ಶಿವಮೊಗ್ಗ : ಕಳೆದ ೧೦೦ ವರ್ಷಗಳಲ್ಲಿ ಮಲೆನಾಡು ಕಂಡು ಕೇಳರಿಯದ ಅನಾವೃಷ್ಟಿ ಉಂಟಾಗಿದ್ದು, ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ೧೫೭ ತಾಲ್ಲೂಕುಗಳಲ್ಲಿ ಅನಾವೃಷ್ಠಿ ಇದೆ. ೧೪ ತಾಲ್ಲೂಕುಗಳು ತೀವ್ರ ಬರಪೀಡಿತವಾಗಿದೆ. ಕಳೆದ ಮೂರು ತಿಂಗಳಲ್ಲಿ ೩೧ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಯಾವ ಅಧಿಕಾರಿ ಕೂಡ ರೈತರ ಜಮೀನಿಗೆ ಹೋಗಿಲ್ಲ. ಕೇಂದ್ರ ಸರ್ಕಾರ ಎನ್ಡಿಆರ್ಎಫ್ ಅನುದಾನವನ್ನು ನೀಡಿ ನೆರವಿಗೆ ಬರಬೇಕು ಎಂದು ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಆದರೆ ರಾಜ್ಯ ಸರ್ಕಾರ ಇದೂವರೆಗೆ ಎಷ್ಟು ಹೆಕ್ಟೇರ್ ಬೆಳೆ ನಷ್ಟವಾಗಿದೆ ಎಂಬ ವರದಿಯನ್ನು ಸೂಚಿಸಿಲ್ಲ. ಅದಕ್ಕಾಗಿ ವಿಶೇಷ ಪ್ರಯತ್ನವನ್ನೂ ಮಾಡಲಿಲ್ಲ. ಕೇವಲ ಹೇಳಿಕೆ ನೀಡಿ ಸುಮ್ಮನಾಗಿದ್ದಾರೆ.

ಐದಾರು ತಿಂಗಳು ಕಳೆದು ಹೋಗಿದೆ. ಕ್ಯಾಬಿನೆಟ್ ಪೂರ್ಣ ಮಾಡಲು ಆಗಿಲ್ಲ. ಕೇಂದ್ರದ ಕಾಂಗ್ರೆಸ್ ನಾಯಕರು ರಾಜ್ಯ ನಾಯಕರನ್ನು ಗಣನೆಗೆ ತೆಗೆದುಕೊಂಡಿಲ್ಲ. ಸ್ವತಃ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆಯವರು ನಿನ್ನೆ ಬೆಂಗಳೂರಿಗೆ ಬಂದಿದ್ದು, ಸಂಪುಟ ವಿಸ್ತರಣೆಯ ಬಗ್ಗೆ ನನಗೇನೂ ಗೊತ್ತಿಲ್ಲ. ದೆಹಲಿಯಿಂದ ಬಂದವರಿಗೆ ಕೇಳಿ ಅನ್ನುತ್ತಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಶೇ.೮೧ರಷ್ಟು ಮಳೆ ಕೊರತೆಯಾಗಿದೆ. ಮಳೆ ಇಲ್ಲದೆ ಬಿತ್ತನೆ ನಾಶವಾಗಿದೆ. ರೈತರು ೧ವರೆ ಲಕ್ಷ ರೂ. ಬೆಲೆಬಾಳುವ ರಾಸುಗಳನ್ನು ೫೦,೦೦೦ ರೂ.ಗಳಿಗೆ ಮಾರುತ್ತಿದ್ದಾರೆ. ಅವರು ಕಾಸಾಯಿಖಾನೆಗೆ ಹೋಗುತ್ತಿದೆ. ಜಾನುವಾರುಗಳಿಗೆ ಮೇವಿಲ್ಲ. ಇಷ್ಟೊಂದು ಬೇಜಾವಾಬ್ದಾರಿ ಸರ್ಕಾರ ರಾಜ್ಯದ ಇತಿಹಾಸದಲ್ಲಿ ಕಂಡಿರಲಿಲ್ಲ ಎಂದರು.

ಸಿಂಗಟಾಲೂರು ಏತ ನೀರಾವರಿಯಿಂದ ಸಂಗ್ರಹಿಸಿದ ನೀರು ತಡೆಗೋಡೆ ಬಿರುಕು ಕಂಡಿದ್ದರಿಂದ ೩ವರೆ ಟಿಎಂಸಿಯಷ್ಟು ನೀರು ಪೋಲಾಗಿದೆ. ಜನ ಧಂಗೆ ಏಳುವ ಮುಂಚೆ ಸರ್ಕಾರ ಎಚ್ಚೆತ್ತು ಸಮರೋಪಾದಿಯಲ್ಲಿ ಬರ ನಿರ್ಮೂಲನೆಗೆ ನೆರವಾಗಬೇಕು. ಕೂಡಲೇ ಸಂಪುಟ ವಿಸ್ತರಣೆ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ, ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಈ. ಕಾಂತೇಶ್, ಬಾಲು, ಈ.ವಿಶ್ವಾಸ್, ಮೋಹನ್ ಜಾದವ್, ಅನಿತಾ, ಕೆಂಪಮ್ಮ, ಶಿವಾಜಿ, ಮಂಜುನಾಥ್, ದೊರೆ, ಸುಧಾ, ಉಮೇಶ್ ಆರಾಧ್ಯ ಮತ್ತಿತರರಿದ್ದರು.