ಶಿವಮೊಗ್ಗ : ಆಗಸ್ಟ್ ೨೪ : : ಜಿಲ್ಲೆಯಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SIಖ) ಪ್ರಕ್ರಿಯೆಯ ನಂತರ ಕರಡು ಮತದಾರರ ಪಟ್ಟಿಯು ಇಂದು ಬಿಡುಗಡೆಯಾಗಿದ್ದು, ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಸ್ಥಳೀಯ ಬಿಎಲ್ಒ ಕಚೇರಿಗಳಲ್ಲಿ ಅಥವಾ ಚುನಾವಣಾ ಆಯೋಗದ ಅಧಿಕೃತ ಜಾಲತಾಣದಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಜಿಲ್ಲೆಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿ ಮಾತನಾಡುತ್ತಿದ್ದರು. ಪ್ರಸ್ತುತ ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ಸುಮಾರು ೪೮,೬೬೮ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಇದರಲ್ಲಿ ಈವರೆಗೆ ಮ್ಯಾಪಿಂಗ್ಆಗದಿರುವ ೧೫,೧೬೪ಮತದಾರರಿಗೆ ಹಾಗೂ ತಂದೆ-ಮಗನ ವಯಸ್ಸಿನ ಗಣನೀಯ ಅಂತರ ಸೇರಿದಂತೆ ದೋಷಪೂರಿತ ಮಾಹಿತಿ ಇರುವ (ಅನೋಮಲಿಸ್) ೩೩,೫೦೪ ಮತದಾರರು ಸೇರಿದಂತೆ ಒಟ್ಟು ೪೮,೬೬೮ ಮತದಾರರಿಗೆ ನೋಟಿಸ್ನೀಡಲಾಗುತ್ತದೆ. ಈ ಎಲ್ಲರೂ ಅಗತ್ಯ ದಾಖಲೆಗಳೊಂದಿಗೆ ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಾಗುವುದು. ಮ್ಯಾಪಿಂಗ್ಮಾಡಲು ಅವರಿಗೆ ಕಾಲಾವಕಾಶ ನಿಗಧಿಪಡಿಸಿಕೊಡಲಾಗುವುದು. ಪಟ್ಟಿಯಲ್ಲಿ ಹೆಸರು ಇಲ್ಲದಿರುವವರು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ ೨೩ರವರೆಗೆ ಅವಕಾಶವಿದ್ದು, ಮತದಾರರು ತಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿಕೊಳ್ಳುವ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಲಿದೆ ಎಂದರು.

ದಿ.೧೬.೦೬.೨೦೨೬ರ ಮತಪಟ್ಟಿಯಲ್ಲಿದ್ದಂತೆ ಜಿಲ್ಲೆಯಲ್ಲಿ ೧೫,೧೯,೪೫೯ಮತದಾರರಿದ್ದು, ಅವರಲ್ಲಿ ೧೩,೩೦,೯೦೫ಮತದಾರರ ಹೆಸರನ್ನು ಅಧಿಕೃತಗೊಳಿಸಿ, ಗಣಕೀಕರಣ ಕಾರ್ಯ ಪೂರ್ಣಗೊಳಿಸಲಾಗಿದೆ. ಅಂದರೆ ಶೇ.೮೭.೫೯ರಷ್ಟು ಪರಿಷ್ಕರಣೆ ಕಾರ್ಯ ಪೂರ್ಣಗೊಂಡಂತಾಗಿದೆ. ಎಸ್ಐಆರ್ಪ್ರಕ್ರಿಯೆ ವೇಳೆ ೧,೮೮,೫೫೪ ಮತದಾರರನ್ನು ‘ಎಎಸ್ಡಿಡಿಒ’ ವರ್ಗಕ್ಕೆ ಸೇರಿಸಲಾಗಿದೆ. ಈ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಬರುವುದಿಲ್ಲ. ಈ ಪೈಕಿ ೪೬೬೮೩ಮತದಾರರ ಮೃತರಾಗಿರುವುದನ್ನು, ೨೩೧೬೫ಮತದಾರರ ಗೈರಾಗಿರುವುದನ್ನು ಹಾಗೂ ೯೯೨೨೫ಮತದಾರರು ಸ್ಥಳಾಂತರಗೊಂಡಿರುವುದನ್ನು ಗುರುತಿಸಲಾಗಿದೆ ಎಂದರು.
ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಮತದಾರರ (ಎಎಸ್ಡಿಡಿಒ) ಪೈಕಿ ಗೈರು, ಸ್ಥಳಾಂತರಗೊಂಡಿರುವ, ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅಥವಾ ತಿದ್ದುಪಡಿ ಇದ್ದರೆ, ಹೊಸ ಸೇರ್ಪಡೆಗೆ ಮತದಾರರು ನಿಗದಿತ ದಾಖಲೆಗಳೊಂದಿಗೆ ಫಾರ್ಮ್೬ ಸಲ್ಲಿಕೆ ಮಾಡಬೇಕು. ಇದರ ಜತೆಗೆ ಅ.೧ಕ್ಕೆ ೧೮ ವರ್ಷ ತುಂಬುವ ಯುವ ಮತದಾರರು ನಿಗದಿತ ದಾಖಲೆಗಳೊಂದಿಗೆ ಫಾರ್ಮ್೬ ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ಹೆಸರು, ವಿಳಾಸ ಬದಲಾವಣೆಗೆ ನಮೂನೆ-೮ ಬಳಸಿ ಅರ್ಜಿ ಹಾಕಬಹುದು. ಮತಗಟ್ಟೆ ಅಧಿಕಾರಿಗಳ ಪರಿಶೀಲನೆಯ ನಂತರ ಆ ಮತದಾರರ ಪಟ್ಟಿಯ ಪೌರತ್ವ ದೃಢಪಟ್ಟರಷ್ಟೇ, ಅವರ ಹೆಸರನ್ನು ಅಂತಿಮ ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ ಎಂದವರು ನುಡಿದರು.

ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯದ ಕುರಿತು ಸ್ಥಳೀಯ ರಾಜಕೀಯ ಪಕ್ಷಗಳ ಮುಖಂಡರಿಗೆ ಸಕಾಲಿಕ ಮಾಹಿತಿ ಒದಗಿಸಲಾಗಿದೆ. ಇಲ್ಲಿಯವರೆಗಿನ ಪರಿಷ್ಕರಣೆ ಕಾರ್ಯದ ಕುರಿತು ಸಾರ್ವಜನಿಕರಿಂದಾಗಲೀ ಅಥವಾ ರಾಜಕೀಯ ಪಕ್ಷಗಳ ಮುಖಂಡರಿಂದಾಗಲೀ ಯಾವುದೇ ಆಕ್ಷೇಪಣೆಗಳು ಬಂದಿರುವುದಿಲ್ಲ ಎಂದ ಅವರು, ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಅಗತ್ಯಕ್ಕೆ ತಕ್ಕಂತೆ ಇ.ಆರ್.ಓ ಮತ್ತು ಎ.ಇ.ಆರ್.ಓ.ಗಳನ್ನು ನೇಮಿಸಲಾಗಿದೆ ಎಂದರು.

ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆ :
ಯುವಕರ ಸಬಲೀಕರಣ ರಾಜ್ಯ ಸರ್ಕಾರವು ಆರಂಭಿಸಿರುವ ವಿಶೇಷ ಯೋಜನೆ ಇದಾಗಿದ್ದು, ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ೩೫೬೦೦ಸದಸ್ಯರನ್ನು ಒಳಗೊಂಡ ಸುಮಾರು ೩೫೬ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಈವರೆಗೆ, ೨೮೧೩೭ಜನ ಸದಸ್ಯರಾಗಿದ್ದು, ರಾಜ್ಯದಲ್ಲಿ ಸಂಘಗಳ ರಚನೆಯಲ್ಲಿ ಶಿವಮೊಗ್ಗ ಜಿಲ್ಲೆ ೬ನೇ ಸ್ಥಾನದಲ್ಲಿದೆ. ತಳಮಟ್ಟದ ಯುವ ಸಂಘಟನೆಗಳನ್ನು ಬಲಪಡಿಸಲು ಹಾಗೂ ಯುವಜನರಲ್ಲಿ ನಾಯಕತ್ವ, ಸಮುದಾಯದ ಭಾಗವಹಿಸುವಿಕೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ವೈಜ್ಞಾನಿಕ ಮನೋಭಾವ, ಜವಾಬ್ದಾರಿಯುತ ನಾಗರಿಕತ್ವ ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದರು.
ಈ ಸಂಘದಲ್ಲಿ ನಿಯಮಾನುಸಾರ ಮೀಸಲಾತಿಯಂತೆ ಮಹಿಳಾ ಸದಸ್ಯರನ್ನೊಳಗೊಂಡ ಸಮಿತಿ ರಚಿಸಿ ನೋಂದಣಿ ಪ್ರಕ್ರಿಯೆ ನಡೆಸಲಾಗುವುದು. ಅಲ್ಲದೇ ರಾಜ್ಯ ಸರ್ಕಾರಿ ನೌಕರರನ್ನು ಸಂಘದ ಆರ್ಥಿಕ ವ್ಯವಹಾರ ಮತ್ತು ಚಟುವಟಿಕೆಗಳ ನಿರ್ವಹಣೆಗೆ ಮಾರ್ಗದರ್ಶಕರನ್ನಾಗಿ ನೇಮಿಸಿ, ಅಗತ್ಯ ತರಬೇತಿ ನೀಡಲಾಗುವುದು ಎಂದರು.
ಪ್ರಜಾಸೇವೆ : ಸರ್ಕಾರದ ಮಾರ್ಗಸೂಚಿಯಂತೆ ಸೆಪ್ಟಂಬರ್ಮಾಹೆಯಿಂದ ಪ್ರಜಾಸೇವಾ ಚಟುವಟಿಕೆಗಳು ಆರಂಭಗೊಳ್ಳಲಿವೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ವಾರಗಳಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಾಗೂ ಎರಡು ಮತ್ತು ನಾಲ್ಕನೇ ಶನಿವಾರಗಳಂದು ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ನಗರ. ಪಟ್ಟಣ, ಹೋಬಳಿ ಮತ್ತು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲಾಗುವುದು ಎಂದರು.
ಆಹಾರ ಸುರಕ್ಷತೆ : ಆಹಾರ ಸುರಕ್ಷತೆಗೆ ಕುರಿತು ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು. ಈ ಬಗ್ಗೆ ಸಾರ್ವಜನಿಕರಿಂದ ಬಂದಿರುವ ಅಹವಾಲುಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ವಿ., ಚುನಾವಣಾ ತಹಶೀಲ್ದಾರ್ಶ್ರೀಮತಿ ಮಂಜುಳಾ ಹೆಗಡಾಳ ಸೇರಿದಂತೆ ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.