ಶಿವಮೊಗ್ಗ,ಆ.24: ಕಳೆದ ಎರಡು ತಿಂಗಳ ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು, ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಶಿವಮೊಗ್ಗ ಜಿಲ್ಲಾ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದಾಗ ಬಿಸಿಯೂಟ ತಯಾರಕರನ್ನು ಕೆಲಸದಿಂದ ತೆಗೆದಿದ್ದಲ್ಲಿ ಅಂತಹವರಿಗೂ ಇಡುಗಂಟು ಹಣ ನೀಡಬೇಕು, ಬಿಸಿಯೂಟ ತಯಾರಕರನ್ನು ಸ್ಕೀಮ್ ವರ್ಕರ್ಸ್ ಎಂದು ಕರೆಯುವುದನ್ನು ಬದಲಿಸಿ ಕಾರ್ಮಿಕರು ಎಂದು ಘೋಷಿಸಬೇಕು, ನಿವೃತ್ತರಾದವರಿಗೆ ಪಿಂಚಣಿ ಇಲ್ಲದ ಕಾರಣ ಈಗ ನೀಡುತ್ತಿರುವ 40 ಸಾವಿರ ಇಡುಗಂಟು ಹಣದ ಬದಲು 2 ಲಕ್ಷ ರೂಪಾಯಿ ನೀಡಬೇಕು, ಪ್ರತಿ ಮೊಟ್ಟೆ ಸುಲಿಯಲು 1 ರೂಪಾಯಿ ಭತ್ಯೆ ಏರಿಸಬೇಕು ಎಂದು ಒತ್ತಾಯಿಸಲಾಗಿದೆ.

ಮೊಟ್ಟೆ ಸುಲಿದ ಹಣವನ್ನು ಆ ಶಾಲೆಯ ಮುಖ್ಯ ಅಡುಗೆಯವರ ಬ್ಯಾಂಕ್ ಖಾತೆಗೆ ಜಮಾ ಮಾಡಿ ಎಲ್ಲಾ ಅಡುಗೆಯವರು ಸಮನಾಗಿ ಹಂಚಿಕೊಳ್ಳುವ ವ್ಯವಸ್ಥೆ ಮಾಡಬೇಕು, ನೂರು ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಇಬ್ಬರು ಅಡುಗೆಯವರಿಗೆ ಕೆಲಸದ ಹೊರೆ ಹೆಚ್ಚಾಗುತ್ತಿದ್ದು, ನೂರರ ವರೆಗೆ ವಿದ್ಯಾರ್ಥಿಗಳಿದ್ದ ಶಾಲೆಗಳಲ್ಲೂ ಕಡ್ಡಾಯವಾಗಿ ಮೂವರು ಅಡುಗೆಯವರನ್ನು ನೇಮಿಸಬೇಕು, ಪ್ರತಿ ತಿಂಗಳು 5ನೇ ತಾರೀಖಿನಂದು ಗೌರವಧನವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಬಿಸಿಯೂಟ ತಯಾರಕರಿಗೆ 10 ಲಕ್ಷ ಮರಣ ಪರಿಹಾರ ಜಾರಿಗೊಳಿಸಬೇಕು, ಶಾಲೆಗಳಲ್ಲಿ ಆಗುವ ಅಪಘಾತಕ್ಕೆ 1 ಲಕ್ಷ ರೂಪಾಯಿ ಆಸ್ಪತ್ರೆ ವೆಚ್ಚ ನೀಡಬೇಕು, ಸರ್ಕಾರದಿಂದ ಪಬ್ಲಿಕ್ ಶಾಲೆಗಳನ್ನು ತೆರೆದಲ್ಲಿ ಹಾಲಿ ಬಿಸಿಯೂಟ ಯೋಜನೆಯಲ್ಲಿ ಅಡುಗೆ ಮಾಡುತ್ತಿರುವವರನ್ನು ಯಾವುದೇ ಕಾರಣಕ್ಕೂ ಬಿಡುಗಡೆಗೊಳಿಸದೇ ಎಲ್ಲರಿಗೂ ಕೆಲಸ ಕೊಡಬೇಕು, ಕಲ್ಯಾಣ ಮಂಡಳಿಯನ್ನು ಜಾರಿಗೆ ತಂದು ಸವಲತ್ತುಗಳನ್ನು ಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿತು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ ಜಿ ಅಕ್ಕಮ್ಮ, ಪ್ರಮುಖರಾದ ಹನುಮಂತಪ್ಪ, ಶಾರದ, ರೇಣುಕಾ, ಅನಿತಾ, ಮೀನಾಕ್ಷಮ್ಮ, ನಿರ್ಮಲ ಸೇರಿದಂತೆ ಹಲವರಿದ್ದರು.
==