ಶಿವಮೊಗ್ಗ,ಆ.11
ಸರ್ಕಾರದ ಯಶಸ್ಸಿನಲ್ಲಿ ಮತ್ತು ಸಾರ್ವಜನಿಕ ಸೇವೆಯಲ್ಲಿ ರಾಜ್ಯದ ಪ್ರತಿಯೊಬ್ಬ ಅಧಿಕಾರಿ ಹಾಗೂ ನೌಕರರ ಪಾತ್ರ ಅತ್ಯಂತ ಪ್ರಮುಖವಾಗಿದೆ. ನಾವೆಲ್ಲರೂ ಜನಸಾಮಾನ್ಯರ ಸೇವಕರಾಗಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆ ನೀಡಿದರು.

ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕರ್ನಾಟಕ ಸರ್ಕಾರ ನೌಕರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾವೆಲ್ಲರೂ ಸರ್ಕಾರದ ಭಾಗವಾಗಿದ್ದು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎನ್ನುವ ಭೇದವಿಲ್ಲದೆ ಜನರ ಏಳಿಗೆಗಾಗಿ ಶ್ರಮಿಸಬೇಕು. ಅಧಿಕಾರಿಗಳ ಜವಾಬ್ದಾರಿ ಕೇವಲ ಆಡಳಿತಕ್ಕೆ ಸೀಮಿತವಾಗಿರದೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿದೆ ಎಂದು ತಿಳಿಸಿದರು.
ಈ ನಾಡನ್ನು ಮುನ್ನಡೆಸಿದ ಕೆಂಗಲ್ ಹನುಮಂತಯ್ಯ, ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ ಸೇರಿದಂತೆ ಅನೇಕ ಮಾಜಿ ಮುಖ್ಯಮಂತ್ರಿಗಳ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಅವರು, ವಿಧಾನಸೌಧವು ನಾಡಿನ ಪ್ರಜಾಸತ್ತಾತ್ಮಕ ಮೌಲ್ಯಗಳ ಸಂಕೇತವಾಗಿದೆ ಎಂದು ಪ್ರತಿಪಾದಿಸಿದರು.
ಜನಸೇವೆಗೆ ಆದ್ಯತೆ:
ರಾಜ್ಯದ ಸುಮಾರು 7 ಕೋಟಿ ಜನಸಂಖ್ಯೆಯಲ್ಲಿ ಅತ್ಯಲ್ಪ ಸಂಖ್ಯೆಯ ನೌಕರರು ಹಾಗೂ ಅಧಿಕಾರಿಗಳಿಗೆ ಸಾರ್ವಜನಿಕ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಇತಿಹಾಸ ಸೃಷ್ಟಿಸುವತ್ತ ಹೆಜ್ಜೆ:
ಪ್ರಜಾಪ್ರಭುತ್ವದ ಮುಖ್ಯ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗಗಳು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ರಾಜ್ಯದ ಪ್ರಗತಿ ಸಾಧ್ಯ. ಹಾಗಾಗಿ, ಇತಿಹಾಸವನ್ನು ಓದುವುದಕ್ಕಿಂತ ಅಥವಾ ಬರೆಯುವುದಕ್ಕಿಂತ ಹೊಸ ಇತಿಹಾಸವನ್ನು ಸೃಷ್ಟಿಸುವುದು ಮುಖ್ಯ. ನಮ್ಮ ಕೆಲಸಗಳು ಶಾಶ್ವತವಾಗಿ ಉಳಿಯುವಂತೆ ಆಡಳಿತ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.

ತಾಲೂಕು ಮಟ್ಟದಲ್ಲಿಯೇ ವಾಸ, ಜನರ ಸಮಸ್ಯೆಗಳಿಗೆ ನೇರ ಸ್ಪಂದನೆ:
ಸಾರ್ವಜನಿಕರ ಅರ್ಜಿಗಳು ಮತ್ತು ಕುಂದುಕೊರತೆಗಳು ಅನಗತ್ಯವಾಗಿ ಜಿಲ್ಲಾ ಅಥವಾ ರಾಜ್ಯ ಮಟ್ಟಕ್ಕೆ ತಲುಪಬಾರದು. ತಾಲೂಕು ಹಾಗೂ ಸ್ಥಳೀಯ ಮಟ್ಟದಲ್ಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ತಾಲೂಕು ಮಟ್ಟದ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಸೇರಿದಂತೆ ಸರ್ವ ಅಧಿಕಾರಿಗಳು ತಮ್ಮ ನಿಯೋಜಿತ ಕೇಂದ್ರ ಸ್ಥಾನದಲ್ಲೇ ವಾಸವಿರಬೇಕು. ಅಧಿಕಾರಿಗಳು ಕಚೇರಿಯಲ್ಲಿ ಕಡ್ಡಾಯವಾಗಿ ಲಭ್ಯವಿದ್ದು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಬೇಕು ಎಂದು ಸೂಚಿಸಿದರು.
ಮನೆ ಬಾಗಿಲಿಗೆ ಖಾತಾ ತಲುಪಿಸುವ ಗುರಿ:
ಗ್ರಾಮೀಣ ಪ್ರದೇಶದ ಸುಮಾರು 1 ಕೋಟಿ 11 ಲಕ್ಷ ಕುಟುಂಬಗಳಿಗೆ ಹಾಗೂ ನಗರ ಪ್ರದೇಶದ 25 ಲಕ್ಷ ಮನೆಗಳಿಗೆ ಯಾವುದೇ ಲಂಚದ ಹಂಗಿಲ್ಲದೆ, ಉಚಿತವಾಗಿ ಫೋಟೋ ಹಾಗೂ ಸಹಿ ಸಹಿತ ಖಾತಾ/ಪ್ರಮಾಣಪತ್ರಗಳನ್ನು ನೀಡುವ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ 5 ರಿಂದ 6 ತಿಂಗಳ ಅವಧಿಯಲ್ಲಿ ರಾಜ್ಯದ ಎಲ್ಲಾ ಪಂಚಾಯಿತಿ ಹಾಗೂ ಹೋಬಳಿಗಳಲ್ಲಿ ಈ ಪ್ರಮಾಣಪತ್ರಗಳನ್ನು ತಲುಪಿಸುವ ಕೆಲಸ ಪೂರ್ಣಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಕರ್ನಾಟಕ ಮಾದರಿ:
ರಾಜ್ಯ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ಗ್ಯಾರಂಟಿಗಳನ್ನು ಇಂದು ದೇಶದ ಇತರ ರಾಜ್ಯಗಳೂ ಅನುಸರಿಸುತ್ತಿದ್ದು, ಕರ್ನಾಟಕ ಮಾದರಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಅಧಿಕಾರ ಎಂಬುದು ಕೇವಲ ಶಕ್ತಿಯ ಸಂಕೇತವಲ್ಲ, ಅದೊಂದು ಸಾರ್ವಜನಿಕ ಜವಾಬ್ದಾರಿ. ಬಸವಣ್ಣನವರ ಮಾರ್ಗದರ್ಶನದಂತೆ “ಜನಸೇವೆಯೇ ಜನಾರ್ದನ ಸೇವೆ” ಎಂಬ ತತ್ವದಡಿಯಲ್ಲಿ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಅಧಿಕಾರಿಗಳು ಚೌಕಟ್ಟಿನೊಳಗೆ ನಿಂತು ಕಾನೂನುಬದ್ಧವಾಗಿ ಜನರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಕಚೇರಿಗಳಿಗೆ ಬರುವ ಸಾರ್ವಜನಿಕರನ್ನು ಗೌರವದಿಂದ ಕಾಣಬೇಕು ಹಾಗೂ ಅವರ ಅಳಲನ್ನು ಆಲಿಸಿ ಸ್ಪಂದಿಸಬೇಕು. ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡು, ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಪಾರದರ್ಶಕತೆ ತರಬೇಕು. ಜನರು ನೀಡಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡು, ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ, ನಿಸ್ವಾರ್ಥವಾಗಿ ಜನಸೇವೆ ಮಾಡಬೇಕೆಂದು ಅವರು ತಿಳಿಸಿದರು.

ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆ:
ಸರ್ಕಾರದ ಕೆಲಸ ಕಾರ್ಯಗಳಲ್ಲಿ ಯಾವುದೇ ಕಾರಣಕ್ಕೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಎಸ್ಪಿ, ತಹಶೀಲ್ದಾರ್ ಹಾಗೂ ಕಮಿಷನರ್ ಮಟ್ಟದ ಅಧಿಕಾರಿಗಳಿಂದ ಹಿಡಿದು ಕೆಳಹಂತದ ಸಿಬ್ಬಂದಿಯವರೆಗೆ ಎಲ್ಲರ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಪ್ರತಿಯೊಂದು ಕಾಮಗಾರಿ ಹಾಗೂ ಯೋಜನೆಗಳ ಪಾರದರ್ಶಕತೆಗೆ ತಂತ್ರಜ್ಞಾನವನ್ನು ಬಳಸಬೇಕು. ಫಲಾನುಭವಿಗಳ ಆಧಾರ್, ಫೋಟೋ, ವಿಡಿಯೋ ಆಧರಿತ ದಾಖಲೆಗಳನ್ನು ನಮೂದಿಸಬೇಕು. ರಾಜ್ಯಾದ್ಯಂತ ಪಿಡಬ್ಲ್ಯೂಡಿ, ಬಿಬಿಎಂಪಿ ಮತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿಯ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪಕ್ಕೆ ತರಲಾಗುತ್ತಿದೆ ಎಂದರು.
ಅಧಿಕಾರಿಗಳ ಚಲನವಲನದ ಮೇಲೆ ಕಣ್ಣು:
ತಾಲೂಕು ಮತ್ತು ಗ್ರಾಮ ಮಟ್ಟದ ಅಧಿಕಾರಿಗಳು, ಪಿಡಿಒ, ತಹಶೀಲ್ದಾರ್ ಹಾಗೂ ಇತರ ಇಲಾಖೆಯ ಸಿಬ್ಬಂದಿಯ ಭೇಟಿಯ ಸಮಯ ಹಾಗೂ ಚಟುವಟಿಕೆಗಳನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಸ್ಥಳೀಯ ಮಟ್ಟದಲ್ಲಿ ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು ಹಾಗೂ ಆಶ್ರಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯ, ಬಿಸಿಊಟ ಮತ್ತು ನಿರ್ವಹಣೆಯನ್ನು ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು.
ಮುಂಬರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಗಳ ಜೊತೆಗೆ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸಹ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಬಿಇಒ ಹಾಗೂ ಡಿಡಿಪಿಐಗಳು ಕ್ರಮ ವಹಿಸಬೇಕು ಎಂದರು.
ನಾವೆಲ್ಲರೂ ‘ಟೀಮ್ ಕರ್ನಾಟಕ’ವಾಗಿ ಕೆಲಸ ಮಾಡಬೇಕಿದೆ. ಪ್ರತಿಯೊಬ್ಬ ಸರ್ಕಾರಿ ನೌಕರನೂ ಜವಾಬ್ದಾರಿಯಿಂದ ಜನರ ಸೇವೆಗೆ ಬದ್ಧರಾಗಿರಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆ ನೀಡಿದರು.
ರಾಜ್ಯದ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ವರ್ಚುವಲ್ ಮೂಲಕ ಭಾಗವಹಿಸಿ ಮಾತನಾಡಿ,
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಸಾರ್ವಜನಿಕರ ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ತುರ್ತು ಪರಿಸ್ಥಿತಿಯ ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸರ್ಕಾರವು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಮತ್ತು ನೇರ ಸಂವಾದಕ್ಕಾಗಿ ಆರಂಭಿಸಿರುವ ‘ಪ್ರಜಾಸೇವೆ’ ಇಲಾಖೆಯಲ್ಲಿ ಸರ್ಕಾರದ ಯೋಜನೆಗಳು ಹಾಗೂ ಪರಿಹಾರ ಕ್ರಮಗಳು ತಳಮಟ್ಟದ ಜನರಿಗೆ ತಲುಪಬೇಕು ಎಂಬ ಉದ್ದೇಶದಿಂದ ಜಾರಿಗೊಳಿಸಲಾಗಿದೆ ಎಂದು ಪ್ರತಿಪಾದಿಸಿದರು.
164 ತಾಲ್ಲೂಕುಗಳಲ್ಲಿ ಭೀಕರ ಅಭಾವ:
ರಾಜ್ಯದ ಒಟ್ಟು 240 ತಾಲ್ಲೂಕುಗಳ ಪೈಕಿ 164 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಬರಗಾಲ ಆವರಿಸಿದೆ. ರೈತರು ಬೆಳೆ ನಷ್ಟದಿಂದ ತೀವ್ರ ಸಂಕಷ್ಟದಲ್ಲಿದ್ದಾರೆ. ಬೋರ್ವೆಲ್ಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ಅಲ್ಲದೆ ನೆರೆ ರಾಜ್ಯಗಳಲ್ಲೂ ಬೆಳೆ ಇಲ್ಲದ ಕಾರಣ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೆ.ಎಮ್.ಎಫ್ ಮೂಲಕ ತುಮಕೂರು ಸೇರಿದಂತೆ ವಿವಿಧೆಡೆ 1 ಲಕ್ಷ ಮೇವಿನ ಕಿಟ್ಗಳನ್ನು ವಿತರಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ವಿಬಿ ಜಿ ರಾಮ್ ಜಿ ಯೋಜನೆ ಮೂಲಕ ಉದ್ಯೋಗ: ಗ್ರಾಮೀಣ ಭಾಗದಿಂದ ಜನರು ಗುಳೆ ಹೋಗುವುದನ್ನು ತಡೆಯಲು ಉದ್ಯೋಗ ಖಾತರಿ ಕಾಮಗಾರಿಗಳಿಗೆ ವಿಬಿ ಜಿ ರಾಮ್ ಜಿ ಯೋಜನೆಯಡಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ 51,000 ಮಾನವ ದಿನಗಳ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಬೆಳೆ ವಿಮೆ ನೊಂದಣಿ ಸಮಯದಲ್ಲಿ ಆಸಕ್ತಿ ತೋರುವ ಇನ್ಶೂರೆನ್ಸ್ ಕಂಪನಿಗಳು, ರೈತರಿಗೆ ನಷ್ಟ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿರುವುದಕ್ಕೆ, ಈ ಬಗ್ಗೆ ಶೀಘ್ರವೇ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದರು.
‘ಭಾರತ್ ಜೋಡೋ’ ಸಂಘಗಳ ರಚನೆ:
ಗ್ರಾಮೀಣ ಭಾಗದಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಭಾವೈಕ್ಯತೆಯನ್ನು ಮೂಡಿಸಲು ಪ್ರತಿಯೊಂದು ಪಂಚಾಯಿತಿಯಲ್ಲಿ ‘ಭಾರತ್ ಜೋಡೋ’ ಸಂಘಗಳನ್ನು ರಚಿಸಿ, ಪ್ರತಿ ಸಂಘಕ್ಕೆ ವರ್ಷಕ್ಕೆ ರೂ.10 ಲಕ್ಷ ಅನುದಾನ ನೀಡುವ ವಿನೂತನ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಬರಗಾಲದ ತೀವ್ರತೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿರುವುದರಿಂದ, ಪ್ರತಿಯೊಬ್ಬ ಜಿಲ್ಲಾಧಿಕಾರಿ, ಸಿಇಒ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಸಾರ್ವಜನಿಕರ ಅಹವಾಲುಗಳನ್ನು ಆಲಿಸಬೇಕು ಎಂದು ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು, ಉಪಮುಖ್ಯಮಂತ್ರಿಯವರು ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಬರ ಪರಿಸ್ಥಿತಿ, ಬೆಳೆ ಹಾನಿ, ಕುಡಿಯುವ ನೀರಿನ ಸಮಸ್ಯೆ, ಮೇವಿನ ಲಭ್ಯತೆ ಕುರಿತ ಮಾಹಿತಿ ಪಡೆದುಕೊಂಡರು.
ಈ ವೇಳೆ ಸಚಿವರಾದ ಪ್ರಿಯಾಂಕ್ ಖರ್ಗೆ, ಲಕ್ಷ್ಮಣ ಸವದಿ, ಸಂತೋಷ್ ಎಸ್. ಲಾಡ್, ಅಜಯ್ ಸಿಂಗ್, ವಿಜಯಾನಂದ ಕಾಶಪ್ಪನವರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು, ಸಚಿವಾಲಯದ ಹಿರಿಯ ಅಧಿಕಾರಿಗಳು, ಹಾಗೂ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದಿಂದ ವಿಡಿಯೋ ಸಂವಾದದ ಮೂಲಕ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ.ಸಿಇಓ ಹೇಮಂತ್.ಎನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ, ಸಿಸಿಎಫ್ ಹನುಮಂತಪ್ಪ, ಡಿಸಿಎಫ್ ಗಳಾದ ಪ್ರಸನ್ನಕೃಷ್ಣ ಪಟಗಾರ್, ಅಜ್ಜಯ್ಯ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ, ಎಸಿ ಸತ್ಯನಾರಾಯಣ್, ತಹಶೀಲ್ದಾರರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ನೌಕರರು ಹಾಜರಿದ್ದರು.
—————–