ಶಿವಮೊಗ್ಗ : ರಾಷ್ಟ್ರಭಕ್ತರ ಬಳಗ ಮತ್ತು ಶನೈಶ್ಚರ ದೇವಾಲಯ ಸಮಿತಿಯ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಎಸ್ಐಆರ್ ಪ್ರಕ್ರಿಯೆ ಯಶಸ್ವಿಗೊಳಿಸಲು ಬಿಎಲ್ಎ-೨ ಕಾರ್ಯಕರ್ತರ ಸಮಾವೇಶ ಹಾಗೂ ಎಸ್ಐಆರ್ ಮಾಹಿತಿ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಲಾಯಿತು.
ಉದ್ಘಾಟನೆ ನೆರವೇರಿಸಿ ಖ್ಯಾತ ವಕೀಲರು ಹಾಗೂ ಸಾಹಿತಿಗಳಾದ ಎಂ.ಆರ್.ಸತ್ಯನಾರಾಯಣ್ ಮಾತನಾಡಿ, ಎಸ್ಐಆರ್ ಯಾವುದೇ ಗ್ಯಾರಂಟಿಗಾಗಿ ಅಲ್ಲ, ಇದು ರಾಜಕಿಯ ಪಕ್ಷದ ಕಾರ್ಯಕ್ರಮವೂ ಅಲ್ಲ, ಜಗತ್ತಿನ ಅತೀದೊಡ್ಡ ಮತ್ತು ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಯಾರೊಬ್ಬರೂ ಕೂಡ ಮತದಾನದಿಂದ ವಂಚಿತರಾಗಬಾರದು ಮತ್ತು ಹೊರದೇಶದಿಂದ ಅನಧೀಕೃತವಾಗಿ ಬಂದು ಇಲ್ಲಿ ಮತಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಬಾರದು ಎನ್ನುವ ಉದ್ದೇಶಕ್ಕೆ ಕೇಂದ್ರ ಚುನಾವಣಾ ಆಯೋಗ ದೇಶದಾದ್ಯಂತ ಎಸ್ಐಆರ್ ಮತದಾರರ ಶೀಘ್ರ ಪರಿಷ್ಕರಣಾ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ಈ ಬಗ್ಗೆ ಸಾರ್ವಜನಿಕರಲ್ಲಿ ಅನೇಕ ಗೊಂದಲಗಳಿವೆ. ಗೊತ್ತಿಲ್ಲದವರು ತರಾತುರಿಯಲ್ಲಿ ಎಸ್ಐಆರ್ ಫಾರಂನ್ನು ಭರ್ತಿಮಾಡಿಕೊಟ್ಟರೆ ಅದು ಪಟ್ಟಿಯಿಂದ ಸಣ್ಣ ತಪ್ಪುಗಳಿದ್ದರೂ ಸಹ ಮತದಾನದಿಂದ ವಂಚಿತರಾಗುವ ಸಾಧ್ಯತೆ ಇದೆ. ಅದಕ್ಕಾಗಿ ರಾಷ್ಟ್ರಭಕ್ತರ ಬಳಗ ಎಸ್ಐಆರ್ ಫಾರಂನ್ನು ಭರ್ತಿಮಾಡುವ ಬಗ್ಗೆ ಮತ್ತಿತರ ಸಂಬಂಧಿತ ಪ್ರಕ್ರಿಯೆಗಳ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೊಂದು ರಾಷ್ಟ್ರದ ಹಿತದೃಷ್ಟಿಯಿಂದ ಅಭೂತಪೂರ್ವ ಕಾರ್ಯಕ್ರಮವಾಗಿದೆ ಎಂದರು.

ಏಕೆ ಎಸ್ಐಆರ್ಗೆ ಇಷ್ಟೊಂದು ವಿರೋಧ ? ವಿರೋಧಿಸುವವರು ಯಾರು ? ಎಂಬ ಪ್ರಶ್ನೆ ಮೂಡುತ್ತದೆ. ಪಶ್ಚಿಮ ಬಂಗಾಳ ಚುನಾವಣೆ ಸಂದರ್ಭದಲ್ಲಿ ಎಸ್ಐಆರ್ ಯಾಕೆ ಮಾಡಬೇಕು ಎಂಬುದು ಅರಿವಿಗೆ ಬಂದಿದೆ. ಇದೊಂದು ಮತಪಟ್ಟಿಯ ಶುದ್ಧೀಕರಣ ಪ್ರಕ್ರಿಯೆ. ಹೆದರುವಂತಹದ್ದೇನಿಲ್ಲ. ಎಸ್ಐಆರ್ನಲ್ಲಿ ಎರಡು ಸ್ಪಷ್ಟ ಉದ್ದೇಶವಿದೆ. ಯಾವ ಅರ್ಹ ಪ್ರಜೆಯೂ ಮತದಾನದಿಂದ ವಂಚಿತರಾಗಬಾರದು. ಯಾರು ಅನರ್ಹರಿದ್ದಾರೋ ಅವರನ್ನು ಹೊರಗಿಡಬೇಕು ಎಂಬುದು ಈ ಪ್ರಕ್ರಿಯೆಯ ಉದ್ದೇಶ. ಇದು ಕಾನೂನು ಬಾಹಿರವಲ್ಲ, ಕೆಲವು ರಾಜಕೀಯ ಪಕ್ಷಗಳಿಗೆ ಮತಹಾಕುವವರು ಬೇಕು ಅವರು ಹೇಗಾದರೂ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಮದರಸಾ, ಮಸೀದಿ ಮತ್ತು ಕೆಲವು ಸಮುದಾಯ ಭವನಗಳಲ್ಲಿ ಬಿಎಲ್ಓಗಳನ್ನು ಕರೆಯಿಸಿ ಅಲ್ಲಿಯೇ ಫಾರಂಗಳನ್ನು ತುಂಬಿ ಒತ್ತಾಯಪೂರ್ವಕವಾಗಿ ಸೇರ್ಪಡೆಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದು ಅಕ್ರಮವಾಗಿದೆ ಬಿಎಲ್ಓಗಳಿಗೆ ಜವಾಬ್ದಾರಿ ಇರುತ್ತದೆ. ಈ ಕೆಲಸವನ್ನು ಅವರು ಶ್ರದ್ಧಾಪೂರ್ವಕವಾಗಿ ತಮ್ಮ ಕರ್ತವ್ಯವನ್ನು ಮಾಡಬೇಕು. ಬಿಎಲ್ಎಗಳಿಗೂ ಅನೇಕ ಜವಾಬ್ದಾರಿ ಇರುತ್ತದೆ. ಪಕ್ಷ ಯಾವುದೇ ಇರಲಿ, ಅನರ್ಹ ಮತದಾರ ಸೇರ್ಪಡೆಗೊಂಡಿದ್ದರೆ ತಕ್ಷಣ ಅವರು ಜಾಗೃತರಾಗಿ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಬೇಕು. ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರಜೆಗಳೂ ಕೂಡ ತಮ್ಮ ಜವಾಬ್ದಾರಿಯನ್ನು ಅರಿತು ಪ್ರಾಮಾಣಿಕವಾಗಿ ವರ್ತಿಸಬೇಕು. ಈ ವ್ಯವಸ್ಥೆಯನ್ನು ಕಲುಷಿತಗೊಳಿಸಿದರೆ ಪ್ರಜಾಪ್ರಭುತ್ವ ಕುಂಠಿತಗೊಳ್ಳುತ್ತದೆ. ಮತದಾರ ನಿಷ್ಕ್ರೀಯನಾದರೆ ಪ್ರಜಾಪ್ರಭುತ್ವವೇ ನಿಷ್ಕ್ರೀಯವಾಗುತ್ತದೆ. ಒಂದೇ ಮಾತರಂ, ಜನಗಣಮನ ದೇಶಭಕ್ತಿಗೀತೆಯನ್ನೇ ವಿರೋಧಿಸಿದವರು ನಮ್ಮ ಭಾರತದಲ್ಲಿದ್ದಾರೆ. ದೇಶ ವಿಭಜನೆಯಾದಾಗ ಈ ದೇಶದಲ್ಲೇ ಇದ್ದ ಮುಸ್ಲಿಂರು ಇಲ್ಲೇ ಇದ್ದರೆ ಇವರು ದೇಶವನ್ನು ಪ್ರೀತಿಸುವುದಿಲ್ಲವೆಂದು ಅಂಬೇಡ್ಕರ್ ಅವರೇ ಹೇಳಿದ್ದರು. ಅದು ಅನೇಕ ಸಂದರ್ಭಗಳಲ್ಲಿ ದೇಶದ ಅಭದ್ರತೆಯ ಯತ್ನಗಳು ನಡೆದಾಗ ಬಹಿರಂಗವಾಗಿದೆ. ಈ ನಿಟ್ಟಿನಲ್ಲಿ ದೇಶದ ಸುರಕ್ಷತೆಯ ದೃಷ್ಟಿಯಿಂದ ಎಸ್ಐಆರ್ ಅಗತ್ಯವಿದೆ ಎಂದರು.

ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ಎಸ್ಐಆರ್ ರಾಜಕೀಯ ಚಟುವಟಿಕೆಯಲ್ಲ, ಅನೇಕ ಮುಸ್ಲಿಂ ಸಮುದಾಯದವರು ಎರಡು-ಮೂರು ಕಡೆಗಳಲ್ಲಿ ಮತ ಹಾಕಿದ್ದಾರೆ ಎಂಬ ದೂರು ಕೇಳಿಬರುತ್ತಿದೆ. ಅದಕ್ಕೆ ಉತ್ತರವೇ ಎಸ್ಐಆರ್. ಕಾಂಗ್ರೆಸ್ಸಿನವರು ಒಂದೇ ಸಮುದಾಯದ ಮತದಾರರಿಗೆ ಒಂದೆಡೆ ಕೂಡಿಹಾಕಿ ಬಿಎಲ್ಓಗಳನ್ನು ಅಲ್ಲಿಗೇ ಕರೆಯಿಸಿ ಅವರೇ ಫಾರಂ ತುಂಬಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದಾರೆ. ಕಾಂಗ್ರೆಸ್ ಸರ್ಕಾರವೇ ಇದಕ್ಕೆ ಆದೇಶ ನೀಡಿದೆ ಎಂಬ ಸಂಶಯ ಕಾಡುತ್ತಿದೆ. ಬಿಹಾರ, ಪಶ್ಚಿಮ ಬಂಗಾಳ, ಹರಿಯಾಣ ಭಾಗದಲ್ಲಿ ಹಿಂದೆ ಕಾಂಗ್ರೆಸ್ ಈ ರೀತಿ ಮಾಡಿಯೇ ಅಧಿಕಾರಕ್ಕೆ ಬಂದಿತ್ತು. ಪಶ್ಚಿಮ ಬಂಗಾಳದ ಚುನಾವಣೆಯ ನಂತರ ೨೫ಲಕ್ಷಕ್ಕೂ ಹೆಚ್ಚು ಬಾಂಗ್ಲಾ ವಲಸಿಗರು ಸಾಲುಗಟ್ಟಿ ಬಾಂಗ್ಲಾಕ್ಕೆ ವಾಪಾಸ್ಸು ತೆರಳುತ್ತಿರುವುದನ್ನು ನಾವು ನೋಡಿದ್ದೇವೆ. ಅಲ್ಲಿ ೯೩ಲಕ್ಷ ಅನಧೀಕೃತ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿತ್ತು. ಎಸ್ಐಆರ್ ಪ್ರಕ್ರಿಯೆ ಈ ದೇಶದ ಪ್ರಜೆ ಹೌದಾ ಅಥವಾ ಅಲ್ಲವೇ ಎನ್ನುವುದನ್ನು ದೃಢಪಡಿಸುತ್ತದೆ. ಬಿಎಲ್ಓಗಳು ಮನೆ ಮನೆಗೆ ಬರಬೇಕು. ಬಂದಿಲ್ಲದಿದ್ದರೆ ಕಾರ್ಯಕರ್ತರೇ ಅವರಿಗೆ ನೆರವು ನೀಡಿ ಎಸ್ಐಆರ್ ಪ್ರಕ್ರಿಯೆಗೆ ಸಹಕರಿಸಬೇಕು. ಬಿಎಲ್ಎ-೨ ಅವರಿಗೆ ಎಲ್ಲಾ ವಾರ್ಡ್ಗಳಲ್ಲೂ ರಾಷ್ಟ್ರಭಕ್ತರ ಬಳಗ ತರಬೇತಿ ನೀಡಿದ್ದು, ಅಧಿಕೃತವಾಗಿ ಟ್ಯಾಗನ್ನು ಕೂಡ ನೀಡಿದೆ. ಆ ಕಾರ್ಯಕರ್ತರು ಬಿಎಲ್ಓ ಜೊತೆಗೆ ಬಂದು ಎಸ್ಐಆರ್ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸುತ್ತಾರೆ. ಒಂದೇ ಒಂದು ಮತ ಹೋದರೂ ಅದು ದೇಶಕ್ಕೆ ದೊಡ್ಡ ನಷ್ಟ. ಅದಕ್ಕಾಗಿ ಎಸ್ಐಆರ್ ಫಾರಂನ್ನು ತಿಳಿದವರ ಬಳಿಯೇ ಮಾಹಿತಿ ಪಡೆದು ಭರ್ತಿಮಾಡಿ ಅದಕ್ಕಾಗಿಯೇ ಇಲ್ಲಿ ಸಲಹಾ ಕೇಂದ್ರವನ್ನು ಸ್ಥಾಪಿಸಿದ್ದೇವೆ. ಬೆಳಿಗ್ಗೆ ೯ ರಿಂದ ರಾತ್ರಿ ೯ರ ವರೆಗೆ ಈ ಸೇವಾ ಕೇಂದ್ರ ಜುಲೈ ೨೯ರ ವರೆಗೆ ಕಾರ್ಯಾಚರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಈ. ವಿಶ್ವಾಸ್, ಕೆ.ಈ.ಕಾಂತೇಶ್, ಸುವರ್ಣಾಶಂಕರ್, ಶ್ರೀಕಾಂತ್, ಬಾಲು, ಜಾದವ್, ನವುಲೆ ಈಶ್ವರಪ್ಪ, ಶನೈಶ್ಚರ ದೇವಾಲಯ ಸಮಿತಿಯ ಪ್ರಮುಖರಾದ ವಿ.ರಾಜು, ಸ.ನ.ಮೂರ್ತಿ, ವೆಂಕಟೇಶ್ ಮತ್ತಿತರರಿದ್ದರು.