ಶಿವಮೊಗ್ಗ : ಮಾನವೀಯತೆಯನ್ನೇ ಪ್ರಶ್ನಿಸುವ ಹೃದಯವಿದ್ರಾವಕ ಘಟನೆಯೊಂದು ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗವಟೂರು ಹೊಳೆ ಸಮೀಪದ ಬಿಳಕಿ ಗ್ರಾಮದ ತೆಂಕೋಲ್ ಬಸ್ ನಿಲ್ದಾಣದಲ್ಲಿ ನವಜಾತ ಹೆಣ್ಣು ಮಗುವನ್ನು ಚೀಲದಲ್ಲಿ ಕಟ್ಟಿ, ಬಾಯಿಗೆ ಫೀಡಿಂಗ್ ಬಾಟಲ್ ಇಟ್ಟು ಹೋಗಿರುವ ಅಮಾನವೀಯ ಘಟನೆ ನಡೆದಿದೆ.

ಭಾನುವಾರ ರಾತ್ರಿ ಬಸ್ ನಿಲ್ದಾಣದ ಬಳಿ ಸಾಗುತ್ತಿದ್ದ ದಾರಿಹೋಕರಿಗೆ ಮಗುವಿನ ಅಳುವಿನ ಶಬ್ದ ಕೇಳಿಬಂದಿದೆ. ಮೊದಲಿಗೆ ಅದು ನಾಯಿ ಅಥವಾ ಬೆಕ್ಕಿನ ಮರಿ ಇರಬಹುದೆಂದು ಅನುಮಾನಗೊಂಡು ಹತ್ತಿರ ಹೋಗಿ ನೋಡಿದಾಗ, ಅನುಮಾನಸ್ಪದ ಚೀಲದೊಳಗೆ ನವಜಾತ ಹೆಣ್ಣು ಮಗು ಇರುವುದನ್ನು ಕಂಡು ಬೆಚ್ಚಿಬಿದ್ದರು. ಕೂಡಲೇ ಅವರು ರಿಪ್ಪನ್ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಪಿಎಸ್ಐ ರಾಜು ರೆಡ್ಡಿ ಮತ್ತು ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ರಾತ್ರಿ ಸುಮಾರು ೯ರ ಅಸುಪಾಸು ವೇಳೆಗೆ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ.

ಆಂಬ್ಯುಲೆನ್ಸ್ ಮೂಲಕ ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಅಗತ್ಯ ಚಿಕಿತ್ಸೆ ನೀಡಿದ್ದಾರೆ. ವೈದ್ಯರ ಪ್ರಾಥಮಿಕ ಪರೀಕ್ಷೆಯಲ್ಲಿ ಮಗು ಆರೋಗ್ಯವಾಗಿರುವುದು ತಿಳಿದುಬಂದಿದೆ. ಹೆಚ್ಚಿನ ಆರೈಕೆಗೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನೆ ಸಂಬಂಧ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಂಡಿದ್ದಾರೆ.
ಮಗು ಯಾರದ್ದು ಮತ್ತು ಯಾವ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾರೆ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.