ಶಿವಮೊಗ್ಗ,ಆ.31:
ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಕಳೆಗುಂದುತ್ತಿದೆ. ಎಲ್ಲಾ ಚುನಾವಣೆಯಲ್ಲಿ ಸೋಲುತ್ತಿದೆ. ಇಲ್ಲೇ ಕ್ರಾಸ್ ಓಟಿಂಗ್ ಆಗಿದೆ. ಹಿಂದುತ್ವದ ಸಿದ್ದಾಂತದ ಬಿಜೆಪಿ ಅದನ್ನ ಮರೆತಿರುವ ಬಗ್ಗೆ ನನ್ನಂತಹ ಸಾವಿರಾರು ಪಕ್ಷದ ಒಳಗೆ ಹೊರಗೆ ಇರುವ ಪ್ರಾಮಾಣಿಕ ಕಾರ್ಯಕರ್ತರ ಅಳಲಾಗಿದೆ. ಅದಕ್ಕೆ ಸದ್ಯದಲ್ಲೇ ಉತ್ತರ ಸಿಗುತ್ತೆ ಎಂದು ಮಾಜಿ ಉಪಮುಖ್ಯಮಂತ್ರಿ ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಇಂದಿಲ್ಲಿ ತಿಳಿಸಿದರು.

ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಸಾಮೂಹಿಕ ನೇತೃತ್ವದಲ್ಲಿ ರಾಜ್ಯದ ಪಕ್ಷ ಇಲ್ಲ, ಹಿಂದುತ್ವದ ಚರ್ಚೆ ಇಲ್ಲ, ಜಾತಿ, ಉಪಜಾತಿಗೆ ಸೀಮಿತಗೊಳಿಸಿಕೊಳ್ಳುವಂತಹ ಪ್ರಯತ್ನ ನಡೆಯುತ್ತಿದೆ. ಇದು ಪಕ್ಷವನ್ನು ಅಂದಿನಿಂದ ಕಟ್ಟಿದವರ ಅಳಲು. ಇದು ಸದ್ಯದಲ್ಲೇ ಸುಧಾರಣೆಯಾಗುತ್ತದೆ ಎಂಬುದಕ್ಕೆ ಸ್ಪಷ್ಟ ಮಾಹಿತಿ ದೊರೆತಿದೆ ಎಂದು ಹೇಳಿದರು.

ಈಗ ತಪ್ಪು ಮಾಡಿದವರಿಗೆ ಮುಂದೆ ತಮ್ಮ ತಪ್ಪಿನ ಅರಿವಾಗುತ್ತದೆ. ಈ ವಿಷಯವನ್ನು ನಾನು ಬಹಿರಂಗವಾಗಿ ಹೇಳುತ್ತೇನೆ, ಆದರೆ ಬಹಳಷ್ಟು ಜನ ಇಂತಹ ಹೇಳಿಕೆ ನೀಡಲು ಹಿಂದೇಟು ಹಾಗೂ ಹಿಂಜರಿಕೆ ಇಟ್ಟುಕೊಂಡಿದ್ದಾರೆ ಎಂದರು.

“ಕುತ್ತಿಗೆ ಕೊಯ್ದರು ನಾನು ಬಿಜೆಪಿಯನ್ನು ಬಿಡುವುದಿಲ್ಲ ನನ್ನ ಹೃದಯದಲ್ಲಿ ಭಾರತೀಯ ಜನತಾ ಪಕ್ಷ ಕಮಲದ ಹೂವು ಹಾಗೂ ಮೋದಿ ಮತ್ತು ಹಿಂದುತ್ವ ಇದೆ” ಸದ್ಯದಲ್ಲೇ ಸಾವಿರಾರು ಜನರ ನೋವಿಗೆ ಪಕ್ಷದ ಹೈಕಮಾಂಡ್ ಹಾಗೂ ಪ್ರಮುಖ ನಾಯಕರು ಸರಿ ಮಾಡುತ್ತಾರೆ ಎಂದರು.