ಶಿವಮೊಗ್ಗ:ದಿಲ್ಲಿಯ ಎಸಿ ರೂಂನಲ್ಲಿ ಕುಳಿತು ಸ್ಯಾಟಲೈಟ್ ಮ್ಯಾಪ್ ನೋಡಿಕೊಂಡು ಸಿದ್ದಪಡಿಸಿರುವ ಕಸ್ತೂರಿ ರಂಗನ್ ವರದಿ ಮಲೆನಾಡಿನ ರೈತರು , ಬಡವರು ಮತ್ತು ಆದಿವಾಸಿಗಳಿಗೆ ಮರಣಶಾಸನವಾಗಿದ್ದು, ಕೇಂದ್ರ ಸರ್ಕಾರ ಯಾವುದೇ ಯಾರಣಕ್ಕೂ ವರದಿ ಜಾರಿ ಮಾಡಬಾರದು ಎಂದು ಜಿಲ್ಲಾ ಜಾತ್ಯತೀತಿ ಜನತಾದಳದ ಜಿಲ್ಲಾ ಕಾರ್ಯಾಧ್ಯಕ್ಷ ನರಸಿಂಹ ಗಂಧದಮನೆ ಆಗ್ರಹಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸ್ಥಳೀಯ ಜನರ ವಿರೋಧದ ನಡುವೆಯೂ ಏಳನೇ ಬಾರಿ ಕಸ್ತೂರಿ ರಂಗನ್ ವರದಿ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಮಲೆನಾಡಿನ ಜನರು ಪಕ್ಷಾತಿತವಾಗಿ ಈ ವರದಿಯನ್ನು ವಿರೋಧಿಸಬೇಕಾಗಿದೆ. ಒಂದು ವೇಳೆ ವರದಿ ಜಾರಿಯಾದರೆ, ರಾಜ್ಯದ ೧೪೪೯ ಗ್ರಾಮಗಳ ಕಾಡಂಚಿನ ಜನರ ಜೀವನವನ್ನೇ ನಿರ್ಬಂಧಿಸಿದಂತಾಗುತ್ತದೆ. ಕೃಷಿ ಚಟುವಟಿಕೆ,

ಜಾನುವಾರು ಸಾಕಾಣಿಕೆ ಸೇರಿದಂತೆ ಎಲ್ಲ ಚಟುವಟಿಕೆಗಳಿಗೆ ಅಡ್ಡಿ ಮಾಡಲಾಗುತ್ತದೆ. ಕಟ್ಟಡ ನಿರ್ಮಾಣ, ರಸ್ತೆ ಮೂಲ ಭೂತ ಸೌಕರ್ಯದಂತಹ ಅಭಿವೃದ್ಧಿ ಕಾಮಗಾರಿಗಳಿಗೂ ಕಂಟಕವಾಗುತ್ತದೆ. ಶಿವಮೊಗ್ಗ ಜಿಲ್ಲೆಯ ೪೪೭ ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸಲಾಗುತ್ತದೆ. ಇದರಿಂದ ತೋಟ ಗದ್ದೆ ಮಾಡಿಕೊಂಡು ಜೀವನ ನಡೆಸುವುದೇ ತಪ್ಪು ಎಂದು ಹೇಳಿದಂತಾಗುತ್ತದೆ. ಮಲೆನಾಡಿನ ಜನ ಕಾಡನ್ನು ತಾಯಿಯಂತೆ ಪ್ರೀತಿಯಿಂದ ಕಾಪಾಡಿಕೊಂಡಿದ್ದರಾ. ಈ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸಚಿವರಿಗೆ ಮನವಿ:
ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಸ್ತೂರಿ ರಂಗನ್ ವರದಿ ಜಾರಿ ಮಾಡದಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಈ ಬಗ್ಗೆ ಪಕ್ಷದ ವತಿಯಿಂದ ಸಚಿವರ ಮೇಲೆ ಒತ್ತಡ ಹೇರಲಾಗುವುದು. ಜನರ ವಿರೋಧದ ನಡುವೆಯೂ ವರದಿ ಜಾರಿಗೆ ಮುಂದಾದರೆ, ಮಲೆನಾಡಿನಾದ್ಯಂತ ಸಂಘಟನೆ ಮಾಡಿ ಬೃಹತ್ ಜನಾಂದೋಲನ ರೂಪಿಸಲಾಗುವುದು ಎಂದು ನರಸಿಂಹ ತಿಳಿಸಿದ್ದಾರೆ.