ಸಾಗರ : ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿಸಿ ಜೂ. ೨೮ರಂದು ರಾಷ್ಟ್ರಭಕ್ತರ ಬಳಗ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ೧೦ಕ್ಕೆ ಪೊಲೀಸ್ ಸ್ಟೇಷನ್ ವೃತ್ತದಲ್ಲಿ ನಡೆಯುವ ಬೃಹತ್ ಪ್ರತಿಭಟನಾ ಸಭೆಯಲ್ಲಿ ಬಂಗಾರಮಕ್ಕಿಯ ಮಾರುತಿ ಗುರೂಜಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ರಾಷ್ಟ್ರಭಕ್ತರ ಬಳಗದ ಪ್ರಮುಖ ಕೆ.ಇ.ಕಾಂತೇಶ್ ತಿಳಿಸಿದರು.
ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಫ್ರೀಡಂ ಪಾರ್ಕ್ನಲ್ಲಿ ವಿವಿಧ ಮಠಾಧೀಶರು ಕೆ.ಎಸ್.ಈಶ್ವರಪ್ಪ ಅವರಿಗೆ ಹೋರಾಟದ ಧ್ವಜ ಹಸ್ತಾಂತರ ಮಾಡುವ ಮೂಲಕ ಬೃಹತ್ ಜನಾಂದೋಲನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಪೊಲೀಸ್ ಸ್ಟೇಷನ್ ವೃತ್ತದಲ್ಲಿ ಬೃಹತ್ ಸಭೆಯ ನಂತರ ಸಿಗಂದೂರು ಕ್ಷೇತ್ರಕ್ಕೆ ತೆರಳಿ ದೇವಿ ದರ್ಶನ ಪಡೆಯಲಾಗುತ್ತದೆ. ಮಧ್ಯಾಹ್ನ ೩ಕ್ಕೆ ಕಾರ್ಗಲ್ ಕೆಪಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮುಖ್ಯ ಅಭಿಯಂತರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಸುಮಾರು ೧೧೫ ಬಸ್ಗಳಲ್ಲಿ ಸಾವಿರಾರು ಜನ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಗರದ ವಿವಿಧ ಸಂಘಟನೆಗಳು ಸಹ ಸಹಕಾರ ನೀಡಲಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಪರಿಸರವಿರೋಧಿ ಯೋಜನೆಯಾಗಿದ್ದು, ರಾಷ್ಟ್ರಭಕ್ತ ಬಳಗ ಲಾಗಾಯ್ತಿನಿಂದ ಇದನ್ನು ವಿರೋಧಿಸಿಕೊಂಡು ಬರುತ್ತಿದೆ. ಶಿವಮೊಗ್ಗದಲ್ಲಿ ಅಹೋರಾತ್ರಿ ಧರಣಿ ಸೇರಿದಂತೆ ಅನೇಕ ಪ್ರತಿಭಟನೆ ನಡೆಸಿ ಯೋಜನೆ ಕೈಬಿಡಲು ಸರ್ಕಾರಕ್ಕೆ ಒತ್ತಾಯಿಸಿದೆ ಎಂದರು.

ರಾಜ್ಯ ಸರ್ಕಾರ ಆರಂಭದಲ್ಲಿ ೩೮೦೦ ಕೋಟಿ ರೂ. ಯೋಜನಾ ವೆಚ್ಚ ತಯಾರಿಸಿ ಈಗ ೧೦೫೦೦ ಕೋಟಿ ರೂ.ಗೆ ಹೆಚ್ಚಿಸಿದೆ. ಯೋಜನೆ ಕೈಬಿಡುವಂತೆ ಪರಿಸರ ಸಂಘಟನೆಗಳು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು ತಡೆಯಾಜ್ಞೆ ಇದೆ. ಆದರೂ ಕೇಂದ್ರ ಪರಿಸರ ಅಧ್ಯಯನ ಸಮಿತಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು ಅನೇಕ ಅನುಮಾನಕ್ಕೆ ಕಾರಣವಾಗಿದೆ. ಈಗಾಗಲೇ ಮೇಘಾ ಇಂಜಿನಿಯರಿಂಗ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ರಾಜ್ಯ ಸರ್ಕಾರ ತರಾತುರಿಯಲ್ಲಿ ಪರಿಸರ ವಿರೋಧಿ ಯೋಜನೆ ಕೈಗೆತ್ತಿಕೊಳ್ಳುತ್ತಿರುವುದರ ಹಿಂದೆ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ರಾಷ್ಟ್ರಭಕ್ತ ಬಳಗದ ಶ್ರೀಕಾಂತ್ ಮಾತನಾಡಿ, ಪಶ್ಚಿಮಘಟ್ಟ ಪರಿಸರಸೂಕ್ಷ್ಮ ಪ್ರದೇಶವಾಗಿದ್ದು ಹೊಸಹೊಸ ಯೋಜನೆಗಳು ಬೇಡ ಎಂದು ವರದಿಗಳು ತಿಳಿಸಿವೆ. ಅದರಲ್ಲಿಯೂ ಶರಾವತಿ ಪಂಪ್ಡ್ ಸ್ಟೋರೇಜ್ಗೆ ಆಯ್ಕೆ ಮಾಡಿಕೊಂಡಿರುವ ಪ್ರದೇಶ ಅಳಿವಿನಂಚಿನಲ್ಲಿರುವ ಸಿಂಗಳೀಕದ ವಾಸಸ್ಥಳವಾಗಿದ್ದು, ಶರಾವತಿ ನದಿ ಪಾತ್ರದಲ್ಲಿದೆ. ಯೋಜನೆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಮಾಹಿತಿ ನೀಡುತ್ತಿಲ್ಲ. ಡಿಪಿಆರ್ ಕೇಳಿದರೆ ಅದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದು ಎನ್ನುತ್ತಿದೆ. ವಿದ್ಯುತ್ ಉತ್ಪಾದನೆ ನಂತರ ಅದನ್ನು ಸಾಗಿಸಲು ಕೇಬಲ್ ಎಳೆಯಲು ಎಷ್ಟು ಪ್ರಮಾಣದ ಅರಣ್ಯ ನಾಶವಾಗುತ್ತದೆ ಎನ್ನುವುದನ್ನು ಹೇಳುತ್ತಿಲ್ಲ. ಕೇಂದ್ರ ವನ್ಯಜೀವಿ ವಿಭಾಗದ ಅನುಮತಿಯನ್ನೇ ಪಡೆಯದೆ ಟೆಂಡರ್ ಕರೆಯಲಾಗಿದೆ. ಪರಿಸರಕ್ಕೆ ಮಾರಕವಾಗಿರುವ ಯೋಜನೆ ಕೈಬಿಡುವವರೆಗೂ ರಾಷ್ಟ್ರಭಕ್ತ ಬಳಗ ಹೋರಾಟ ನಡೆಸಲಿದೆ ಎಂದರು.
ಗೋಷ್ಟಿಯಲ್ಲಿ ವಿಶ್ವಾಸ್ ಹಾಜರಿದ್ದರು.