ಶಿವಮೊಗ್ಗ: ನಗರದ ಶಾಂತಿನಗರ–ರಾಗಿಗುಡ್ಡದಲ್ಲಿ ಈದ್ ಮೀಲಾದ್ ಜುಲೂಸ್ ಶಾಂತಿಯುತವಾಗಿ ಹಾಗೂ ಸಂಭ್ರಮದಿಂದ ನಡೆಯಿತು. ಹಿಂದೂ–ಮುಸ್ಲಿಂ ಬಾಂಧವರು ಜಾತಿ, ಧರ್ಮದ ಭೇದ ಮರೆತು ಪರಸ್ಪರ ಸಿಹಿ ಹಂಚಿಕೊಂಡು,

ಕೈಹಿಡಿದು ಮೆರವಣಿಗೆಯಲ್ಲಿ ಸಾಗುವ ಮೂಲಕ ಸೌಹಾರ್ದತೆ ಹಾಗೂ ಭಾವೈಕ್ಯತೆಗೆ ಸಾಕ್ಷಿಯಾದರು.

ಮೆರವಣಿಗೆಯಲ್ಲಿ ಮಕ್ಕಳ ದಫ್ ಕಾರ್ಯಕ್ರಮ ಗಮನಸೆಳೆಯಿತು. ಮಕ್ಕಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ಈದ್ ಮೀಲಾದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಮೆರವಣಿಗೆಯ ವೇಳೆ ಶಿವಮೊಗ್ಗ ನಗರ ಬಿ ವಿಭಾಗದ ಡಿವೈಎಸ್ಪಿ ಸಂಜೀವಕುಮಾರ್ ಹಾಗೂ ಶಾಂತಿ–ಸುವ್ಯವಸ್ಥೆಯ ಜವಾಬ್ದಾರಿ ವಹಿಸಿದ್ದ ಗ್ರಾಮಾಂತರ ಸಿಪಿಐ ರಾಘವೇಂದ್ರ ಖಂಡಿಕೆ ಅವರಿಗೆ ಮಕ್ಕಳು ಮತ್ತು ಸಾರ್ವಜನಿಕರು ಕೈಕುಲುಕಿ ಸಿಹಿ ಹಂಚಿ ಮೀಲಾದ್ ಶುಭಾಶಯ ಕೋರಿದರು. ಪೊಲೀಸರೊಂದಿಗೆ ಸಾರ್ವಜನಿಕರು ಆತ್ಮೀಯವಾಗಿ ಬೆರೆತ ದೃಶ್ಯಗಳು ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಸಾಕ್ಷಿಯಾದವು.

ಮೆರವಣಿಗೆಯಲ್ಲಿ ನೂರ್ ಮಸ್ಜಿದ್ ಅಧ್ಯಕ್ಷ ಭಾಷಾಸಾಬ್ ಹುಣಸಘಟ್ಟ, ಶಾಂತಿನಗರದ ಪ್ರಮುಖರಾದ ನಾಗರಾಜಣ್ಣ, ಶಹಾಬುದ್ದಿನ್ ಬಾಬು, ರಾಮಚಂದ್ರ ವಕೀಲರು, ಸಯ್ಯದ್ ಸಾದಿಕ್, ಬಸವರಾಜ್, ಶಾಂತಿನಗರ ನಾಗರಿಕ ಹಕ್ಕು ವೇದಿಕೆ ಅಧ್ಯಕ್ಷ ಸಯ್ಯದ್ ಮುಜಿಬುಲ್ಲಾ, ಮೂಜಿಬುರ್ ರೆಹಮಾನ್, ಕ್ವಾಜ, ಕರವೇ ಸಾದಿಕ್, ರಿಯಾಜ್, ನೂರುಲ್ಲಾ ಖಾನ್, ಶಫಿವುಲ್ಲಾ, ಇರ್ಫಾನ್ ಜಿಮ್, ಅನ್ಸರ್ ಸೇರಿದಂತೆ ಹಲವು ಪ್ರಮುಖರು ಹಾಗೂ ಸಾವಿರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.
ಮೆರವಣಿಗೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ನಡೆದಿದ್ದು, ಶಾಂತಿನಗರದಲ್ಲಿ ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ಸಾರಿತು.