಗರದ ಗಾಂಧಿ ಬಜಾರ್ ವ್ಯಾಪ್ತಿಯಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿ, ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಹಾಗೂ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಪರಿಶೀಲನೆ ನಡೆಸಿದರು.

ಕಾರ್ಯಾಚರಣೆ ವೇಳೆ ನಿಯಮಬಾಹಿರವಾಗಿ ಮಾರಾಟಕ್ಕೆ ಇಡಲಾಗಿದ್ದ ನಿಷೇಧಿತ ಪ್ಲಾಸ್ಟಿಕ್ ಪದಾರ್ಥಗಳನ್ನು ಜಪ್ತಿ ಮಾಡಲಾಯಿತು. ನಿಯಮ ಉಲ್ಲಂಘಿಸಿದ ಮಾರಾಟಗಾರರಿಗೆ ಒಟ್ಟು ₹20,000 ದಂಡ ವಿಧಿಸಿ, ಸ್ಥಳದಲ್ಲೇ ದಂಡದ ಮೊತ್ತವನ್ನು ವಸೂಲಿ ಮಾಡಲಾಗಿದೆ.

ಪುನರಾವರ್ತನೆಯಾದರೆ ಕಠಿಣ ಕ್ರಮ
ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ನಿಯಮ ಉಲ್ಲಂಘನೆ ಕಂಡುಬಂದರೆ ಅಂಗಡಿಗಳ ಪರವಾನಗಿ ರದ್ದುಪಡಿಸುವುದು ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವರ್ತಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

ಕಾರ್ಯಾಚರಣೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ), ಆರೋಗ್ಯ ನಿರೀಕ್ಷಕರು ಹಾಗೂ ಮಹಾನಗರ ಪಾಲಿಕೆಯ ಪೌರಕಾರ್ಮಿಕ ಸಿಬ್ಬಂದಿ ಭಾಗವಹಿಸಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟದ ಕುರಿತು ಪರಿಶೀಲನೆ ನಡೆಸಿದರು.
ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಸಹಕರಿಸಿ

ನಗರದ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವರ್ತಕರು ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡದಂತೆ ಹಾಗೂ ಸಾರ್ವಜನಿಕರು ಅದರ ಬಳಕೆಯನ್ನು ಕೈಬಿಟ್ಟು ಪರ್ಯಾಯ ವಸ್ತುಗಳನ್ನು ಬಳಸುವಂತೆ ಮಹಾನಗರ ಪಾಲಿಕೆ ಮನವಿ ಮಾಡಿದೆ.
ಸ್ವಚ್ಛ, ಸುಂದರ ಹಾಗೂ ಪ್ಲಾಸ್ಟಿಕ್ ಮುಕ್ತ ಶಿವಮೊಗ್ಗ ನಿರ್ಮಾಣಕ್ಕೆ ಸಾರ್ವಜನಿಕರು ಮತ್ತು ವರ್ತಕರು ಸಹಕಾರ ನೀಡಬೇಕು ಎಂದು ಪಾಲಿಕೆ ಅಧಿಕಾರಿಗಳು ಕೋರಿದ್ದಾರೆ.