ಶಿವಮೊಗ್ಗ : ಇಲ್ಲಿಯ ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾಲಯ ಈಗಾಗಲೇ ಆರ್ಥಿಕ ಸಂಕಷ್ಟದಿಂದ ನಲುಗುತ್ತಿದ್ದು, ಡಿಜಿಟಲೀಕರಣದ ನೆಪದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಡಿಜಿಟಲ್ ಮೌಲ್ಯ ಮಾಪನವನ್ನು ತಕ್ಷಣ ನಿಲ್ಲಿಸುವಂತೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಕುವೆಂಪು ವಿವಿಯನ್ನು ಆಗ್ರಹಿಸಿದರು.
ಅವರು ಇಂದು ಬಿಜೆಪಿ ಯುವಮೋರ್ಚಾದ ಪದಾಧಿಕಾರಿಗಳೊಡನೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ವಯಂ ಆರ್ಥಿಕ ಶಿಸ್ತು ಬೆಳೆಸಿಕೊಳ್ಳುವಂತೆ ಎಷ್ಟೇ ಭಾರಿ ಸಲಹೆ ನೀಡಿದರೂ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಪ್ರೋ.ವೀರಭದ್ರಪ್ಪ ಆಗಲಿ, ಹಾಲಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿಯಾಗಲಿ, ಕುಲಸಚಿವರಾಗಲೀ ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ವಿಶ್ವವಿದ್ಯಾಲಯದ ಸೇವೆಯಿಂದ ನಿವೃತ್ತರಾದವರಿಗೆ ಪಿಂಚಣಿ ನೀಡಲಾಗದಷ್ಟು ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದೆ. ಪ್ರಸ್ತುತ ಸಾಲಿನಲ್ಲಿ ವಿವಿಯಿಂದ ೪೭ ಕೋಟಿ ರೂಪಾಯಿ ಖೋತಾ ಬಜೆಟ್ ಮಂಡನೆಯಾಗಿದೆ. ಇದನ್ನು ತುಂಬಿಕೊಳ್ಳಲು ಆಡಳಿತ ಮಂಡಳಿ ವಿದ್ಯಾರ್ಥಿಗಳಿಂದ ವಿವಿಧ ಬಾಬತ್ತಿನ ಹೆಸರಿನಲ್ಲಿ ಹೆಚ್ಚಿನ ಶುಲ್ಕ ಆಕರಿಸುತ್ತಿದೆಯಾದರೂ ಈ ಹಣದ ಸದ್ಭಳಕೆಯಾಗುತ್ತಿಲ್ಲ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಒಂದನ್ನು ಬಿಟ್ಟರೆ ಬೇರೆ ಯಾವ ವಿಶ್ವವಿದ್ಯಾಲಯಗಳೂ ಡಿಜಿಟಲ್ ಮೌಲ್ಯ ಮಾಪನಕ್ಕೆ ಕೈಹಾಕಿಲ್ಲ. ಆದರೆ ಕುವೆಂಪು ವಿ.ವಿ. ಯಾವುದೇ ಚರ್ಚೆ, ತಯಾರಿ ಇಲ್ಲದೆ, ಯಾರ ಗಮನಕ್ಕೂ ತರದೇ ಇದನ್ನು ಅಳವಡಿಸಿಕೊಂಡಿದೆ. ವಿದ್ಯಾ ವಿಷಯಕ ಪರಿಷತ್ತಿನಲ್ಲಿಯೂ ಇದು ಅನುಮೋದನೆಯಾಗಿಲ್ಲ. ವಿವಿಗೆ ಈ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದ ಅವರು, ಡಿಜಿಟಲ್ ಮೌಲ್ಯಮಾಪನದ ಹೆಸರಿನಲ್ಲಿ ೨ಲಕ್ಷ ೮೦ಸಾವಿರ ಪುಟಗಳ ಉತ್ತರ ಪತ್ರಿಕೆಗಳನ್ನು ಸ್ಮ್ಯಾನ್ ಮಾಡಿಸಲಾಗುತ್ತಿದೆ. ಒಂದು ಪುಟಕ್ಕೆ ೫೪ ರೂ.ನಂತೆ ಸ್ಕ್ಯಾನಿಂಗ್ ಮಾಡಿಸಲಾಗುತ್ತಿದೆ. ಹಾಲಿ ವ್ಯವಸ್ಥೆಯಲ್ಲಿ ಮೌಲ್ಯ ಮಾಪಕರು ಉತ್ತರ ಪ್ರತಿಕೆಗಳನ್ನು ಬಾರ್ನಲ್ಲಿಯೂ ಕೂತು ಮೌಲ್ಯಮಾಪನ ಮಾಡಬಹುದು. ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಂಕಪಟ್ಟಿಯಲ್ಲಿನ ವ್ಯತ್ಯಾಸ ಗಮನಕ್ಕೆ ಬಂದಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮ್ಯಾನ್ಯೂವೆಲ್ ಮೌಲ್ಯಮಾಪನದಲ್ಲಿ ಒಂದು ಸೆಮಿಸ್ಟರ್ಗೆ ವಿವಿಗೆ ೧.೧ಕೋಟಿ ವೆಚ್ಚ ತಗುಲುತ್ತಿದ್ದರೆ ಡಿಜಿಟಲ್ ಮೌಲ್ಯಮಾಪನಕ್ಕೆ ನಾನ್ ಯುಜಿಸಿ ಮೌಲ್ಯಮಾಪಕರ, ಬಾಹ್ಯ ಪರೀಕ್ಷಕರ ದಿನಭತ್ಯೆ, ಸ್ಥಳೀಯ ಭತ್ಯೆ ಇತ್ಯಾದಿಗಳನ್ನು ಹೊರತುಪಡಿಸಿ, ೨.೩೬ ಕೋಟಿ ರೂ. ವೆಚ್ಚವಾಗುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಡಿಜಿಟಲ್ ಮೌಲ್ಯಮಾಪನದ ಹಿಂದೆ ವಿವಿ ಬಿದ್ಧಿರುವುದೇಕೆ ಎಂದು ಖಾರವಾಗಿ ಪ್ರಶ್ನಿಸಿದರು. ಇದರ ಹಿಂದೆ ಭ್ರಷ್ಟಾಚಾರದ ಸಂಶಯ ಮೂಡಿದೆ.

ಈಗಾಗಲೇ ಯುಯುಸಿಎಂಎಸ್ ಸಾಫ್ಟ್ವೇರ್ಗೆ ೪.೩೫ ಕೋಟಿ ರೂ.ವಿ.ವಿ. ಸಂದಾಯ ಮಾಡಿದೆ. ಅದರಿಂದ ವಿವಿ ಸರಿಯಾಗಿ ಕೆಲಸ ತೆಗೆದುಕೊಳ್ಳಬೇಕಾಗಿದೆ. ಆದರೆ ಅದರ ಬಗ್ಗೆ ನಿರ್ಲಕ್ಷ್ಯವಹಿಸಿ ವಿವಿ ೨೦೨೪-೨೫ರ ಅಂಕಪಟ್ಟಿಯನ್ನು ನೀಡಿಲ್ಲ. ಪದವಿ ಪೂರೈಸಿದ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗಳಿಗೆ ಅರ್ಜಿ ಹಾಕುವುದಾದರೂ ಹೇಗೆ ? ಎಂದ ಅವರು, ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ಗೆ ಕರೆದ ಟೆಂಡರ್ ಪ್ರಕ್ರಿಯೆ ಬಗ್ಗೆಯೂ ವಿವಿಧ ಮಾಹಿತಿ ನೀಡಿಲ್ಲ. ಇನ್ನೂ ಸಾಮಾನ್ಯ ವಿದ್ಯಾರ್ಥಿಗಳ, ಪಾಲಕರ ಕಥೆಯೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೂರು ತಿಂಗಳ ಹಿಂದೆಯೇ ಈ ಎಲ್ಲಾ ಅಂಶಗಳ ಬಗ್ಗೆ ಮಾಹಿತಿ ಕೋರಿದರೂ ವಿ.ವಿ. ತಮಗೆ ಮಾಹಿತಿ ನೀಡಿಲ್ಲ. ಈ ಬಗ್ಗೆ ವಿದ್ಯಾರ್ಥಿ ಸಂಘಟನೆಗಳು ವಿವಿ ಕುಲಪತಿಗಳಿಗೆ ಅನೇಕ ಭಾರಿ ಮನವಿ ನೀಡಿ, ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ. ಆಗುತ್ತಿರುವ ಲೋಪಗಳ ಬಗ್ಗೆ ಮತ್ತು ಭ್ರಷ್ಟಾಚಾರದ ಬಗ್ಗೆ ಗಮನ ಸೆಳೆದಿದ್ದಾರೆ. ಆದರೂ ಏನೂ ಕ್ರಮವಾಗಿಲ್ಲ. ತುಮಕೂರಿನ ವಿಶ್ವವಿದ್ಯಾಲಯ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ಆರ್ಥಿಕವಾಗಿ ಸದೃಢವಾಗಿದೆ. ಸ್ವಂತ ಬಲದಲ್ಲಿ ನಿಂತಿದೆ. ಆದರೆ ಕುವೆಂಪು ವಿ.ವಿ.ಗೆ ಇನ್ನೂ ಸ್ವಂತ ಬಲದಲ್ಲಿ ನಿಲ್ಲುವ ಸಾಮರ್ಥ್ಯ ಬಂದಿಲ್ಲ ಏಕೆ ? ಎಂದು ಪ್ರಶ್ನಿಸಿದರು. .
ವಿಶ್ವವಿದ್ಯಾಲಯ ಆರ್ಥಿಕವಾಗಿ ಸದೃಢಗೊಳ್ಳಲು ಸ್ವಯಂ ಆರ್ಥಿಕ ಶಿಸ್ತನ್ನು ಬೆಳೆಸಿಕೊಳ್ಳಬೇಕು. ಕುಲಪತಿಗಳು, ಕುಲಸಚಿವರು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲಸ ಮಾಡಬೇಕೇ ಹೊರತು, ಯಾರೋ ಹೇಳಿದ ಮಾತನ್ನು ಕೇಳಿಕೊಂಡು ಆಡಳಿತ ನಡೆಸಬಾರದು ಎಂದು ಸಲಹೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಯುವಮೋರ್ಚಾದ ಪ್ರಶಾಂತ್ ಕುಕ್ಕೆ, ಮಂಜುನಾಥ್, ಯುವರಾಜ್, ಪ್ರೀತಂ, ಅಜಯ್, ಅಭಿಷೇಕ್, ಶಶಿಕುಮಾರ್, ಚಂದ್ರಶೇಖರ್ ಎಸ್., ಸಂಜಯ್, ಸತೀಶ್ ಮೊದಲಾದವರಿದ್ದರು.