ಶಿವಮೊಗ್ಗ : ಪೌರಕಾರ್ಮಿಕರು ನಗರದ ಸ್ವಚ್ಛತೆ ಮತ್ತು ನಾಗರಿಕರ ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತಿದ್ದು, ಅವರ ಸೇವೆಗೆ ಸಮಾಜ ಸದಾ ಋಣಿಯಾಗಿರಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಶಿವಮೊಗ್ಗ ಮಹಾನಗರ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಯಾಂತ್ರೀಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗೆ ರಾಷ್ಟ್ರೀಯ ಕ್ರಿಯೆ (ನಮಸ್ತೆ)ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೌರ ಕಾರ್ಮಿಕರು ಯುಜಿಡಿ ಸಮಸ್ಯೆಗಳಿಂದ ಹಿಡಿದು ನಗರದ ನೈರ್ಮಲ್ಯ ನಿರ್ವಹಣೆವರೆಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾವು ಬೆಳಗ್ಗೆ ಎದ್ದು ದೇವರನ್ನು ನೆನೆಯುತ್ತಾ ಇಲ್ಲವೋ ಗೊತ್ತಿಲ್ಲ, ಆದರೆ ಪೌರ ಕಾರ್ಮಿಕರು ಬೆಳಗಾಗುವುದರಲ್ಲಿ ಇಡೀ ನಗರವನ್ನು ಸ್ವಚ್ಚಗೊಳಿಸಿ, ನಗರದ ನಾಗರೀಕರ ಆರೋಗ್ಯ ಕಾಪಾಡುವಲ್ಲಿ ಶ್ರಮಿಸುತ್ತಾರೆ ಎಂದರು.

ಪೌರ ಕಾರ್ಮಿಕರ ಕಲ್ಯಾಣ, ಸುರಕ್ಷತೆ ಹಾಗೂ ಕುಟುಂಬದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಯಾಂತಿಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗಾಗಿ ರೂಪಿಸಲಾದ ರಾಷ್ಟ್ರೀಯ ಯೋಜನೆ ಸ್ವಚ್ಛ ಭಾರತ ಅಭಿಯಾನದ ಭಾಗವಾಗಿದ್ದು, ಪೌರ ಕಾರ್ಮಿಕರ ಸುರಕ್ಷತೆ, ಆರೋಗ್ಯ ಮತ್ತು ಜೀವನಮಟ್ಟ ಸುಧಾರಣೆಗೆ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು.
ಹಿಂದೆ ಮಲ ಹೊರುವ ಪದ್ಧತಿ ಅಸ್ತಿತ್ವದಲ್ಲಿದ್ದರೂ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರಂತಹ ನಾಯಕರ ಪ್ರಯತ್ನದಿಂದ ಆ ಅಮಾನವೀಯ ಪದ್ಧತಿ ಅಂತ್ಯಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನದ ಮೂಲಕ ದೇಶದಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿ ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸಿದ ಪರಿಣಾಮ ದೇಶದಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ ಎಂದು ಹೇಳಿದರು.

ಚಿಂದಿ ಆಯುವವರ ಮಕ್ಕಳ ಶಿಕ್ಷಣಕ್ಕಾಗಿ ಶಿವಮೊಗ್ಗದಲ್ಲಿ ಆರಂಭವಾದ “ಮಾಧವ ನೆಲೆ” ಯೋಜನೆಯನ್ನು ಉದಾಹರಿಸಿದ ಅವರು, ಸಮಾಜಮುಖಿ ಸಂಘಟನೆಗಳ ಕಾರ್ಯದಿಂದ ಇಂದು ಆ ಮಕ್ಕಳು ಉನ್ನತ ಶಿಕ್ಷಣ ಪಡೆದು ಇಂಜಿನಿಯರ್, ವೈದ್ಯ ಹಾಗೂ ಐಎಎಸ್ ಅಧಿಕಾರಿಯಾಗುವ ಕನಸು ಕಾಣುತ್ತಿರುವುದು ಸಂತಸದ ಸಂಗತಿ ಎಂದರು.

ಭಾರತದಲ್ಲಿ ನೈರ್ಮಲ್ಯ ಕೆಲಸದ ವೇಳೆ ಸಂಭವಿಸುವ ಸಾವುಗಳ ಸಂಖ್ಯೆಯನ್ನು ಶೂನ್ಯಕ್ಕೆ ತರುವುದು ಎಲ್ಲಾ ನೈರ್ಮಲ್ಯ ಕೆಲಸಗಳನ್ನು ಕಡ್ಡಾಯವಾಗಿ ತರಬೇತಿ ಪಡೆದ ಔಪಚಾರಿಕ ಕುಶಲ ಕಾರ್ಮಿಕರಿಂದಲೇ ಮಾಡಿಸುವುದು, ಮಾನವನ ಮಲದೊಂದಿಗೆ ನೇರಸಂಪರ್ಕಕ್ಕೆ ಬರದಂತೆ ತಡೆಯುವುದು, ಯಾಂತ್ರೀಕೃತ ನೈರ್ಮಲ್ಯ ಸೇವೆಗಳ ಸುರಕ್ಷಿತ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಎಸ್ಆರ್ಯುಗಳನ್ನು ಬಲಪಡಿಸುವುದು, ನೈರ್ಮಲ್ಯ ಉಪಕರಣಗಳ ಖರೀದಿಗೆ ಬಂಡವಾಳ ಸಬ್ಸಿಡಿ ನೀಡುವ ಮೂಲಕ ಜೀವನೋಪಾಯಕ್ಕೆ ಬೆಂಬಲ ನೀಡುವುದು, ನೈರ್ಮಲ್ಯ ಸಂಬಂಧಿತ ಯೋಜನೆಗಳಿಗೆ ಆರ್ಥಿಕ ನೆರವು ಮತ್ತು ಸಬ್ಸಿಡಿ ನೆರವನ್ನು ನೀಡುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳು ಈ ನಮಸ್ತೆ ಯೋಜನೆಯಲ್ಲಿ ಅಡಗಿದೆ. ಯಾಂತ್ರಿಕ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಪಾಲಿಕೆ ಆಯುಕ್ತರಾದ ಕೆ.ಮಾಯಣ್ಣ ಗೌಡ ಮಾತನಾಡಿ, ನಮಸ್ತೆ ಕಾರ್ಯಕ್ರಮ ಎನ್ನುವುದು ಪೌರ ಕಾರ್ಮಿಕರಿಗೆ ಕೇವಲ. ಶಾಲು ಹಾಕಿ ನೆನೆಪಿನ ಕಾಣಿಕೆ ನೀಡಿ ಸನ್ಮಾನಕ್ಕೆ ಮಾತ್ರ ಸಿಮೀತ ಮಾಡುವುದಲ್ಲ, ಪೌರ ಕಾರ್ಮಿಕರು, ಚಿಂದಿ ಆಯುವವರು ಸೇರಿ ನಗರವನ್ನು ಸ್ವಚ್ಛಗೊಳಿಸುವವರ ಆರೋಗ್ಯ ಕಾಪಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಮಹಾನಗರ ಪಾಲಿಕೆಗಳ ನೌಕರರಸಂಘದ ಅಧ್ಯಕ್ಷ ಎನ್. ಗೋವಿಂದ ಅವರು ಪ್ರಸ್ತಾವಿಕವಾಗಿ ಮಾತನಾಡಿ, ನಮಸ್ತೆ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಸ್ಕ್ಯಾಂವೆಜರ್ಸ್ ಪುನರ್ವಸತಿಗಾಗಿ ಸ್ವಯಂ ಉದ್ಯೋಗ ಯೋಜನೆಯಲ್ಲಿ ಅನೇಕಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರಲಾಗಿದೆ. ಒಟ್ಟಾರೆ ನೈರ್ಮಲ್ಯ ಕಾರ್ಮಿಕರ ಬದುಕು ಹಸನುಗೊಳಿಸಲು ಈ ಯೋಜನೆಯನ್ನು ರೂಪಿಸಲಾಗಿದ್ದು, ಅವರ ಆಭ್ಯುದಯಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ನೈರ್ಮಲ್ಯ ಕೆಲಸದಲ್ಲಿ ತೊಡಗಿದವರನ್ನು ಗುರುತಿಸಿ ಸನ್ಮಾನಿಸಲಾಯಿತು. ಹಾಗೆಯೇ ಹಲವರಿಗೆ ಆರೋಗ್ಯ ಸುರಕ್ಷತೆಯ ಕಿಟ್ಗಳನ್ನು ನೀಡಲಾಯಿತು.ಕಾರ್ಯ ಕ್ರಮದಲ್ಲಿ ಪಾಲಿಕೆ ಉಪ ಆಯುಕ್ತರಾದ(ಅಭಿವೃದ್ಧಿ) ತೇಜು ಪ್ರಸಾದ್, ನಮಸ್ತೆ ನೋಡಲ್ ಅಧಿಕಾರಿಯೂ ಆದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪುಷ್ಪಾವತಿ, ಕಾರ್ಯ ಪಾಲಕ ಅಭಿಯಂತರರಾದ ಪ್ರಿಯಾ ಪಿ. ಇದ್ದರು.
ಪಾಲಿಕೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ (ಪರಿಸರ) ಪ್ರಭಾಕರ್ ಅವರ ಎಲ್ಲರನ್ನು ಸ್ವಾಗತಿಸಿದರು. ಕಾರ್ಯ ಕ್ರಮದ ನಂತರ ರಂಗ ಕಲಾವಿದ ಅಪರಂಜಿ ಶಿವರಾಜು ಅವರು ಸ್ಬಚ್ವತ ಸಿಬ್ಬಂದಿಗಳಿಗೆ ಆರೋಗ್ಯ ಮತ್ತು ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

ನೌಕರರ ಖಾಯಂ ಮಾಡಲು ಕ್ರಮ
ಪೌರ ಕಾರ್ಮಿಕರ ಹಿತ ರಕ್ಷಣೆಗೆ ಮಹಾನಗರ ಪಾಲಿಕೆ ಎಲ್ಲಾ ರೀತಿಯಲ್ಲೂ ಬದ್ದವಾಗಿದೆ. ಪೌರ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಎಲ್ಲಾ ರೀತಿಯಪರಿಕರಗಳನ್ನು ಕೂಡ ಒದಗಿಸಲಾಗಿದೆ. ಅವರ ಆರೋಗ್ಯದ ಸಲುವಾಗಿ ಆಯುಷ್ಮಾನ್ ಕಾರ್ಡ್ ಮಾಡುವಂತದ್ದು, ಆದುನಿಕ ಪರಿಕರಗಳನ್ನು ಕೊಟ್ಟು, ಅದಕ್ಕೆ ತಕ್ಕಂತೆ ಟ್ರೈನಿಂಗ್ ಕೊಡೋದು, ಆರೋಗ್ಯ ತಪಾಸಣೆ ಮಾಡುವುದು, ಇದರ ಜತೆಗೆ ಬಹಳ ಮುಖ್ಯವಾಗಿ, ನೌಕರರನ್ನು ಪರ್ಮನೆಂಟ್ ಮಾಡುವಂತಹ ಕೆಲಸವನ್ನು ಕೂಡ ನಮ್ಮ ಪಾಲಿಕೆಯ ವತಿಯಿಂದ ಸರ್ಕಾರದ ಗಮನಕ್ಕೆ ತಂದಿದೆ. ಈಗಾಗಲೇ ಅದಕ್ಕೂ ಕೂಡ ಒಂದು ಆದೇಶವನ್ನು ಕೂಡ ಹೊರಡಿಸಿದೆ, ಈಗ ಒಳಚರಂಡಿ ಸಿಬ್ಬಂದಿ ಜತೆಗೆ ಸ್ಮಶಾನದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳನ್ನು ಕಾಯಂಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಹೇಳಿದರು.