



ಸಾಗರ,ಆ.28:
ಸಾಕು ನಾಯಿಗಳೊಂದಿಗೆ ಕಾದಾಡಿದ ಕಾರಣಕ್ಕೆ ಬೀದಿ ನಾಯಿಯೊಂದಕ್ಕೆ ಪರವಾನಗಿ ಇಲ್ಲದ ಬಂದೂಕಿನಿಂದ ಗುಂಡು ಹಾರಿಸಿ ಕೊಂದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಾಡವಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಆನಂದಪುರ ಪೊಲೀಸರು ಪ್ರಾಣಿ ಹತ್ಯೆ ಹಾಗೂ ಪರವಾನಗಿ ಇಲ್ಲದೆ ಬಂದೂಕು ಬಳಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಲಿಂಗಮೂರ್ತಿ ಎಂಬಾತನನ್ನು ಬಂಧಿಸಿದ್ದಾರೆ.

ನಾಡವಳ್ಳಿ ಗ್ರಾಮದ ಬೋರೆಪ್ಪ ಎಂಬುವವರು ದನ ಮೇಯಿಸಲು ತೆರಳುತ್ತಿದ್ದ ವೇಳೆ ಕಂದು ಬಣ್ಣದ ಗಂಡು ಬೀದಿ ನಾಯಿಯೊಂದು ಅವರ ಹಿಂದೆ ಬಂದಿತ್ತು ಎನ್ನಲಾಗಿದೆ. ಗ್ರಾಮದ ಮಾರ್ಗದಲ್ಲಿ ಸಾಗುತ್ತಿದ್ದ ನಾಯಿ, ಲಿಂಗಮೂರ್ತಿ ಎಂಬಾತನ ಮನೆಯ ಸಮೀಪಕ್ಕೆ ತೆರಳಿದೆ.
ಈ ವೇಳೆ ಮನೆಯಲ್ಲಿದ್ದ ಸಾಕು ನಾಯಿಗಳೊಂದಿಗೆ ಬೀದಿ ನಾಯಿ ಕಾದಾಡಿದ್ದು, ನಾಯಿಗಳ ನಡುವೆ ಕಚ್ಚಾಟ ನಡೆದಿದೆ. ಇದರಿಂದ ಆಕ್ರೋಶಗೊಂಡ ಲಿಂಗಮೂರ್ತಿ ಮನೆಯಲ್ಲಿದ್ದ ಪರವಾನಗಿ ಇಲ್ಲದ ಬಂದೂಕಿನಿಂದ ಬೀದಿ ನಾಯಿಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ನಾಯಿ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಮೃತಪಟ್ಟಿದೆ. ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ವಿಷಯ ಪೊಲೀಸರ ಗಮನಕ್ಕೆ ಬಂದಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.
