ಸಾಗರ : ಪಟ್ಟಣ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ನಿಲ್ಲಿಸಿದ್ದ ವಾಹನಗಳನ್ನು ತೆರವು ಮಾಡಿ. ಇಲ್ಲವಾದಲ್ಲಿ ಇಲಾಖೆ ವತಿಯಿಂದ ವಾಹನವನ್ನು ಠಾಣೆಗೆ ತೆಗೆದುಕೊಂಡು ಹೋಗಿ ಹರಾಜು ಹಾಕಲಾಗುತ್ತದೆ ಎಂದು ಪೊಲೀಸ್ ಉಪಾಧೀಕ್ಷಕ ಡಾ. ಬೆನಕ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಪೇಟೆ ಪೊಲೀಸ್ ಠಾಣೆ ವತಿಯಿಂದ ಶನಿವಾರ ಪಟ್ಟಣದ ವಿವಿಧ ಕಡೆ ಬೇಡ ಬ್ರೋ ಜಾಗೃತಾ ಅಭಿಯಾನ, ಸಂಚಾರಿ ನಿಯಮ ಪಾಲನೆ ಕುರಿತು ಅವರು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ರಸ್ತೆ ಪಕ್ಕದಲ್ಲಿ ಹಲವು ದಿನಗಳಿಂದ ವಾಹನ ನಿಲ್ಲಿಸಿ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದರೆ ಕೊಡುತ್ತಿದ್ದೀರಿ. ಮುಂದಿನ ನಾಲ್ಕೈದು ದಿನಗಳಲ್ಲಿ ವಾಹನ ನಿಮ್ಮ ಸ್ವಂತ ಜಾಗದಲ್ಲಿ ನಿಲ್ಲಿಸಿ ಕೊಳ್ಳಿ. ಈಗಾಗಲೆ ಎಲ್ಲಾ ವಾಹನಗಳಿಗೆ ನೋಟಿಸ್ ಅಂಟಿಸಿದೆ. ವಾಹನ ತೆರವು ಮಾಡದೆ ಹೋದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಮೋಟಾರ್ ಬೈಕ್ಗಳ ಕರ್ಕಶ ಶಬ್ದದ ಬಗ್ಗೆ ಸಾರ್ವಜನಿಕ ದೂರುಗಳಿದ್ದು ಶನಿವಾರ ಎರಡು ಮೂರು ಪ್ರಕರಣ ದಾಖಲಿಸಿದೆ. ಬೈಕ್ ಸೈಲೆನ್ಸರ್ಗಳಿಂದ ಕರ್ಕಶವಾಗಿ ಶಬ್ದ ಬರುತ್ತಿದ್ದರೇ ಅಂತಹ ಬೈಕ್ಗಳನ್ನು ಸೀಜ್ ಮಾಡಿ ಸೈಲೆನ್ಸರ್ ತೆಗೆದು ರೋಡ್ ರೋಲರ್ ಹತ್ತಿಸುವ ಜೊತೆಗೆ ಬೈಕ್ ಮಾಲೀಕರ ವಿರುದ್ದ ಕೇಸ್ ದಾಖಲಿಸಲಾಗುತ್ತದೆ. ನಗರದ ಕೆಲವು ರಸ್ತೆಗಳಲ್ಲಿ ವಾಹನವನ್ನು ಅಡ್ಡಾದಿಡ್ಡಿಯಾಗಿ

ನಿಲ್ಲಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಾಹನವನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದರೆ ವೀಲ್ಲಾಕ್ ಮಾಡಲಾಗುತ್ತದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಮಾದಕವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಸೂಚನೆ ನೀಡಿದ್ದು, ಯುವಜನರಿಗೆ ಮಾದಕವಸ್ತುಗಳ ಸೇವನೆಯಿಂದ ಆಗುವ ಮಾರಕ ಪರಿಣಾಮ ಕುರಿತು ‘ಬೇಡ ಬ್ರೋ’ ಅಭಿಯಾನ ಪ್ರಾರಂಭಿಸಿ ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ಸಿಬ್ಬಂದಿಗಳು ಮೈದಾನ,

ಬಸ್ನಿಲ್ದಾಣ ಇನ್ನಿತರೆ ಕಡೆ ಕುಳಿತ ಯುವಕರನ್ನು ಭೇಟಿ ಮಾಡಿ ಅವರಿಗೆ ಮಾದಕವ್ಯಸನ ಮುಕ್ತ ಸಮಾಜ ಕುರಿತು ಮಾಹಿತಿ ನೀಡಿ ಜಾಗೃತಿಗೊಳಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.