ಮೊನ್ನೆ ಟಿವಿ.ಯಲ್ಲಿ ಒಂದು ಹಾಸ್ಯ ಕಾರ್ಯಕ್ರಮ ನೋಡುತ್ತಿದ್ದೆ. ವೇದಿಕೆ ಮೇಲಿನವ ಹಾಸ್ಯದ ಹೆಸರಿನಲ್ಲಿ ಹೇಳಿದ ಜೋಕು
ಹೆಂಡತಿ ಹೇಳ್ತಾಳೆ – “ರೀ, ನಮ್ ಮದುವೆ ಮಾಡಿಸಿದ ಪೂಜಾರಿ ಆಕ್ಸಿಡೆಂಟ್ ಅಲ್ಲಿ ಸತ್ತು ಹೋದನಂತೆ ಪಾಪ”
ಅದಕ್ಕೆ ಗಂಡ ಹೇಳ್ತಾನೆ – “ಮಾಡಿದ ಪಾಪ ಎಲ್ಲಿಗೆ ಹೋಗುತ್ತೆ ಹೇಳು…”
ಸಾವಿರ ಜನ ಕುಳಿತಿದ್ದ ಸಭಾಂಗಣದಲ್ಲಿ ಕಹಕಹ ನಗು. ಚಪ್ಪಾಳೆ. ಸೀಟಿ.
ನಾನು ಮಾತ್ರ ನಗಲಿಲ್ಲ. ನನ್ನೊಳಗೆ ಏನೋ ಚುಚ್ಚಿದಂತಾಯ್ತು.
ಅದು ಜೋಕ್ ಆಗಿರಲಿಲ್ಲ. ಅದು ನಮ್ಮದೇ ಬೇರಿನ ಮೇಲೆ ಮಾಡಿದ ವ್ಯಂಗ್ಯದ ಗಾಯವಾಗಿತ್ತು.
ಹಾಸ್ಯದ ಹೆಸರಿನಲ್ಲಿ ನಡೆಯುತ್ತಿರುವ ಈ ಹೊಸ ಅಸಹಿಷ್ಣುತೆ ಯಾವಾಗ ಶುರುವಾಯಿತು?
ಒಬ್ಬ ಪುರೋಹಿತನನ್ನು ನೋಡಿದರೆ ಇವತ್ತು ನಮ್ಮ ಜನಕ್ಕೆ ತಮಾಷೆಯ ವಸ್ತು ಕಾಣುತ್ತಾನೆ. ಅವನ ಜನಿವಾರ, ಅವನ ಶಿಖೆ, ಅವನ ಮಂತ್ರ, ಅವನ ಜೀವನವೇ ಒಂದು ಜೋಕ್ ಆಗಿ ಬಿಟ್ಟಿದೆ.
ಹಾಸ್ಯ ಕಾರ್ಯಕ್ರಮಗಳಲ್ಲಿ ಪುರೋಹಿತ ಅಂದರೆ ಒಬ್ಬ ಹೊಟ್ಟೆಬಾಕ, ದುರಾಸೆಯ, ಸುಳ್ಳುಗಾರ. ಅವನು ಬಂದರೆ ಸಾಕು, ಹಿಂದೆ ಹಾಸ್ಯದ ಹಿನ್ನೆಲೆ ಸಂಗೀತ ಶುರುವಾಗುತ್ತದೆ. ಸಾವಿರ ಜನ ಚಪ್ಪಾಳೆ ತಟ್ಟುತ್ತಾರೆ.
ಆ ಚಪ್ಪಾಳೆಯ ಶಬ್ದದಲ್ಲಿ ನಮಗೆ ಕೇಳಿಸದ ಒಂದು ನಿಟ್ಟುಸಿರಿದೆ. ಅದು ಆ ಸಂಸ್ಕೃತಿಯ ನಿಟ್ಟುಸಿರು, ಅದು ಸಾವಿರಾರು ವರ್ಷಗಳ ಪರಂಪರೆಯ ನಿಟ್ಟುಸಿರು.

ಒಂದು ಮಾತು ಹೇಳಿ ನೋಡೋಣ. ಹಾಸ್ಯದ ಹೆಸರಿನಲ್ಲಿ ಅನ್ಯ ಕೋಮುಗಳ, ಅನ್ಯ ಮತಗಳ ಒಂದು ಆಚರಣೆಯ ಬಗ್ಗೆ, ಒಂದು ಉಡುಪಿನ ಬಗ್ಗೆ, ಒಬ್ಬ ಧರ್ಮಗುರುವಿನ ಬಗ್ಗೆ ಒಂದೇ ಒಂದು ಜೋಕ್ ಮಾಡಿ ನೋಡಿ. ಮರುದಿನ ಏನಾಗುತ್ತದೆ ಎಂದು ನಿಮಗೆ ಗೊತ್ತಿದೆ. ಆ ವೇದಿಕೆಯೇ ಇರುವುದಿಲ್ಲ, ಆ ಕಲಾವಿದನೇ ಇರುವುದಿಲ್ಲ.
ಆ ಭಯ, ಆ ಎಚ್ಚರಿಕೆ ಬರೀ ಸನಾತನದ ವಿಷಯದಲ್ಲಿ ಮಾತ್ರ ಯಾಕೆ ಇಲ್ಲ?
ಏಕೆಂದರೆ ಹಿಂದೂ ಸಹಿಷ್ಣು. ಅವನು ನಗುತ್ತಾನೆ. ಅವನು ತನ್ನ ಮೇಲಿನ ವ್ಯಂಗ್ಯವನ್ನೂ ನಗುವಿನಲ್ಲಿ ಅರಗಿಸಿಕೊಳ್ಳುತ್ತಾನೆ. ಈ ಸಹಿಷ್ಣುತೆಯನ್ನೇ ಇವತ್ತು ದೌರ್ಬಲ್ಯ ಎಂದುಕೊಂಡು ಬಿಟ್ಟಿದ್ದಾರೆ.

ಇನ್ನು ಮದುವೆಯ ವಿಷಯಕ್ಕೆ ಬರೋಣ.
ಮದುವೆ ಮಂಟಪದಲ್ಲಿ ಪುರೋಹಿತರು ವಧು-ವರರನ್ನು ಹೊರಗೆ ಕರೆದುಕೊಂಡು ಹೋಗಿ “ಅರಂಧತಿ ನಕ್ಷತ್ರ ನೋಡಿ” ಎನ್ನುತ್ತಾರೆ. ಆ ಕ್ಷಣ ಸಭೆಯಲ್ಲಿ ಸಣ್ಣ ನಗು, ಪಿಸುಮಾತು ಶುರುವಾಗುತ್ತದೆ – “ಇವತ್ತಿಂದ ಸುಳ್ಳು ಹೇಳೋಕೆ ಶುರು, ನಕ್ಷತ್ರನೇ ಕಾಣಿಸ್ತಿಲ್ಲ, ಇವನು ಎಲ್ಲಿ ತೋರಿಸ್ತಾನೆ ನೋಡೋಣ”
ಅವರಿಗೆ ಗೊತ್ತಿಲ್ಲ ಆ ನಕ್ಷತ್ರ ತೋರಿಸುವ ಹಿಂದಿನ ವಿಜ್ಞಾನ, ತತ್ವ.
ಅರಂಧತಿ ಯಾರು? ವಸಿಷ್ಠರ ಪತ್ನಿ. ಸಪ್ತರ್ಷಿ ಮಂಡಲದಲ್ಲಿ ವಸಿಷ್ಠ ನಕ್ಷತ್ರದ ಪಕ್ಕದಲ್ಲಿ ಒಂದು ಸಣ್ಣ, ಮಸುಕಾದ ನಕ್ಷತ್ರ. ಬರಿಗಣ್ಣಿಗೆ ಕಷ್ಟದಲ್ಲಿ ಕಾಣುವ ನಕ್ಷತ್ರ. ಆಕಾಶದಲ್ಲಿ ನೂರಾರು ಪ್ರಕಾಶಮಾನವಾದ ನಕ್ಷತ್ರಗಳಿವೆ, ಆದರೆ ನಮ್ಮ ಋಷಿಗಳು ದಾಂಪತ್ಯಕ್ಕೆ ಮಾದರಿಯಾಗಿ ಆ ಮಸುಕಾದ ನಕ್ಷತ್ರವನ್ನೇ ಯಾಕೆ ಆರಿಸಿಕೊಂಡರು?
ಅದು ಒಂದು ಪ್ರತೀಕ.

“ನೋಡು ಮಗಳೇ, ಆಕಾಶದಲ್ಲಿ ಎಷ್ಟೇ ಪ್ರಕಾಶಮಾನವಾದ ನಕ್ಷತ್ರಗಳಿದ್ದರೂ ವಸಿಷ್ಠ ಅರಂಧತಿಯನ್ನು ಬಿಟ್ಟು ಹೋಗುವುದಿಲ್ಲ, ಅರಂಧತಿ ವಸಿಷ್ಠನನ್ನು ಬಿಟ್ಟು ಹೋಗುವುದಿಲ್ಲ. ನಿಮ್ಮ ದಾಂಪತ್ಯವೂ ಹಾಗೆಯೇ ಇರಬೇಕು. ಜಗತ್ತಿನ ಆಕರ್ಷಣೆಗಳ ನಡುವೆಯೂ ಒಬ್ಬರನ್ನೊಬ್ಬರು ಬಿಟ್ಟು ಹೋಗಬೇಡಿ. ಸಣ್ಣದಾಗಿ ಕಾಣಿಸಿದರೂ, ನಿಮ್ಮ ಬಂಧ ಆಕಾಶದಷ್ಟು ಸತ್ಯವಾಗಿರಲಿ” ಎಂಬ ದೊಡ್ಡ ಸಂದೇಶವಿದೆ.
ಇದು ಸುಳ್ಳು ಹೇಳಲು ಕಲಿಸುವ ಕ್ರಿಯೆಯೇ? ಅಲ್ಲ, ಸತ್ಯದ ಜೊತೆ ಬದುಕಲು ಕಲಿಸುವ ಕ್ರಿಯೆ.
ಇನ್ನು ಯಾರಾದರೂ ಸ್ವಲ್ಪ ಜೋರಾಗಿ, ಕೋಪದಲ್ಲಿ ಮಾತಾಡಿದರೆ ನಮ್ಮ ಜನ ಹೇಳುವ ಮಾತು – “ಏಯ್ ಸಂಸ್ಕೃತ ಮಾತಾಡಬೇಡ”
ಯೋಚಿಸಿ, ಯಾವಾಗ ಸಂಸ್ಕೃತ ಕೆಟ್ಟ ಪದಗಳ ಭಾಷೆಯಾಯಿತು?
ಸಂಸ್ಕೃತ ಎಂದರೆ ಸಂಸ್ಕರಿಸಲ್ಪಟ್ಟದ್ದು, ಪರಿಪೂರ್ಣವಾಗಿಸಲ್ಪಟ್ಟದ್ದು ಎಂದರ್ಥ. ಜಗತ್ತಿನ ಅತ್ಯಂತ ವೈಜ್ಞಾನಿಕ ಭಾಷೆ, ಕಂಪ್ಯೂಟರ್ ಗೆ ಅತ್ಯಂತ ಯೋಗ್ಯವಾದ ಭಾಷೆ ಎಂದು NASA ವಿಜ್ಞಾನಿಗಳೇ ಹೇಳಿದ ಭಾಷೆ. ನಮ್ಮ ವೇದ, ಉಪನಿಷತ್ತು, ಆಯುರ್ವೇದ, ಗಣಿತ, ಖಗೋಳಶಾಸ್ತ್ರ ಎಲ್ಲವನ್ನೂ ಹೊತ್ತ ಭಾಷೆ. ತಾಯಿಯ ಮಡಿಲಿನಂತಹ ಭಾಷೆ.

ಇವತ್ತು ಆ ಭಾಷೆಯ ಹೆಸರು ಬೈಗುಳವಾಗಿದೆ. ಇದು ನಮ್ಮ ಸೋಲು ಅಲ್ಲವೇ?
ಮತ್ತೊಂದು ಮಾತು – ಯಾರಾದರೂ ನಮ್ಮ ಧರ್ಮದ, ಸಂಸ್ಕೃತಿಯ, ಇತಿಹಾಸದ ಬಗ್ಗೆ ಸ್ವಲ್ಪ ಮಾತಾಡಲು ಹೋದರೆ ಸಾಕು, ಪಕ್ಕದಲ್ಲಿರುವವನು ವ್ಯಂಗ್ಯವಾಗಿ ಹೇಳುತ್ತಾನೆ – “ಅಯ್ಯೋ ಪುರಾಣ ಶುರು ಮಾಡಿದ”
ಪುರಾಣ ಅಂದರೆ ಏನು ಎಂದು ಆ ಹೇಳುವವನಿಗೆ ಗೊತ್ತಿದೆಯಾ?
ಪುರಾಣ ಅಂದರೆ ಸುಳ್ಳು ಕಥೆ ಅಲ್ಲ. ಪುರಾ ನವಂ ಭವತಿ ಇತಿ ಪುರಾಣಂ. ಹಿಂದೆ ನಡೆದಿದ್ದರೂ ಇಂದಿಗೂ ಹೊಸದಾಗಿ ಕಾಣುವುದು ಪುರಾಣ. ನಮ್ಮ ಇತಿಹಾಸವನ್ನು, ಭೂಗೋಳವನ್ನು, ಖಗೋಳವನ್ನು, ನೀತಿಯನ್ನು, ಜೀವನ ಮೌಲ್ಯಗಳನ್ನು ಕಥೆಯ ರೂಪದಲ್ಲಿ ಮುಂದಿನ ಪೀಳಿಗೆಗೆ ತಲುಪಿಸುವ ಅದ್ಭುತ ತಂತ್ರಜ್ಞಾನವೇ ಪುರಾಣ.

ಪುರಾಣ ಹೇಳುವುದು ಅಂದರೆ ಟೈಮ್ ಪಾಸ್ ಕಥೆ ಹೇಳುವುದಲ್ಲ, ಅದು ನಮ್ಮ ಬೇರನ್ನು ನಮಗೆ ಪರಿಚಯಿಸುವ ಕೆಲಸ.
ಇವತ್ತು ಟ್ರೆಂಡ್ ಬದಲಾಗಿದೆ. ದೇವರನ್ನು, ಪೂಜಾರಿಯನ್ನು, ಮಂತ್ರವನ್ನು, ಹಣೆಯನ್ನು, ಬಳೆಯನ್ನು, ಸಂಸ್ಕೃತವನ್ನು ತಮಾಷೆ ಮಾಡಿದರೆ ಅವನು “ಪ್ರಗತಿಪರ”, “ಬೋಲ್ಡ್”, “ಇಂಟೆಲೆಕ್ಚುಯಲ್”. ಅದನ್ನೇ ರಕ್ಷಣೆ ಮಾಡಲು ಹೋದವನು “ಮೌಢ್ಯ”, “ಹಿಂದುಳಿದ”.
ನಿಜವಾದ ಪ್ರಗತಿಪರತೆ ಎಂದರೆ ಏನು? ಇನ್ನೊಬ್ಬರ ನಂಬಿಕೆಯನ್ನು ಗೇಲಿ ಮಾಡುವುದಾ? ಅಥವಾ ಎಲ್ಲರ ನಂಬಿಕೆಯನ್ನು ಗೌರವಿಸುತ್ತಾ, ತನ್ನ ನಂಬಿಕೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುವುದಾ?
ಹಾಸ್ಯ ಬೇಕು. ನಮ್ಮ ಜೀವನದಲ್ಲಿ ನಗು ಅತ್ಯಗತ್ಯ. ಆದರೆ ಆ ನಗು ಇನ್ನೊಬ್ಬರ ಅಸ್ತಿತ್ವವನ್ನು ಅಣಕಿಸುವುದರ ಮೇಲೆ ಕಟ್ಟಬಾರದು. ಅದರಲ್ಲೂ ಸಾವಿರಾರು ವರ್ಷಗಳಿಂದ ಈ ನೆಲವನ್ನು, ಈ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಪುರೋಹಿತ ಸಮುದಾಯವನ್ನು ಹಾಸ್ಯದ ವಸ್ತು ಮಾಡುವುದು ಎಷ್ಟು ಸರಿ?
ಆ ಪುರೋಹಿತ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು, ತಣ್ಣೀರಲ್ಲಿ ಸ್ನಾನ ಮಾಡಿ, ಸಂಧ್ಯಾವಂದನೆ ಮಾಡಿ, ನಿಮ್ಮ ಮನೆಗೆ ಬಂದು ನಿಮ್ಮ ಮಗುವಿಗೆ ನಾಮಕರಣ ಮಾಡಿ, ನಿಮ್ಮ ಮದುವೆಯನ್ನು ಮಾಡಿಸಿ, ನಿಮ್ಮ ತಂದೆಯ ಅಂತ್ಯಕ್ರಿಯೆಯಲ್ಲೂ ನಿಮ್ಮ ಜೊತೆ ಇರುತ್ತಾನೆ. ಅವನಿಗೆ ಸಂಬಳವಿಲ್ಲ, ಪಿಂಚಣಿ ಇಲ್ಲ, ಭದ್ರತೆ ಇಲ್ಲ. ಇದೆ ಅವನ ವೃತ್ತಿ, ಅವನ ಬದುಕು.
ಆ ಬದುಕನ್ನು ಗೇಲಿ ಮಾಡುವ ಮೊದಲು ಒಂದು ಕ್ಷಣ ಯೋಚಿಸಿ.
ನಾವು ನಮ್ಮ ಮಕ್ಕಳಿಗೆ ಏನು ಹೇಳಿಕೊಡುತ್ತಿದ್ದೇವೆ? ಅರಂಧತಿ ನಕ್ಷತ್ರ ಸುಳ್ಳು, ಸಂಸ್ಕೃತ ಬೈಗುಳ, ಪುರಾಣ ಟೈಮ್ ಪಾಸ್, ಪೂಜಾರಿ ಜೋಕರ್ ಎಂದು ಹೇಳಿಕೊಟ್ಟರೆ, ನಾಳೆ ಅವರಿಗೆ ತಮ್ಮ ಹೆಸರಿನ ಅರ್ಥವೂ ಗೊತ್ತಾಗುವುದಿಲ್ಲ, ತಮ್ಮ ಹಬ್ಬದ ಮಹತ್ವವೂ ಗೊತ್ತಾಗುವುದಿಲ್ಲ.
ಬೇರಿಲ್ಲದ ಮರ ಎಷ್ಟು ದಿನ ಹಸಿರಾಗಿರುತ್ತದೆ?
ಇದು ಯಾರನ್ನೋ ದ್ವೇಷಿಸುವ ಬರಹವಲ್ಲ. ಇದು ನಮ್ಮನ್ನು ನಾವು ಪ್ರೀತಿಸಿಕೊಳ್ಳುವ ಬರಹ.
ದಯವಿಟ್ಟು ಹಾಸ್ಯದ ಹೆಸರಿನಲ್ಲಿ ನಮ್ಮ ಬೇರುಗಳನ್ನೇ ಕೊಚ್ಚಿಕೊಳ್ಳಬೇಡಿ. ಪ್ರಶ್ನಿಸಿ, ತಪ್ಪಿದ್ದರೆ ಖಂಡಿಸಿ, ಆದರೆ ಅಣಕಿಸಬೇಡಿ, ಅವಮಾನಿಸಬೇಡಿ.
ಸನಾತನ ಎಂದರೆ ಒಂದು ಮತವಲ್ಲ, ಅದು ಬದುಕುವ ವಿಧಾನ. ಅದು ನಗುವನ್ನು ಸಹಿಸಿಕೊಳ್ಳುತ್ತದೆ, ಆದರೆ ನಗುವಿನ ವಸ್ತುವಾಗಲು ಹುಟ್ಟಿದ್ದಲ್ಲ.
ಈ ಮನಸ್ಥಿತಿಗೆ ಅಂತ್ಯ ಯಾವಾಗ? ಅದು ಬೇರೆಯವರು ಬಂದು ಮಾಡಿಕೊಡುವುದಿಲ್ಲ. ನಾವು ಚಪ್ಪಾಳೆ ತಟ್ಟುವುದನ್ನು ನಿಲ್ಲಿಸಿದಾಗಲೇ ಅಂತ್ಯವಾಗುತ್ತದೆ.
ನಿಮಗೆ ಈ ಮಾತು ನಿಜವೆನಿಸಿದರೆ, ಒಂದು ಕ್ಷಣ ಕಣ್ಣು ಮುಚ್ಚಿ ಯೋಚಿಸಿ.
ಮಂಡ್ಯ ಮ.ನಾ.ಉಡುಪ