ಶಿವಮೊಗ್ಗ : ಜುಲೈ ೧೭ : ( : ನಗರದ ಸಹ್ಯಾದ್ರಿ ಕಾಲೇಜಿಗೆ ಹೊಂದಿಕೊಂಡಂತಿರುವ ವಿಶಾಲವಾದ ಐದು ಎಕರೆ ಪ್ರದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರ್ಥಿಕ ನೆರವಿನೊಂದಿಗೆ ವಿಜ್ಞಾನ ಕೇಂದ್ರ-೨ ಕಟ್ಟಡವನ್ನು ಸುಮಾರು ೧೦ಕೋಟಿ. ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ, ಸುಸಜ್ಜಿತವಾದ ಈ ಭವ್ಯ ಕಟ್ಟಡವನ್ನು ಶೀಘ್ರದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಅವರು ಇಂದು ವಿಜ್ಞಾನ ಕೇಂದ್ರ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ, ಕಟ್ಟಡ ಕಾಮಗಾರಿಯ ಪ್ರಗತಿ ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಭೌತಿಕ ಕಟ್ಟಡ ನಿರ್ಮಾಣಕ್ಕೆ ಹತ್ತು ಕೋಟಿ ರೂ.ಗಳನ್ನು ಹಾಗೂ ಕಟ್ಟಡಕ್ಕೆ ಅಗತ್ಯವಾಗಿರುವ ಅತ್ಯಾಧುನಿಕ ವಿಜ್ಞಾನೋಪಕರಣಗಳು ಮತ್ತು ಪೀಠೋಪಕರಣಗಳಿಗಾಗಿ ಎರಡು ಕೋಟಿ. ರೂ.ಗಳನ್ನು ಕಾಯ್ದಿರಿಸಲಾಗಿದೆ. ಸೈನ್ಸ್ ಸೆಂಟರ್ನಲ್ಲಿ ಜೀವವೈವಿಧ್ಯತೆ, ಸಮುದ್ರ ವಿಜ್ಞಾನ, ಖನಿಜ ಸಂಪನ್ಮೂಲಗಳು, ಸಮುದ್ರದ ಅಡಿಯಲ್ಲಿರುವ ಜಲಚರ ಹಾಗೂ ವನ್ಯಜೀವಿಗಳು

ಜೀವವೈವಿಧ್ಯದಿಂದ ಸಮುದ್ರದೊಳಗಿನ ಜೀವಿಗಳವರೆಗೆ ಥೀಮ್ಯಾಟಿಕ್ ಗ್ಯಾಲರಿ ಅಲ್ಲದೆ ವಿವಿಧ ವಿಷಯಾಧಾರಿತ ಗ್ಯಾಲರಿಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.
ವಿಜ್ಞಾನ ಕೇಂದ್ರದ ಮೂಲ ಉದ್ದೇಶ ಜನಸಾಮಾನ್ಯರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ, ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯ ಬಗ್ಗೆ ಆಸಕ್ತಿ, ಕ್ರಿಯಾಶೀಲತೆ ಮತ್ತು ಕುತೂಹಲವನ್ನು ಕೆರಳಿಸುವ ಹಾಗೂ ವಿದ್ಯಾರ್ಥಿಗಳಿಗೆ ತಿಳುವಳಿಕೆ, ನವೀನ ಚಿಂತನೆ, ವೈಜ್ಞಾನಿಕ ಮನೋಭಾವವನ್ನು ಮೂಡಿಸುವ ಆಶಯವನ್ನು ಹೊಂದಿದೆ ಅಲ್ಲದೆ ವಿಷಯಾಧಾರಿತ ವಿಜ್ಞಾನ ಪ್ರದರ್ಶನಗಳು, ಕಾರ್ಯಾಗಾರಗಳು, ಸಂವಾದಾತ್ಮಕ ಶೈಕ್ಷಣಿಕ ಚಟುವಟಿಕೆಗಳು ಮತ್ತು ಸಂಪರ್ಕ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿಜ್ಞಾನವನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡಲಿವೆ ಇದರೊಂದಿಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಮತ್ತು ಮನೋರಂಜನೆ ನೀಡುವುದು ವಿಜ್ಞಾನ ಕೇಂದ್ರದ ಉದ್ದೇಶವಾಗಿದೆ. ವಿಜ್ಞಾನ ವಿಷಯದಲ್ಲಿ ಆಸಕ್ತಿ ಹೊಂದಿರುವ ಜಿಲ್ಲೆಯ ಹಾಗೂ ನೆರೆಯ ಜಿಲ್ಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳು ಈ ಕೇಂದ್ರದ ಲಾಭ ಪಡೆದುಕೊಳ್ಳಬಹುದಾಗಿದೆ. ಒಟ್ಟಾರೆಯಾಗಿ ವಿದ್ಯಾರ್ಥಿಗಳನ್ನು ವಿಜ್ಞಾನ ವಿಷಯದತ್ತ ಆಕರ್ಷಿಸುವಂತಹ ಹಾಗೂ ಯುವ ವಿಜ್ಞಾನಿ’ಗಳನ್ನು ರೂಪಿಸುವ ಕೇಂದ್ರಗಳಾಗಿ ಹೊರಹೊಮ್ಮಬೇಕೆಂಬುದು ತಮ್ಮ ಆಶಯವಾಗಿದೆ ಎಂದರು.

ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ಪಿಯು ಹಾಗೂ ಕಾಲೇಜು ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಳ್ಳಲು ಮತ್ತು ಅರ್ಹರು ಸಂಶೋಧನೆ ನಡೆಸಲು ಅವಕಾಶ ಕಲ್ಪಿಸಲಾಗುವುದು. ಈ ಕಟ್ಟಡ ಉಳಿಕೆ ನಿವೇಶನದಲ್ಲಿ ಪ್ಲಾನೆಟೋರಿಯಂ(ತಾರಾಲಯ) ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಶಿವಮೊಗ್ಗ ರಾಜ್ಯದ ಪ್ರಮುಖ ಸೈನ್ಸ್ ಟೂರಿಸಂ ಸೆಂಟರ್ ಆಗಿ ಬೆಳೆಯಲಿದೆ. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ಆಯನೂರು ವಿಜ್ಞಾನ ಕೇಂದ್ರದ ಸ್ಥಿತಿ ಪರಿಶೀಲಿಸಿ, ಅಗತ್ಯವಿದ್ದರೆ ಹೆಚ್ಚುವರಿ ಅನುದಾನ ಒದಗಿಸಿ ದುರಸ್ತಿ ಹಾಗೂ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣ ಮಳೆ ಬಾರದಿರುವುದರಿಂದ ರೈತರ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಇದರಿಂದಾಗಿ ರೈತರಲ್ಲಿ ಆತಂಕದ ವಾತಾವರಣ ಮನೆಮಾಡಿದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಸುಮಾರು ೨೦೦೦ – ೨.೫೦೦ಕೋಟಿ ರೂ.ಗಳ ವೆಚ್ಚದಲ್ಲಿ ಹಲವು ನೀರಾವರಿ ಯೋಜನೆಗಳನ್ಜು ರೂಪಿಸಿ, ಸಾವಿರಾರು ಎಕರೆ ಭೂಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ್ದರು. ಇಂತಹ ಸಂದರ್ಭದಲ್ಲಿ ಅಲ್ಪಪ್ರಮಾಣದ ಮಳೆ ಆಗಿದ್ದು, ಇರುವ ಮಳೆ ನೀರನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಏತ ನೀರಾವರಿ ಸೌಲಭ್ಯ ಪಡೆಯಲು ಬಾಕಿ ಉಳಿಸಿಕೊಂಡಿದ್ದ ವಿದ್ಯುತ್ಬಿಲ್ಲನ್ನು ಪಾವತಿಸಲು ರಾಜ್ಯದ ನೀರಾವರಿ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದರ ಫಲವಾಗಿ ವಿದ್ಯುತ್ಸೌಲಭ್ಯ ದೊರಕಿ ಪಂಪ್ಸೆಟ್ಮೂಲಕ ನೀರನ್ನು ಎತ್ತಿ ಸಮೀಪದ ಕೆರೆ-ಕಟ್ಟೆ-ಕಾಲುವೆಗಳನ್ನು ತುಂಬುವ ಕಾರ್ಯ ಭರದಿಂದ ಸಾಗಿದೆ ಎಂದರು.
ಇಂತಹ ಸಂದಿಗ್ಧ ಸಂದರ್ಭದಲ್ಲಿ ಆಡಳಿತಾರೂಢ ಸರ್ಕಾರವು ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧಗೊಳ್ಳಬೇಕು. ಸರ್ಕಾರ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ನಂತರ ಕೇಂದ್ರದ ನೆರವನ್ನೂ ನಿರೀಕ್ಷಿಸಬಹುದಾಗಿದೆ ಎಂದ ಅವರು, ಈಗಿರುವ ತುರ್ತು ಸಂದರ್ಭದಲ್ಲಿ ಕಡಿಮೆ ಮಳೆಯಲ್ಲಿ ಬೆಳೆಯಬಹುದಾದ ಪರ್ಯಾಯ ಬೆಳೆಗಳು, ಬಿತ್ತನೆಬೀಜ, ರಸಗೊಬ್ಬರ ಸರಬರಾಜು, ಮಾಡಿಕೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಸಕಾಲಿಕ ಮಾರ್ಗದರ್ಶನ ನೀಡಬೇಕಾದ ಅಗತ್ಯವಿದೆ ಎಂದವರು ನುಡಿದರು.
ಆಗುಂಬೆ ಘಾಟ್ರಸ್ತೆ ಮತ್ತು ಸುರಂಗಮಾರ್ಗ ಯೋಜನೆ ರೂಪಿಸುವ ಸಂಬಂಧ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ, ಮಾಹಿತಿ ಪಡೆದುಕೊಳ್ಳಲಾಗಿದೆ. ಸದರಿ ರಸ್ತೆಯ ವಿಸ್ತರಣೆಗೆ ಅಗತ್ಯವಿರುವ ಸುಮಾರು ೪೨೦ಕೋಟಿ ರೂ.ಗಳ ಅಂದಾಜು ಮೊತ್ತ ಬಿಡುಗಡೆಯಾಗಿದೆ. ಬಾಕಿ ಇರುವ ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ ದೊರೆತಲ್ಲಿ ಕಾಮಗಾರಿ ತಕ್ಷಣದಿಂದಲೇ ಆರಂಭಗೊಳ್ಳಲಿದೆ. ಇದರೊಂದಿಗೆ ಸುರಂಗಮಾರ್ಗ ನಿರ್ಮಾಣದ ಸಾಧ್ಯತೆಗಳ ಬಗ್ಗೆ ತಾಂತ್ರಿಕ ಮಾಹಿತಿಯನ್ನು ಪಡೆದುಕೊಳ್ಳಲಾಗುವುದು ಎಂದ ಅವರು, ಏರಿಳಿತವಿರುವ ಮಲೆನಾಡ ಪ್ರದೇಶದಲ್ಲಿ ಇರುವ ಪ್ರಕೃತಿ ಮತ್ತು ಪರಿಸರವನ್ನು ಉಳಿಸಿಕೊಂಡು ಸುರಂಗ ಮಾರ್ಗ ನಿರ್ಮಿಸಿದಲ್ಲಿ ಈ ಭಾಗದ ರಸ್ತೆ ಸಂಚಾರಕ್ಕೆ ಶಾಶ್ವತ ಮತ್ತು ಪರಿಸರ ಸ್ನೇಹಿ ಪರಿಹಾರ ದೊರೆಯಬಹುದಾದ ನಿರೀಕ್ಷೆ ಇದೆ ಎಂದವರು ನುಡಿದರು.
ಈ ಸಂದರ್ಭದಲ್ಲಿ ಕುವೆಂಫು ವಿಶ್ವವಿದ್ಯಾಲಯದ ಉಪಕುಲಪತಿ ಡಾ|| ಶರತ್ಅನಂತಮೂರ್ತಿ, ವಿಶ್ವೇಶರಾಯ ಇಂಡಸ್ಟ್ರಿಯಲ್ಅಂಡ್ಟೆಕ್ನೋಲಾಜಿಕಲ್ಮ್ಯೂಜಿಯಂನ ಇಂಜಿನಿಯರ್ಎಂ.ತಿರವಿರಾಜ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.